ಜಿಲ್ಲೆ

ಮೈಸೂರು: ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತ

ಮಂಜುನಾಥ ತಿಮ್ಮಯ್ಯ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೇ ಸಾಗಿದೆ. ಇತರ ಆಹಾರ ಪದಾರ್ಥ ತಯಾರಿಕೆಯಲ್ಲೂ ಇದರ ಉಪಯೋಗ ಮುಂದುವರಿದಿದೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ!

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಇಲ್ಲಿ ಕವಡೆ ಕಾಸಿನ ಬೆಲೆಯೂ ಇಲ್ಲದಂತಾಗಿದ್ದು, ನಗರದ ಬೀದಿ ಬದಿಯ ಫಾಸ್ಟ್ ಫುಡ್ ಅಂಗಡಿಯಲ್ಲೂ ಇದು ಅತಿ ಹೆಚ್ಚು ಬಳಕೆಯಾಗುತ್ತಿದ್ದು, ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ.

ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ:

ಪ್ಲಾಸ್ಟಿಕ್ ಹಾಳೆ ಬಳಸಿ ತಯಾರಿಸಿದ ಇಡ್ಲಿ ಅಸುರಕ್ಷಿತ ಎನ್ನುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಹಾಳೆ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ (ಕ್ಯಾನ್ಸರ್‌ಕಾರಕ) ಅಂಶ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಜತೆಗೆ, ಇದು ಕ್ಯಾನ್ಸರ್‌ಗೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇಲ್ಲ. ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸುವುದು ಸೇರಿ ವಿವಿಧ ಕ್ರಮವನ್ನು ಮೈಸೂರು ಮಹಾನಗರಪಾಲಿಕೆ ತೆಗೆದುಕೊಳ್ಳುತ್ತಿದೆ. ಆದರೆ, ಇದು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ಅಂದಾಜು 750 ಹೋಟೆಲ್, ರೆಸ್ಟೋರೆಂಟ್‌ಗಳಿವೆ. ಬೇಕರಿ, ಸ್ವೀಟ್‌ಶಾಪ್, ಟಿಫಾನಿಸ್, ಟೀ ಕಾಫಿ ಅಂಗಡಿಗಳು, ಚಾಟ್ಸ್ ಅಂಗಡಿಗಳಿವೆ. ಈ ಪೈಕಿ ಸುಮಾರು 300 ಫಾಸ್ಟ್‌ಫುಡ್ ಅಂಗಡಿಗಳಿವೆ.

ಇದರಲ್ಲಿ ಫಾಸ್ಟ್‌ಫುಡ್‌ಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆ ಈಗಲೂ ಕಂಡುಬರುತ್ತಿದೆ. ಇಡ್ಲಿಯೊಂದಿಗೆ ರಾಗಿ ರೊಟ್ಟಿ, ಅಕ್ಕಿರೊಟ್ಟಿ, ಪೂರಿ ಸೇರಿದಂತೆ ಕೆಲ ಆಹಾರ ಪದಾರ್ಥ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಅನ್ನು ಉಪಯೋಗಿಸಲಾಗುತ್ತಿದೆ. ಈ ಹಿಂದೆ ಬಟ್ಟೆ ಉಪಯೋಗಿಸಿ ಇಡ್ಲಿ ಮತ್ತು ಇತರ ಆಹಾರ ಪದಾರ್ಥವನ್ನು ತಯಾರಿಸುತ್ತಿದ್ದರು. ಇದೀಗ ಪ್ಲಾಸ್ಟಿಕ್ ಹಾಳೆಗಳ ಮೊರೆ ಹೋಗಿದ್ದಾರೆ.

ಕಾಫಿ-ಚಹಾಕ್ಕೂ ಪ್ಲಾಸ್ಟಿಕ್ ಚೀಲ ಬಳಕೆ

ಅಲ್ಲದೆ, ಬಿಸಿಯಾದ ಅನ್ನ, ಸುಡುವ ಸಾಂಬಾರ್, ಹಬೆಯಾಡುವ ಕಾಫಿ-ಟೀ, ಹಾಲು ಮುಂತಾದವನ್ನು ಹೋಟೆಲ್‌ಗಳು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಪಾರ್ಸೆಲ್ ಕೊಡುವುದ ಸಹ ಸಾಮಾನ್ಯವಾಗಿದೆ. ಕಾಫಿ-ಟೀ ಅನ್ನು ಪ್ಲಾಸ್ಟಿಕ್‌ನಿಂದ ಮಾಡಿದ ಲೋಟಗಳಲ್ಲಿ ನೀಡಲಾಗುತ್ತಿದೆ.

