ಜಿಲ್ಲೆ

ಮೈಸೂರು ಅರಮನೆಯಲ್ಲಿ ಜನಿಸಿದ್ದ ಮರಿ ಆನೆಗೆ ‘ಶ್ರೀ ದತ್ತಾತ್ರೇಯ’ ಹೆಸರು ನಾಮಕರಣ

ಮೈಸೂರು: ಅರಮನೆ ಅಂಗಳದಲ್ಲಿ ಜನಿಸಿದ ಆನೆ ಮರಿಗೆ ‘ಶ್ರೀ ದತ್ತಾತ್ರೇಯ’ ಎಂಬ ಹೆಸರನ್ನು ಗುರುವಾರ ನಾಮಕರಣ ಮಾಡಲಾಗಿದೆ.
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ‘ಲಕ್ಷ್ಮೀ’ ಅರಮನೆ ಆವರಣದಲ್ಲಿ ಮಂಗಳವಾರ ರಾತ್ರಿ ಗಂಡು ಮರಿಗೆ ಜನ್ಮ ನೀಡಿತ್ತು. ವಿಷಯ ತಿಳಿದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಲಕ್ಷ್ಮೀ ಆನೆ ಹಾಗೂ ಅದರ ಮರಿ ಇರುವ ಸ್ಥಳಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಈ ಮರಿಗೆ ನಾಮಕರಣ ಮಾಡಲು ಹೆಸರು ಸೂಚಿಸುವುದಾಗಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಅಂತೆಯೆ, ‘ಶ್ರೀದತ್ತಾತ್ರೇಯ’ ಹೆಸರನ್ನು ಸೂಚಿಸಿದ್ದು, ಈ ಹೆಸರನ್ನೇ ನಾಮಕರಣ ಮಾಡಲಾಗಿದೆ.

ಪ್ರತ್ಯೇಕ ಸ್ಥಳದಲ್ಲಿ ವಾಸ:
ಅರಮನೆ ಆವರಣದಲ್ಲಿ ರಾಜಮನೆತನದವರು ಸಾಕಿರುವ ಹಸುಗಳನ್ನು ಕಟ್ಟಿ ಹಾಕುವ ಕೊಟ್ಟಿಗೆ ಆವರಣದಲ್ಲಿ ಲಕ್ಷ್ಮೀ ಹಾಗೂ ಅದರ ಮರಿಯನ್ನು ಇರಿಸಲಾಗಿದೆ. ತಾಯಿ-ಮರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ 63 ವರ್ಷದ ಹಿರಿಯ ಹೆಣ್ಣಾನೆಯನ್ನು ಕಟ್ಟಿಹಾಕಲಾಗಿದೆ. ತಾಯಿ-ಮರಿ ಆನೆ ಲವಲವಿಕೆಯಿಂದ ಕೂಡಿವೆ. ತಾಯ್ತತನದ ಸಂಭ್ರಮದಲ್ಲಿರುವ ಲಕ್ಷ್ಮೀ ಮರಿಯೊಂದಿಗೆ ಮೈಮೇಲೆ ಮಣ್ಣು ಎರಚಿಕೊಂಡು ತನ್ಮಯತೆಯಿಂದ ದಿನ ಕಳೆಯುತ್ತಿದೆ.

ವಿಶೇಷ ಆರೈಕೆ:
ಲಕ್ಷ್ಮೀ ಹಾಗೂ ಅದರ ಮರಿಗೆ ದಿನದ 24 ಗಂಟೆಯೂ ಆರೈಕೆ ಮಾಡಲಾಗುತ್ತಿದೆ. ಅದಕ್ಕಾಗಿ ಈ ಆನೆಯ ಮಾವುತ, ಕಾವಾಡಿ ಶ್ರಮಿಸುತ್ತಿದ್ದಾರೆ. ಇದಕ್ಕೆ ಇತರ ಆನೆಗಳ ಮಾವುತ, ಕಾವಾಡಿಗಳು ಸಾಥ್ ನೀಡುತ್ತಿದ್ದಾರೆ. ಅಲ್ಲದೆ, ಆನೆಗಳೊಂದಿಗೆ ಭಾವನಾತ್ಮಕ ಒಡನಾಟ ಹೊಂದಿರುವ ಮಾವುತ, ಕಾವಾಡಿಗಳು ಹೊಸ ಅತಿಥಿ ಆಗಮನವನ್ನು ಹಬ್ಬದಂತೆ ಸಂಭ್ರಮಿಸಿದ್ದಾರೆ.

ಪರ-ವಿರೋಧ ಚರ್ಚೆ:
ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಗರ್ಭಿಣಿ ಆನೆಯನ್ನು ಕರೆತಂದಿರುವ ಅರಣ್ಯ ಇಲಾಖೆ ನಿಲುವಿನ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗರ್ಭಿಣಿ ಆನೆಯನ್ನು ದಸರಾ ಮಹೋತ್ಸವಕ್ಕೆ ಕರೆತಂದಿರುವುದು ಅವೈಜ್ಞಾನಿಕವಾಗಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ ನಿತ್ಯ ತಾಲೀಮಿಗೆ ಕರೆದೊಯ್ದು ಗರ್ಭಿಣಿ ಆನೆಗೆ ತೊಂದರೆ ನೀಡಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ.