ಮೈಸೂರು: ಹಿಂದು ಸಂಪ್ರದಾಯದ ಪ್ರಮುಖ ಹಾಗೂ ‘ವಿಜಯ’ ನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಭಾನುವಾರ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು.
ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆ ಸದಸ್ಯೆಲ್ಲ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕಸಬೇಕೆಂಬ ಸಂದೇಶ ಸಾರುವ ‘ಬೇವು-ಬೆಲ್ಲ’ವನ್ನು ಜನರು ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹಬ್ಬದಲ್ಲಿ ಬೇವು ಬೆಲ್ಲದ ಜತೆ ಪಂಚಾಂಗ ಪೂಜೆ ಕೂಡ ಮಾಡಲಾಯಿತು.
ಹಬ್ಬದ ಪ್ರಯುಕ್ತ ನೂರೊಂದು ಗಣಪತಿ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ಚಂದ್ರನ ದರ್ಶನ ಪಡೆದರು. ಹಬ್ಬಕ್ಕೆ ಹಣ್ಣು, ಹೂ, ತುಸು ದುಬಾರಿಯಾದರೂ ಕೊಳ್ಳುವವರೇನೂ ಕಡಿಮೆಯಾಗಿರಲಿಲ್ಲ. ಒಟ್ಟಾರೆ ನಗರದೆಲ್ಲೆಡೆ ಯುಗಾದಿ ಸಡಗರ ಮೇಳೈಸಿತ್ತು.
ಪೂಜೆಯಲ್ಲಿ ಡಿಸಿ ಕುಟುಂಬ ಭಾಗಿ:
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಕುಟುಂಬ ಸಮೇತ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಹೋಮ, ತೈಲಾಭಿಷೇಕ, ವಿಶೇಷ ಧ್ರುವಗಳಿಂದ ಹಾಗೂ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪಂಚಾಂಗ ಶ್ರಾವಣ ಪಠಿಸುವ ಮೂಲಕ ಹಬ್ಬವನ್ನು ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಪೂಜೆ ಕಾರ್ಯ ನೆರವೇರಿಸಲಾಯಿತು. ಭಕ್ತರಿಗೆಗೆ ಬೇವು-ಬೆಲ್ಲ ಹಾಗೂ ಪ್ರಸಾದ ವಿತರಿಸಲಾಯಿತು.
ಪೌರಕಾರ್ಮಿಕರೊಂದಿಗೆ ಊಟ: ಹಬ್ಬದ ಅಂಗವಾಗಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ 23ನೇ ವಾರ್ಡ್‌ನಲ್ಲಿ ಶಾಸಕ ಕೆ.ಹರೀಶ್‌ಗೌಡ ಪೌರಕಾರ್ಮಿಕರೊಂದಿಗೆ ಊಟ ಸವಿದರು.
ಸಮಾಜದ ಸ್ವಾಸ್ಥೃ ಕಾಯ್ದುಕೊಳ್ಳುವಲ್ಲಿ, ಪರಿಸರ ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರೊಂದಿಗೆ ಬೆರತು ಅವರ ಕಷ್ಟ ಸುಖ ಆಲಿಸಿದ ಶಾಸಕರು, ಅವರಿಗೆ ಹೋಳಿಗೆ ಊಟದ ಆತಿಥ್ಯ ನೀಡಿ ಅವರ ಜತೆ ಕುಳಿತು ಊಟವನ್ನು ಸೇವಿಸಿದರು. ಪೌರಕಾರ್ಮಿಕರಿಗೆ ಬೇವುಬೆಲ್ಲ ವಿತರಿಸಿ ಶುಭಾಶಯ ಕೋರಿದರು
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್, ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಮಹದೇವ್, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ನವೀನ್, ಸಂದೀಪ್, ಹರೀಶ್ ಗೌಡ, ರವಿಚಂದ್ರ, ನೀತು, ಶಿವು, ರವಿ, ಎಸ್ ಎನ್ ರಾಜೇಶ್, ಸಂತೋಷ್, ಮಂಜು, ಜಗದೀಶ್ ಇನ್ನಿತರರು ಹಾಜರಿದ್ದರು.
ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಯುಗಾದಿ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಾಲಚಂದ್ರ ಡೋಂಗ್ರೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಹರೀಶ್ ದೀಕ್ಷಿತ್ ಅವರು ಪಂಚಾಂಗ ಪಠಿಸಿ, ವಿಶ್ವಾವಸು ಸಂವತ್ಸರದ ಫಲಾಫಲಗಳ ವಿಸ್ತೃತ ವಿವರಣೆ ನೀಡಿದರು. ಬಳಿಕ ಸುಹಾಸ್ ಕರ್ವೆ ಅವರಿಂದ ಹರಿಕಥೆ ಕಾರ್ಯಕ್ರಮ ನಡೆಯಿತು.
ಮರಾಠಿ ಅಭಂಗ ಮತ್ತು ಪುರಂದರ ದಾಸರ ಹಾಡುಗಳ ಮೂಲಕ ಹಲವು ದೃಷ್ಟಾಂತಗಳ ಸಹಿತ ‘ಗರುಡ ಗರ್ವ ಭಂಗ’ ಹರಿಕಥೆಯನ್ನು ನಡೆಸಿಕೊಟ್ಟರು. ಶ್ರೀಹಾನ್ ಕರ್ವೆ ಹಾರ್ಮೋನಿಯಂ ನುಡಿಸಿದರೆ, ಮಿಹಿರ್ ಗೋಗಟೆ ತಬಲಾ ಸಾಥಿ ನೀಡಿದರು.
ಚಾರ್ಟರ್ರ್ಡ್ ಆಡಿಟರ್ ಕೇಶವ ಡೊಂಗ್ರೆ, ಸಾಹಿತಿ ಅನಂತ್ ತಾಮ್ಹನ್ ಕರ್ ಮತ್ತು ಸಂಸ್ಕೃತ ಪಂಡಿತೆ ಮಂಜುಳಾ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಬೇವು ಬೆಲ್ಲ ವಿತರಿಸಲಾಯಿತು. ಡಾ. ಪ್ರಶಾಂತ್ ಗೋಖಲೆ , ದಿನೇಶ್ ಚಿಪಳೂಣ್ ಕರ್, ಕಿರಣ್ ಮರಾಠೆ , ಸುಮಾ ದಾಮಲೆ ಇದ್ದರು.