ಬಿಸಿಯಾದ ಆಹಾರದ ಪಾರ್ಸೆಲ್‌ಗಾಗಿ ಪ್ಲಾಸ್ಟಿಕ್ ಬಳಸುವುದೇ ಅಪಾಯಕಾರಿ. ಅದರಲ್ಲೂ ಬಹುತೇಕ ಹೋಟೆಲ್, ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ಏಕಬಳಕೆಯ ಅಥವಾ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲ ಬಳಸಲಾಗುತ್ತಿದ್ದು, ಪ್ಲಾಸ್ಟಿಕ್‌ಗಳಲ್ಲಿರುವ ವಿಷಕಾರಿ ಅಂಶಗಳು ಜನರ ಹೊಟ್ಟೆ ಸೇರುತ್ತಿವೆ.

ಶಾಖಕ್ಕೆ ಒಡ್ಡಿದಾಗ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತವೆ. ಬಿಸಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿದಾಗ ಎರಡರ ನಡುವೆ ಅತಿ ಹೆಚ್ಚಿನ ರಾಸಾಯನಿಕ ವಿನಿಮಯ ನಡೆಯುತ್ತದೆ. ಅದರಿಂದ ಆಹಾರ ಪದಾರ್ಥದ ಸ್ವರೂಪವೇ ಪರಿವರ್ತನೆಯಾಗುವ ಸಾಧ್ಯತೆ ಇದೆ. ಆಹಾರ ಪದಾರ್ಥಗಳೊಂದಿಗೆ ಅಪಾಯಕಾರಿ ರಾಸಾಯನಿಕಗಳು ಸೇರಿ ಅನೇಕ ತರಹದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

ಆರೋಗ್ಯದ ಮೇಲೆ ದುಷ್ಪರಿಣಾಮ:

ಇಡ್ಲಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಲು ಬಳಸುವ ಪ್ಲಾಸ್ಟಿಕ್‌ನಲ್ಲಿ ಪಾಲಿ ಇಥಿಲಿನ್ ಎಂಬ ರಾಸಾಯನಿಕ ಅಂಶವಿದೆ. ಇಡ್ಲಿಯನ್ನು ಬೇಯಿಸುವಾಗ ಕ್ಯಾನ್ಸರ್‌ಕಾರಕ ಅಂಶವು ಇಡ್ಲಿಗೆ ಸೇರುವುದರಿಂದ ಇಂತಹ ಆಹಾರ ಪದಾರ್ಥ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಹಾಳೆ, ಕವರ್‌ಗಳನ್ನು ಬಳಕೆ ನಿಲ್ಲಿಸುವಂತೆ ಬೀದಿ ಬದಿ ವ್ಯಾಪಾರಿಗಳು, ಹೋಟೆಲ್, ಕ್ಯಾಂಟೀನ್ ಹಾಗೂ ಇನ್ನಿತರ ಆಹಾರ ಉದ್ದಿಮೆದಾರರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದು ಕಂಡು ಬಂದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಪ್ರಕಾರ ಅಂತಹ ವ್ಯಾಪಾರಿಗಳಿಗೆ ದಂಡ ಮತ್ತು ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ಹೋಟೆಲ್‌ಗೆ 5,000ರಿಂದ 10 ಸಾವಿರ ರೂ. ಮತ್ತು ಫಾಸ್ಟ್‌ಫುಡ್ ಅಂಗಡಿಯವರಿಗೆ 2,000ರಿಂದ 5,000 ರೂ.ವರೆಗೆ ದಂಡ ಹಾಕಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

ನಗರದಲ್ಲಿ ಹೆಚ್ಚಿನ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸುತ್ತಿಲ್ಲ. ಬಳಸುತ್ತಿದ್ದರೆ ಅದು ಖಂಡಿತಾ ತಪ್ಪು. ಬಹುತೇಕ ಹೋಟೆಲ್‌ಗಳು ನಾನ್‌ಸ್ಟಿಕ್ ಪ್ಲೇಟ್ ಬಳಸುತ್ತಿವೆ ಅಥವಾ ಪ್ಲೇಟ್‌ಗಳಲ್ಲಿ ಬಟ್ಟೆಗಳನ್ನು ಬಳಸಿ ಇಡ್ಲಿ ಮಾಡಲಾಗುತ್ತಿದೆ. ಎಲ್ಲರೂ ಇಡ್ಲಿ ಬೇಯಿಸಲು ಇದೇ ವಿಧಾನ ಅನುಸರಿಸಬೇಕು ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿದರು.

