ಜಿಲ್ಲೆ

ಮೈಸೂರು ಅರಮನೆಯ ತಡೆಗೋಡೆ ಕುಸಿತ

ಮೈಸೂರು: ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಹೊರ ಆವರಣದ ರಕ್ಷಣಾ ಕೋಟೆಯ ಗೋಡೆ ಕುಸಿದಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಹಾಗೂ ಜಯಮಾರ್ತಾಂಡ ಮುಖ್ಯದ್ವಾರದ ನಡುವೆ, ವಸ್ತುಪ್ರದರ್ಶನದ ಕಡೆಗೆ ಸುಮಾರು 15 ಅಡಿಯಷ್ಟು ಉದ್ದದ ತಡೆಗೋಡೆ ಕುಸಿದುಬಿದ್ದಿದೆ.
ಅರಮನೆ ರಕ್ಷಣೆಗಾಗಿ ಸುತ್ತಲೂ ಸುಮಾರು 25 ಅಡಿ ಎತ್ತರದ ಕೋಟೆ (ತಡೆಗೋಡೆ)ಯನ್ನು ಕಲ್ಲು, ಸುಣ್ಣದ ಗಾರೆ, ಮಣ್ಣಿನಲ್ಲಿ ನಿರ್ಮಿಸಲಾಗಿದೆ. ಇದು ಸದಾಕಾಲ ಅರಮನೆಯನ್ನು ರಕ್ಷಣೆ ಮಾಡಿಕೊಂಡು ಬರುತ್ತಿದೆ. ಆದರೆ, ಇತ್ತೀಚೆಗೆ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಕೆಲವು ಕಡೆ ಶಿಥಿಲಗೊಂಡಿದೆ. ವಸ್ತುಪ್ರದರ್ಶನ ಆವರಣದ ಕಡೆಗೆ ಹೊರ ಚಾಚಿಕೊಂಡಿದ್ದ ಕೋಟೆ (ತಡೆಗೋಡೆ) ಮಳೆಯಿಂದ ಕುಸಿದಿದೆ. ಕೆಲ ವರ್ಷಗಳ ಹಿಂದೆಯೂ ಸಮೀಪದಲ್ಲಿಯೇ ಕೋಟೆ (ತಡೆಗೋಡೆ) ಕುಸಿದಿದ್ದು, ಪಾರಂಪರಿಕ ಇಲಾಖೆಯ ನೆರವಿನಿಂದ ಮರು ನಿರ್ಮಾಣ ಮಾಡಲಾಗಿತ್ತು. ಅಲ್ಲದೆ, ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ದೊಡ್ಡ ಅರಳಿ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಈ ಬಾರಿ ಮೈಸೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಅದರಲ್ಲೂ ಕಳೆದ 3 ತಿಂಗಳಿಂದ ಹೆಚ್ಚು ಮಳೆಯಾಗಿದ್ದು, ಇದರ ಪರಿಣಾಮ ಶಿಥಿಲಾವಸ್ಥೆಯಲ್ಲಿದ್ದ ಕೋಟೆ ಕುಸಿತವಾಗಿದೆ.
ಪಾರಂಪರಿಕ ಅರಮನೆಯ ಹೊರ ಆವರಣದ ಬೃಹತ್ ಕೋಟೆ (ಕಾಂಪೌಂಡ್) ಮತ್ತೆ ಕುಸಿದು ಬಿದ್ದಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ. ಅರಮನೆಯ ಕೋಟೆ ಸರಿಯಾದ ನಿರ್ವಹಣೆ ಇಲ್ಲದೆ ಹಲವು ಕಡೆ ಬಿರುಕು ಕಾಣಿಸಿಕೊಂಡಿದೆ. ಇದೇ ರೀತಿ ಮಳೆ ಮುಂದುವರಿದರೆ ಹಲವು ಕಡೆ ಕುಸಿಯುವ ಭೀತಿ ಎದುರಾಗಿದೆ.
ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ಪಾರಂಪರಿಕ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿಗೆ ಮುಂದಾಗಿದ್ದಾರೆ.