ಜಿಲ್ಲೆ

ಮೈಸೂರಿನಿಂದ ಮಂಗಳೂರು, ಶಿವಮೊಗ್ಗಕ್ಕೆ ವಿಮಾನ ಕಲ್ಪಿಸಲು ಆಗ್ರಹ

ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಶಿವಮೊಗ್ಗ ಮತ್ತು ಮಂಗಳೂರಿಗೆ ವಿಮಾನಯಾನ ಕಲ್ಪಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಆಗ್ರಹಿಸಿದ್ದಾರೆ.


ಮೈಸೂರು ನಗರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರು ಸುಮಾರು 15 ಸಾವಿರ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ 2 ಸಾವಿರ ಕುಟುಂಬಗಳು ವಾಸವಿದ್ದಾರೆ. ಆದ್ದರಿಂದ, ಮಂಗಳೂರು ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೈಸೂರಿಂದ ವಿಮಾನ ಸಂಚಾರವನ್ನು ಪ್ರಾರಂಭಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.


ಮೈಸೂರು ಪ್ರವಾಸಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನ ಒಳಗೊಂಡಿದೆ. ಮೈಸೂರಿಗೆ ಆಗಮಿಸುವ ಪ್ರಯಾಣಿಕರಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದಿಂದ ಬರುವ ಪ್ರಯಾಣಿಕರು ವಿಮಾನ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಈ ಹಿಂದೆ ಮೈಸೂರಿನಿಂದ ಮಂಗಳೂರಿಗೆ ನಿತ್ಯವೂ ವಿಮಾನಯಾನ ಲಭ್ಯವಿತ್ತು. ಆದರೆ, ಇದೀಗ ಆ ವಿಮಾನಯಾನವನ್ನು ಕಲ್ಪಿಸುತ್ತಿಲ್ಲ. ಪ್ರಯಾಣಿಕರ ಕೊರತೆ ಎಂಬ ಕಾರಣ ಹೇಳಲಾಗುತ್ತಿದೆ. ಕಳೆದ 12 ವರ್ಷಗಳಿಂದಲೂ ಮಂಗಳೂರು ಭಾಗಕ್ಕೆ ವಿಮಾನಯಾನ ಆರಂಭಿಸುವುದು ಮತ್ತು ನಿಲ್ಲಿಸುವುದು ಮಾಡುತ್ತಿರುವುದರಿಂದ ಯಾವುದೇ ಪ್ರಯಾಣಿಕರು ವಿಮಾನಯಾನವನ್ನು ನಂಬುತ್ತಿಲ್ಲ ಎಂದು ಕಳವಳವ್ಯಕ್ತಪಡಿಸಿದರು.


ಶಿವಮೊಗ್ಗದ ವಿಮಾನ ನಿಲ್ದಾಣವು ಸಹ ಕಾರ್ಯಾರಂಭ ಮಾಡಿದೆ. ಹೀಗಾಗಿ ಶಿವಮೊಗ್ಗ ಮತ್ತು ಮಂಗಳೂರಿಗೆ ವಿಮಾನಯಾನ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಇದರಿಂದ ಮಲೆನಾಡಿನ ಸುಮಾರು 20 ತಾಲೂಕುಗಳಿಂದ ಮೈಸೂರಿಗೆ ಪ್ರಯಾಣ ಬೆಳೆಸುವವರಿಗೆ ಸಹಕಾರಿ ಆಗುತ್ತದೆ. ಅಲ್ಲದೆ, 4 ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿಗರಿಗೆ ಮೈಸೂರಿಗೆ ಬಂದು ಹೋಗಲು ಹಾಗೂ ತಮ್ಮ ವ್ಯಾಪಾರ, ಉದ್ಯಮಗಳಿಗೆ ಹಾಗೂ ಮೈಸೂರಿನಿಂದ ತಮ್ಮ ತವರು ಮನೆಗಳಿಗೆ ಹೋಗಲು ಸಹಕಾರಿ ಆಗುವುದು ಎಂದು ತಿಳಿಸಿದ್ದಾರೆ.