ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಸೆ.16ರಂದು ಮೈಸೂರು ಅರಮನೆಯಲ್ಲಿ ಸಂಪ್ರದಾಯಬದ್ಧವಾಗಿ ನಡೆಯಲಿದೆ.
ಸಿಂಹಾಸನದ ಮೇಲೆ ಕುಳಿತು ಸಂಸದರೂ ಆಗಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಅರಮನೆಯ ನೆಲಮಾಳಿಗೆಯ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದ್ದ ಸಿಂಹಾಸನವನ್ನು ರಾಜವಂಶಸ್ಥರ ಸಮ್ಮುಖದಲ್ಲಿ ಹೊರ ತೆಗೆಯಲಾಗುತ್ತದೆ. ಬಿಡಿಬಿಡಿ ಇರುವ ಸಿಂಹಾಸನದ ಭಾಗಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ದರ್ಬಾರ್ ಹಾಲ್ಗೆ ತರಲಾಗುತ್ತದೆ.
ಈ ಹಿಂದಿನಿಂದಲೂ ಸಿಂಹಾಸನ ಜೋಡಣೆ ಕಾರ್ಯ ಮಾಡಿಕೊಂಡು ಬರುತ್ತಿರುವ ಗೆಜ್ಜಗಹಳ್ಳಿ ಗ್ರಾಮಸ್ಥರು ಈ ಬಾರಿಯೂ ಸಂಪ್ರದಾಯದಂತೆ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಮಾಡಲಿದ್ದಾರೆ.