ಜಿಲ್ಲೆ

ಮೈಸೂರಿನಲ್ಲಿ ‘ಸಿಲ್ಕ್ ಇಂಡಿಯಾ- 2023’ಕ್ಕೆ ಚಾಲನೆ

ಮೈಸೂರು: ಅಭಿವೃದ್ಧಿ ಸಿಲ್ಕ್ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ 10 ದಿನಗಳ ಕಾಲ ಅಯೋಜಿಸಿರುವ ‘ಸಿಲ್ಕ್ ಇಂಡಿಯಾ- 2023’ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮೇಯರ್ ಶಿವಕುಮಾರ್ ಹಾಗೂ ಉಪಮೇಯರ್ ಡಾ.ರೂಪಾ ಶುಕ್ರವಾರ ಚಾಲನೆ ನೀಡಿದರು.
ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಸೀರೆಗಳನ್ನು ನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ನಮ್ಮ ಮೈಸೂರು ಸಿಲ್ಕ್ ಜಾಗತಿಕ ಮನ್ನಣೆ ಪಡೆದಿದ್ದು, ನವೀನ ಮಾದರಿ ಗಮನ ಸೆಳೆಯುತ್ತಿವೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
ವರಮಹಾಲಕ್ಷ್ಮೀ ಹಬ್ಬ ಸೇರಿದಂತೆ ವಿಶೇಷ ದಿನಗಳಿಗೆ ವಿಭಿನ್ನ ಉಡುಗೆ, ತೊಡುಗೆಗಳು ದೊರೆಯಲಿವೆ. ಜನರಿಗೆ ವಿಭಿನ್ನ ಅನುಭವ ನೀಡಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಮೇಯರ್ ಡಾ.ರೂಪಾ ಮಾತನಾಡಿ, ವಿಭಿನ್ನ ರೇಷ್ಮೆ ಸೀರೆ ಮತ್ತು ಉಡುಗೆಗಳನ್ನು ಪರಿಚಯಿಸುವ ಈ ಮೇಳ ಉಪಯುಕ್ತವಾಗಿದೆ. ರೇಷ್ಮೆ ಮತ್ತು ಇಳಕಲ್ ಸೀರೆಗಳು ಜಗತ್ತಿನಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ವಿಶಿಷ್ಟ ಮತ್ತು ವಿಭಿನ್ನ ಶೈಲಿಯಿಂದ ಸೀರೆಗಳು ಹೆಚ್ಚು ಆಕರ್ಷಿಸುತ್ತಿವೆ ಎಂದು ಹೇಳಿದರು.
ಬನಾರಸ್, ಮೈಸೂರು ಸಿಲ್ಕ್, ವಾರಣಾಸಿ, ಅಸ್ಸಾಂ, ಜೈಪುರ ಸಿಲ್ಕ್ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ವಿವಿಧ ಸೀರೆಗಳು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದಲ್ಲಿ ಲಭ್ಯ ಇವೆ.