ಜಿಲ್ಲೆ

ಮೈಸೂರು ಅರಮನೆಯಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ

ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಫಿರಂಗಿ ಗಾಡಿಗಳಿಗೆ ಸೋಮವಾರ ಪೂಜೆ ಸಲ್ಲಿಸಲಾಯಿತು.

ಕುಶಾಲತೋಪು ಸಿಡಿಸುವ ತಾಲೀಮು ನಡೆಸಲು ಬಳಸುವ 11 ಫಿರಂಗಿ ಗಾಡಿಗಳಿಗೆ ಸಂಪ್ರದಾಯದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕುಂಬಳಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿದರು. ಕುಶಾಲತೋಪು ಸಿಡಿಸುವ ಸಿಬ್ಬಂದಿಯನ್ನು ಸಚಿವರು ಸನ್ಮಾನಿಸಿದರು.
ಪೂಜೆ ಬಳಿಕ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ತಾಲೀಮು ನಡೆಸಲು ಚಾಲನೆ ಲಭಿಸಿದಂತಾಗಿದೆ. ಗಜಪಡೆ, ಅಶ್ವರೋಹಿ ಪಡೆಯ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.

ವಿಜಯದಶಮಿಯಂದು ಅರಮನೆ ಬಳಿ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆಗಳು, ಕುದುರೆಗಳು ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.

ಈ ವೇಳೆ ಮಾತನಾಡಿದ ಸಚಿವರು, ದಸರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಉಪ ಸಮಿತಿಗಳು ತಯಾರಿ ಮಾಡಿಕೊಳ್ಳುತ್ತಿವೆ. ಕುಶಾಲತೋಪು ಸಿಡಿಸುವ ಪ್ರಕ್ರಿಯೆಗಾಗಿ ಫಿರಂಗಿ ಗಾಡಿಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಆನೆಗಳಿಗೆ ದೊಡ್ಡ ಪ್ರಮಾಣದ ಶಬ್ದವನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದ್ದರು.