ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ನಗರದ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗುರುವಾರ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 7 ಆನೆಗಳು ಅರಣ್ಯ ಭವನದಿಂದ ಮೈಸೂರು ಅರಮನೆ ಆವರಣಕ್ಕೆ ಮೆರವಣಿಗೆ ಮೂಲಕ ಆಗಮಿಸಿತು. ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8.30 ರಿಂದ 9.10ರವರೆಗೆ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. 9.10ಕ್ಕೆ ಆನೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಬರ ಮಾಡಿಕೊಳ‍್ಳಲಾಯಿತು.
ಆನೆಗಳಿಗೆ ಬೆಲ್ಲ, ಕಬ್ಬು, ಹಣ‍್ಣು ಹಂಪಲುಗಳನ್ನು ನೀಡಲಾಯಿತು. ಈ ಸಂದರ್ಭ ಗಜಪಡೆಗೆ ಪೊಲೀಸ್ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು. ನಾದಸ್ವರ, ಪೂರ್ಣಕುಂಭ ಸ್ವಾಗತದೊಂದಿಗೆ ಗಜಪಡೆಯನ್ನು ಅರಮನೆ ಆವರಣಕ್ಕೆ ಕರೆ ತರಲಾಯಿತು.
ಹಿಂದೆ ಸರಿದ ಅಶ‍್ವತ್ಥಾಮ: ದಸರಾ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಪಾಲ್ಗೊಂಡಿರುವ ಅಶ್ವತ್ಥಾಮ ಆನೆಯು ನಾದಸ್ವರ ಹಾಗೂ ಜನರ ಸದ್ದಿನಿಂದ ಅಂಜಿ ಅರಮನೆ ಆವರಣದೊಳಗೆ ಪ್ರವೇಶಿಸಲು ಹಿಂದೇಟು ಹಾಕಿತು. ಜನಜಂಗುಳಿ ಸಂಪೂರ್ಣ ದೂರವಾದ ನಂತರ ಅಶ್ವತ್ಥಾಮ ಅರಮನೆ ಆವರಣ ಪ್ರವೇಶಿಸಿದ.
ಮದವೇರಿದ ವಿಕ್ರಮ ಆನೆ ಸಹ ಎಲ್ಲ ಆನೆಗಳೊಂದಿಗೆ ಅರಮನೆ ಆವರಣ ಪ್ರವೇಶಿಸಲಿಲ್ಲ. ಅಶ್ವತ್ಥಾಮ ಅರಮನೆ ಆವರಣ ಪ್ರವೇಶಿಸಿದ ನಂತರ ಕೊನೆಯದಾಗಿ ವಿಕ್ರಮ ಆನೆ ಅರಮನೆ ಆವರಣ ಪ್ರವೇಶಿಸಿತು.