ಮೈಸೂರು: ಸೂರ್ಯ ನಮಸ್ಕಾರವನ್ನು ನಿತ್ಯ ಮಾಡುವುದರಿಂದ ಉತ್ತಮ ಆರೋಗ್ಯ ಲಭ್ಯವಾಗಲಿದೆ ಎಂದು ಯೋಗ ಗುರು ಡಾ.ಬಿಎನ್‌ಎಸ್ ಅಯ್ಯಂಗಾರ್ ಹೇಳಿದರು.
ರಥಸಪ್ತಮಿಯ ಪ್ರಯುಕ್ತ ಮೈಸೂರು ಯೋಗ ಅಸೋಸಿಯೇಷನ್, ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಆಸನ ಭಂಗಿಗಳಿಂದ ಸಂಯೋಜಿತಗೊಂಡಿರುವ ಸೂರ್ಯನಮಸ್ಕಾರ ಪದ್ಧತಿಯ ಅಭ್ಯಾಸದಿಂದ ಮನುಷ್ಯ ಪರಿಪೂರ್ಣ ಆರೋಗ್ಯ ಹೊಂದುತ್ತಾನೆ ಎಂದರು.
ರಥಸಪ್ತಮಿಯ ಮಹತ್ವದ ಕುರಿತು ಮಾತನಾಡಿದ ಸಂಸ್ಕೃತ ವಿದುಷಿ ಡಾ.ಕೆ.ಲೀಲಾ ಪ್ರಕಾಶ್, ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣೀಭೂತನಾಗಿರುವ ಸೂರ್ಯನನ್ನು ಆರಾಧಿಸುವ ವೈಶಿಷ್ಟ ಪೂರ್ಣವಾದ ಹಿರಿಮೆಯನ್ನು ರಥಸಪ್ತಮಿ ಹೊಂದಿದೆ.
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ಎಂದು ಆಚರಿಸಲ್ಪಡುವ ರಥಸಪ್ತಮಿಯ ನಂತರ ಸಪ್ತಾಶ್ವಗಳಿಂದ ಕೂಡಿದ ರಥವನ್ನು ಸೂರ್ಯನು ಉತ್ತರಕ್ಕೆ ತಿರುಗಿಸಿ ಉತ್ತರಾಯಣ ಪುಣ್ಯ ಕಾಲಕ್ಕೆ ಅನುವು ಮಾಡಿಕೊಡುತ್ತಾನೆ ಎಂದು ವಿವರಿಸಿದರು.
ರಥಸಪ್ತಮಿಯಂದು ಮಾಡುವ ಸೂರ್ಯ ನಮಸ್ಕಾರದ ಪದ್ಧತಿ ಸೂರ್ಯನ ಅನುಗ್ರಹ ಸಂಪಾದನೆಗೆ ಅತ್ಯುತ್ತಮ ಮಾರ್ಗ ಎಂದರು.
ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಿ.ಮಾದೇಗೌಡ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಡಾ.ಸಿ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಎನ್.ಅನಂತ, ಉಪಾಧ್ಯಕ್ಷರಾದ ಎನ್.ಪಶುಪತಿ, ಡಾ.ಬಿ. ಶ್ರೀನಾಥ್, ವಿವೇಕ ವಿದ್ಯಾಲಯ ಪಿಯು ಕಾಲೇಜಿನ ನಿರ್ದೇಶಕ ಎಂ.ಎಸ್.ನಾಗೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಂದ್ರ ರಾಜೇಅರಸ್, ಜಿಎಸ್‌ಎಸ್ ಯೋಗ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಆರ್ಯ ಸಮಾಜದ ಅಧ್ಯಕ್ಷ ಎಸ್.ಹೇಮಚಂದ್ರ, ಕೃಷ್ಣಮೂರ್ತಿ, ಹರ್ಷವರ್ಧನ ಮುಂತಾದವರು ಪಾಲ್ಗೊಂಡಿದ್ದರು.
ಸಾವಿರಾರು ಯೋಗಪಟುಗಳು ಪಾಲ್ಗೊಂಡು 108 ಸೂರ್ಯ ನಮಸ್ಕಾರ ಮಾಡಿದರು. ಆರ್ಯ ಸಮಾಜದಿಂದ ಸೂರ್ಯ ಯಜ್ಞ ಕಾರ್ಯಕ್ರಮ ನಡೆಯಿತು.
============