ಜಿಲ್ಲೆ

ಮೈಸೂರಿನಲ್ಲಿ ಸಂಜೆ ಪ್ರವಾಸೋದ್ಯಮಕ್ಕೆ ಬರ..!

ಮಂಜುನಾಥ ತಿಮ್ಮಯ್ಯ ಮೈಸೂರು

ಅರಮನೆ ನಗರಿ ಮೈಸೂರಿನಲ್ಲಿ ಸಂಜೆ ಹೊತ್ತಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಕೈಗೊಳ್ಳುವುದು ಯಾವಾಗ...?

ಪ್ರವಾಸೋದ್ಯಮ ಅವಲಂಬಿತರು, ಪ್ರವಾಸಿಗರು, ಸಾರ್ವಜನಿಕರ ಪ್ರಶ್ನೆ ಇದು. ಬಹಳ ವರ್ಷಗಳ ಬೇಡಿಕೆಯಾಗಿರುವ ಇದು ಇನ್ನೂ ಈಡೇರಿಲ್ಲ. ಈ ವಿಷಯ ಆಗೊಮ್ಮೆ-ಈಗೊಮ್ಮೆ ಚರ್ಚೆಯಾಗುತ್ತದೆ.

ಬಳಿಕ ತಣ್ಣಗಾಗಿ ಯಥಾಸ್ಥಿತಿ ಪರಿಸ್ಥಿತಿ ಮುಂದುವರಿಯುತ್ತಿದೆ. ಇದು ಸ್ಥಳೀಯ ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಆದಾಗ್ಯೂ, ಈ ಕುರಿತು ಗಂಭೀರವಾಗಿ ಚಿಂತಿಸುತ್ತಿಲ್ಲವಷ್ಟೇ!

ಹಿಂದೆ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದವು. ಪ್ರವಾಸಿಗರನ್ನು ವರ್ಷವಿಡೀ ಆಕರ್ಷಿಸುವ ಸಲುವಾಗಿ ‘ವಾರಾಂತ್ಯದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 2014ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಜಿಲ್ಲಾಧಿಕಾರಿಯಾಗಿದ್ದ ಸಿ.ಸಿಖಾ ಅವಧಿಯಲ್ಲಿ ಇದು ಕಾರ್ಯಗತವಾಗಿತ್ತು.

ಆದರೆ, ಪ್ರಚಾರದ ಕೊರತೆಯಿಂದ ಅದು ಕೆಲ ದಿನಗಳ ನಂತರ ಸ್ಥಗಿತಗೊಂಡಿತು. ಮತ್ತೆ ಅದಕ್ಕೆ ಹೊಸ ರೂಪ ಕೊಡುವ, ವಿಭಿನ್ನವಾಗಿ ಆಯೋಜಿಸುವ ಯೋಚನೆ ಮಾಡಲೇ ಇಲ್ಲ.

ಈ ವಿಷಯ ಕೆಲ ವರ್ಷ ಹಿಂದಿನ ಬಜೆಟ್‌ನಲ್ಲೂ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ನಗರದಲ್ಲೇ ವಾಸ್ತವ್ಯ ಹೂಡುವಂತೆ ಮಾಡಲು ಸಂಜೆ ಕಾರ್ಯಕ್ರಮ ಆಯೋಜನೆಗೆ ಈ ಹಿಂದೆ ಪ್ರವಾಸೋದ್ಯಮ ಇಲಾಖೆ ತೀರ್ಮಾನ ಮಾಡಿತ್ತು. ಬಳಿಕ ಅದು ಸಹ ನನೆಗುದಿಗೆ ಬಿದ್ದಿತ್ತು.

ಪ್ರವಾಸಿಗರನ್ನು ಹಿಡಿದಿಡುವ ಸಂಜೆ ಕಾರ್ಯಕ್ರಮಗಳೇ ಇಲ್ಲ.