ಪೇಪರ್ ಕಪ್ ಸುರಕ್ಷಿತವಲ್ಲ

ಟೀ, ಪಾನೀಯಗಳನ್ನು ಕಾಗದದಿಂದ ತಯಾರಿಸಿದ ಲೋಟ ಅಥವಾ ಕಪ್‌ಗಳಲ್ಲಿ ನೀಡಲಾಗುತ್ತಿದೆ. ಈ ಪೇಪರ್ ಕಪ್‌ಗಳು ಕೂಡ ಸುರಕ್ಷಿತವಲ್ಲ ಎಂದು ಸಂಶೋಧಕರು ಹೇಳುತ್ತಾರೆ.

ಬಿಸಿಯನ್ನು ತಾಳಿಕೊಳ್ಳಲು, ಸೋರಿಕೆ ತಡೆಯಲು ಈ ಕಾಗದದ ಲೋಟ, ಕಪ್‌ಗಳಲ್ಲಿ ತೆಳುವಾದ ಪ್ಲಾಸ್ಟಿಕ್‌ನ ಪದರ ಹಾಕಲಾಗುತ್ತದೆ. ಬಿಸಿ ಚಹಾ, ಪಾನೀಯವನ್ನು ಕಪ್‌ಗೆ ಹಾಕಿದಾಗ ಅದರ ಬಿಸಿಗೆ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಕರಗಿ ಚಹಾ, ಪಾನೀಯದೊಂದಿಗೆ ಬೆರೆಯುತ್ತವೆ. ಇದು ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧನೆಯಲ್ಲಿ ರುಜುವಾತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುದ್ರಿತ ಹಾಳೆಗಳಲ್ಲಿ ಬಜ್ಜಿ, ಬೋಂಡಾ:

ಬಜ್ಜಿ, ಬೋಂಡಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು, ತಿಂಡಿ-ತಿನಿಸುಗಳನ್ನು ಹಳೆಯ ಪತ್ರಿಕೆ, ನಿಯತಕಾಲಿಕೆ ಸೇರಿದಂತೆ ಮುದ್ರಿತ ಕಾಗದಗಳಲ್ಲಿ ಹಾಕಿ ಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಆರೋಗ್ಯದ ದೃಷ್ಟಿಯಿಂದ ಇದು ಕೂಡ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

ಪತ್ರಿಕೆಗಳಲ್ಲಿ ಮತ್ತು ಮುದ್ರಿತ ಹಾಳೆಗಳಲ್ಲಿ ಇರುವ ಶಾಯಿಯು ವಿಷಕಾರಿ. ಶಾಯಿ ತಯಾರಿಕೆಗೆ ಸೀಸದಂತಹ ಲೋಹಗಳನ್ನು ಬಳಸಲಾಗುತ್ತಿದ್ದು, ಇದು ಆರೋಗ್ಯಕ್ಕೆ ಅಪಾಯಕಾರಿ. ಬಿಸಿ ಅಥವಾ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಮುದ್ರಿತ ಕಾಗದದಲ್ಲಿ ಕಟ್ಟಿದಾಗ, ಅದರ ಶಾಖಕ್ಕೆ ಶಾಯಿಯಲ್ಲಿರುವ ರಾಸಾಯನಿಕಗಳು ಕರಗಿ ಆಹಾರ ಪದಾರ್ಥದೊಂದಿಗೆ ಬೆರೆಯುತ್ತವೆ. ಇಂತಹ ಆಹಾರ ಸೇವನೆ ಕ್ಯಾನ್ಸರ್‌ನಂತಹ ಕಾಯಿಲೆ ತರಬಹುದು.

ಇಡ್ಲಿ ಸೇರಿದಂತೆ ಇತರ ಆಹಾರ ಪದಾರ್ಥ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಈ ಕುರಿತು ಹೋಟೆಲ್, ಬೀದಿ ಬದಿ ವ್ಯಾಪಾರಿಗಳಿಗೂ ಅರಿವು ಮೂಡಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಡಾ.ವೆಂಕಟೇಶ್ ಆರೋಗ್ಯಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