ಜಿಲ್ಲೆ

ಮೈಸೂರು ಅರಮನೆ ಸೌಂದರ್ಯಕ್ಕೆ ಮನಸೋತ ಜಿ-20 ಶೃಂಗಸಭೆಯ ಪ್ರತಿನಿಧಿಗಳು

ಮೈಸೂರು: ಅರಮನೆ ನಗರಿಯಲ್ಲಿ ಆಯೋಜಿಸಿರುವ ಜಿ-20 ಶೃಂಗಸಭೆ ಪ್ರತಿನಿಧಿಗಳು ಮಂಗಳವಾರ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಸೌಂದರ್ಯಕ್ಕೆ ಮನಸೋತರು. ಮುಖ್ಯದ್ವಾರದಲ್ಲಿ ಗಣ್ಯರನ್ನು ಮಂಗಳವಾದ್ಯದೊಂದಿಗೆ ಸ್ವಾಗತಿಸಲಾಯಿತು.
ವಿವಿಧ 30 ದೇಶಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ನಗರಕ್ಕೆ ಆಗಮಿಸಿದ್ದು, ಚರ್ಚೆ, ಸಂವಾದ, ವಿಚಾರ ಸಂಕಿರಣ, ವಿಚಾರ ವಿನಿಮಯದಲ್ಲಿ ತೊಡಗಿದ್ದಾರೆ. ಬಿಡುವಿನ ಮಧ್ಯೆ ಅರಮನೆಗೆ ಭೇಟಿ ನೀಡಿದರು.
ಅರಮನೆಯಲ್ಲಿ ವೀಕ್ಷಣೆ ಸಮಯದಲ್ಲಿ ತಮ್ಮ ದೇಶದ ಅನೇಕ ವಸ್ತುಗಳಿರುವುದನ್ನು ಕಂಡು ಅಚ್ಚರಿ ಪಟ್ಟರಲ್ಲದೆ ಅವು ಹೇಗೆ ಇಲ್ಲಿಗೆ ಬಂದವು ಎನ್ನುವ ಇತಿಹಾಸದ ವಿವರವನ್ನು ಪ್ರವಾಸಿ ಮಾರ್ಗದರ್ಶಿಗಳಿಂದ ತಿಳಿದು ಕುತೂಹಲದಿಂದ ಆಲಿಸಿದರು.
ವಸ್ತು ಸಂಗ್ರಹಾಲಯದ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರಲ್ಲದೆ ಮೈಸೂರು ರೇಷ್ಮೆ ಸೀರೆ, ಮೈಸೂರು ಚಿತ್ರಕಲೆ, ಕೆತ್ತನೆ ಕಲೆಗಳನ್ನು ಕಂಡು ಸಂಭ್ರಮಪಟ್ಟರು. ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು, ತಂಡದ ಜತೆಗಿದ್ದು ಮಾರ್ಗದರ್ಶನ ನೀಡಿದರು. ವಿದೇಶಿ ಪ್ರತಿನಿಧಿಗಳ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಆ.2ರಂದು ಸಂಜೆ 7ರಿಂದ 8ರವರೆಗೆ ಧ್ವನಿ-ಬೆಳಕನ್ನು ವಿದೇಶಿ ಗಣ್ಯರು ವೀಕ್ಷಿಸಲಿದ್ದಾರೆ. ಹಾಗಾಗಿ ಆ ವೇಳೆಯೂ ಅರಮನೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಸುಸ್ಥಿರ ಅಭಿವೃದ್ಧಿ, ಆಧುನಿಕ ಜೀವನಶೈಲಿ, ಸ್ಥೂಲ ಅರ್ಥಶಾಸ್ತ್ರ ಮತ್ತು ವ್ಯಾಪಾರ, ಮಹಿಳಾ ನೇತೃತ್ವದ ಅಭಿವೃದ್ಧಿ, ಡಿಜಿಟಲ್ ರೂಪಾಂತರ, ಹಸಿರೀಕರಣ, ಜಾಗತಿಕ ಆರ್ಥಿಕತೆ ಉಪಕ್ರಮಗಳು ಇತ್ಯಾದಿ ವಿಷಯಗಳ ಕುರಿತು ನಗರದ ರೇಸ್‌ಕೋರ್ಸ್ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ಚರ್ಚೆ ಆರಂಭಗೊಂಡಿದೆ. ಆಯಾ ಕ್ಷೇತ್ರಗಳ ಪರಿಣಿತರು, ತಜ್ಞರು, ಸಂಶೋಧನಾರ್ಥಿಗಳು ವಿಷಯ ಮಂಡಿಸಿ ಸಂವಾದ ನಡೆಸಿದ್ದು, ಅಬ್ಸರ್ವರ್ ರಿಸರ್ಚ್ ಫೌಂಡೇಷನ್ (ಒಆರ್‌ಎಫ್) ಕಾರ್ಯಕ್ರಮದ ನಿರ್ವಹಣೆ ಮಾಡಲಿದೆ.

ಬಿಗಿ ಬಂದೋಬಸ್ತ್:
ಭದ್ರತಾ ದೃಷ್ಟಿಯಿಂದ ವಿದೇಶಿ ಪ್ರತಿನಿಧಿಗಳು ಉಳಿದುಕೊಂಡಿರುವ ಹೋಟೆಲ್ ಹಾಗೂ ಸುತ್ತ ಬಂದೋಬಸ್ತ್ ಹೆಚ್ಚಿಸಲಾಗಿದೆ. ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ರೀತಿಯ ಡ್ರೋನ್‌ಗಳು, ಇತರ ಯಾವುದೇ ಹಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಸೆಕ್ಷನ್ 144 ಸಿಆರ್‌ಪಿಸಿ ಅನ್ವಯ ಆ.3ರವರೆಗೂ ಈ ಪ್ರದೇಶಗಳನ್ನು ತಾತ್ಕಾಲಿಕವಾಗಿ ಯಾವುದೇ ಹಾರಾಟವಿಲ್ಲದ ವಲಯ ಎಂದು ಘೋಷಿಸಲಾಗಿದೆ.
ಅನಧಿಕೃತವಾಗಿ ಹಾಗೂ ಆಕ್ಷೇಪಾರ್ಹವಾಗಿ ಡ್ರೋನ್, ಇತರ ಯಾವುದೇ ಹಾರಾಟ ನಡೆಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸ್ಪಷ್ಟ ಸೂಚನೆ ನೀಡಿದ್ದಾರೆ.