ಮೈಸೂರಿನಲ್ಲಿ ಹಗಲು ಹೊತ್ತು ಯಥೇಚ್ಛವಾಗಿ ಮನರಂಜನೆ ದೊರೆಯುತ್ತದೆ. ಆದರೆ, ಸಂಜೆಯಾಗುತ್ತಿದ್ದಂತೆ ಖಾಲಿ ಹೊಡೆಯುತ್ತದೆ. ಬೆಳಗ್ಗೆ, ಮಧ್ಯಾಹ್ನದ ಹೊತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೂ, ಸೂರ್ಯಾಸ್ತವಾಗುತ್ತಿದ್ದಂತೆ ಅವರೆಲ್ಲ ಇಲ್ಲಿಯಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಇವರನ್ನು ಹಿಡಿದಿಡುವ ಸಂಜೆ ಕಾರ್ಯಕ್ರಮಗಳೇ ಇಲ್ಲ.

ಮೈಸೂರಿಗೆ ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದನ್ನು ಸದ್ಭಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಒಂದೇ ದಿನಕ್ಕೆ ಪ್ರವಾಸವನ್ನು ಪೂರ್ಣಗೊಳಿಸಿ ಬೇರೆ ಕಡೆಗೆ ಮುಖ ಮಾಡುತ್ತಿದ್ದಾರೆ. ಅವರು ಎರಡ್ಮೂರು ದಿನಗಳು ತಂಗುವಂತೆ ಮಾಡುವಂತಹ ಪೂರಕ ವಾತಾವರಣ ಸೃಷ್ಟಿಯಾಗುತ್ತಿಲ್ಲ.

ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅರಮನೆ, ಚಾಮರಾಜೇಂದ್ರ ಮೃಗಾಲಯ, ಜಗನ್ಮೋಹನ ಅರಮನೆ, ಕಾರಂಜಿ ಕೆರೆ, ರೈಲ್ವೆ ವಸ್ತು ಸಂಗ್ರಹಾಲಯ, ಸಂತ ಫಿಲೋಮಿನಾ ಚರ್ಚ್ ಲಘುಬಗೆಯಿಂದ ಸಂಜೆ 5ರ ಒಳಗೆ ಭೇಟಿ ನೀಡಿ ಆಸ್ವಾದಿಸಬಹುದು. ನಂತರ ಮೈಸೂರಿನ ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಲಿವೆ. ನಂತರ ನೋಡಲು ಏನು ಸಿಗಲ್ಲ.

ಸಂಜೆ ನಂತರ ‘ಏನು ಮಾಡಬೇಕು’?

ಬೆಳಗ್ಗೆಯಿಂದ ಸಂಜೆವರೆಗೆ ಊರೆಲ್ಲ ಸುತ್ತುವ ಪ್ರವಾಸಿಗರು ಸಂಜೆ ನಂತರ ‘ಏನು ಮಾಡಬೇಕು’? 5ರಿಂದ ರಾತ್ರಿ 10ರ ವರೆಗೆ ಹೇಗೆ ಕಾಲ ಕಳೆಯಬೇಕು ಎಂಬ ಪ್ರಶ್ನೆ ಕಾಡಲಿದೆ. ಇದಕ್ಕೆ ಉತ್ತರ ಸಿಗದೆ ಅವರಿಗೆ ನಿರಾಶೆಯಾಗುತ್ತಿದೆ. ಇದು ಸಂಜೆ ಹೊತ್ತು ಕಾಲ ಕಳೆಯಲು ಇಷ್ಟ ಪಡುವ ಸ್ಥಳೀಯ ನಿವಾಸಿಗಳ ಸ್ಥಿತಿ ಸಹ ಇದಕ್ಕಿಂತ ಭಿನ್ನ ಏನಿಲ್ಲ.

ಐಷಾರಾಮಿ ತಾಣಗಳಾದ ಮಾಲ್‌ಗಳಿಗೆ ಹೋಗೋಣ ಎಂದರೆ ಅಲ್ಲಿ ಏನು ವಿಶೇಷವಿಲ್ಲ. ಇದನ್ನು ಹೊರತುಪಡಿಸಿ ಪ್ರವಾಸಿಗರಿಗೆ ಮುದ ನೀಡುವ, ಮನರಂಜಿಸುವ ಕಾರ್ಯಕ್ರಮಗಳಿಲ್ಲ. ಸಂಜೆ ಹೊತ್ತಿನಲ್ಲಿ ಭೇಟಿ ನೀಡುವ ಪ್ರವಾಸಿ ತಾಣಗಳೂ ಇಲ್ಲ. ಆದ್ದರಿಂದ ಸೂರ್ಯ ಮುಳುಗುತ್ತಿದ್ದಂತೆ, ಪ್ರವಾಸಿಗರು ಇಲ್ಲಿಯಿಂದ ಬೇರೆ ಕಡೆಗೆ ಚದುರಿಹೋಗುತ್ತಿದ್ದಾರೆ. ಇವರೆಲ್ಲ ಇಲ್ಲಿ ಉಳಿದುಕೊಳ್ಳುವಂತಹ ಆಕರ್ಷಣೀಯ ಕಾರ್ಯಕ್ರಮ ರೂಪಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗೆ ಸಾಧ್ಯವಾಗಿಲ್ಲ.

ನಗರದ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲಿ ನಿತ್ಯ ಸಂಜೆ ನಡೆಯುತ್ತಿದ್ದ ಸಂಗೀತ ನೃತ್ಯ ಕಾರಂಜಿ ಸ್ಥಗಿತಗೊಂಡಿದ್ದು, ಅದು ಇದ್ದರೂ ಇಲ್ಲದಂತಿದೆ. ಪ್ರವಾಸೋದ್ಯಮಕ್ಕೆ ಏನು ಪ್ರಯೋಜನವಾಗುತ್ತಿಲ್ಲ.

ಪೂರಕ ಕಾರ್ಯಕ್ರಮಗಳು ರೂಪಗೊಂಡರೆ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತಷ್ಟು ಶುಕ್ರದೆಸೆ ಬರಲಿದೆ. ಹೋಟೆಲ್, ಬೀದಿಬದಿ ವ್ಯಾಪಾರ, ಟ್ರಾವೆಲ್.. ಹೀಗೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ ವಹಿವಾಟುಗಳಿಗೂ ಉತ್ತೇಜನದೊಂದಿಗೆ ಗಲ್ಲಾಪೆಟ್ಟಿಗೆಯೂ ತುಂಬಲಿದೆ.

ಸುತ್ತಲಿನ ಜಿಲ್ಲೆಗಳಿಗೂ ವರದಾನ

ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮಕ್ಕೆ ಮೈಸೂರು ನಗರವೇ ಪ್ರಮುಖ ತಾಣ. ಇಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಬೆಳಗ್ಗೆ ಮಲೆಮಹದೇಶ್ವರಬೆಟ್ಟ, ಹೊಗೆನಕಲ್ ಜಲಪಾತ, ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹಿಮವತ್ ಗೋಪಾಲಸ್ವಾಮಿಬೆಟ್ಟ ತೆರಳಿ ಅಲ್ಲಿಯಿಂದ ಊಟಿಗೆ ಪಯಣ ಬೆಳೆಸುತ್ತಾರೆ. ಕೇರಳದ ವಯನಾಡು ಜಿಲ್ಲೆಗೆ ಹೋಗಲಿದ್ದಾರೆ. ಇಲ್ಲವೇ ಹುಣಸೂರು ಮಾರ್ಗವಾಗಿ ಕೊಡಗು ಜಿಲ್ಲೆಗೆ ಹೊಗುತ್ತಾರೆ. ರಂಗನತಿಟ್ಟು ಪಕ್ಷಿಧಾಮ ಭೇಟಿ ನೀಡಿ ಅಲ್ಲಿಯಿಂದ ಬೆಂಗಳೂರು ಕಡೆ ಹೋಗಬಹುದು. ಶ್ರೀರಂಗಪಟ್ಟಣ ಮೂಲಕ ಶ್ರವಣಬೆಳಗೊಳ ಮೂಲಕ ಹಾಸನ ಜಿಲ್ಲೆ ಕಡೆ ಹೋಗಬಹುದು. ಹೀಗಾಗಿ, ಮೈಸೂರಿನಲ್ಲಿ ಪ್ರವಾಸಿಗರು ಉಳಿದುಕೊಳ್ಳುವಂತೆ ಮಾಡಿದರೆ ಮೈಸೂರು ಸುತ್ತಲಿನ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಈ ಕುರಿತು ಮೈಸೂರನ್ನು ಪ್ರವಾಸೋದ್ಯಮ ವೃತ್ತ(ಟೂರಿಸಂ ಸರ್ಕಿಟ್) ಆಗಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಬಹುದಿನದ ಬೇಡಿಕೆಯೂ ಈಡೇರಿಲ್ಲ.

ಹೀಗೆ ಮಾಡಬಹುದು?

ನಿತ್ಯ ಅರಮನೆಗೆ ದೀಪಾಲಂಕಾರ, ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ. ನಿರಂತರವಾಗಿ ಸಾಂಸ್ಕೃತಿಕ ನೃತ್ಯ ಪ್ರದರ್ಶನ, ನಾಟಕ, ಸಂಗೀತ, ಯಕ್ಷಗಾನ ಮಾಡಬಹುದು. ಅರಮನೆ ಅಂಗಳದಲ್ಲಿ ವಾರಕ್ಕೊಮ್ಮೆ ಜಂಬೂ ಸವಾರಿ, ವಿಂಟೇಜ್ ಕಾರ್‌ಗಳ ಪ್ರದರ್ಶನ, ದಸರಾ ವಸ್ತು ಪ್ರದರ್ಶನದಲ್ಲಿ ವರ್ಷವಿಡೀ ವಿವಿಧ ಚಟುವಟಿಕೆಗಳು ಕೈಗೊಳ್ಳಬಹುದು. ಪ್ರತಿ ದಿನವಾಗದಿದ್ದರೂ ವಾರಾಂತ್ಯದಲ್ಲಿ ಮಾಡಬಹುದು. ತಿಂಗಳಿಗೆ ಒಂದು ಪ್ರವಾಸೋದ್ಯಮ ಚಟುವಟಿಕೆಯನ್ನು ನಡೆಸಬಹುದು

ಪ್ರವಾಸಿಗರನ್ನು ಆಕರ್ಷಿಸಲು ಸಂಜೆ ಕಾರ್ಯಕ್ರಮ ಆಯೋಜನೆ ಕುರಿತು ಪ್ರಸ್ತಾವನೆ ಏನಿಲ್ಲ. ನಿರಂತರವಾಗಿ ಕಾರ್ಯಕ್ರಮ ಆಯೋಜನೆ ಕಷ್ಟಕರ. ಇದಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕಾಗುತ್ತದೆ. ಅಷ್ಟು ಹಣ ಇಲಾಖೆಯಿಂದ ನಿರ್ವಹಣೆ ಮಾಡಲಾಗಲ್ಲ. ಅರಮನೆ ಆಡಳಿತ ಮಂಡಳಿಯಿಂದ ವಾರಾಂತ್ಯ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಅವಕಾಶವಿದೆ. ಇದಕ್ಕೆ ಆದಾಯ ಮೂಲ ಇರುವುದರಿಂದ ಇದು ಕಾರ್ಯಗತಮಾಡಬಹುದು.

ಕೆ.ಎಂ.ಸವಿತಾ, ಜಂಟಿ ನಿರ್ದೇಶಕಿ

ಪ್ರವಾಸೋದ್ಯಮ ಇಲಾಖೆ