ಜಿಲ್ಲೆ

ಮೈಸೂರಿನಲ್ಲಿ ವರಮಹಾಲಕ್ಷ್ಮೀ ಪೂಜೆ ಸಂಭ್ರಮ

ಮೈಸೂರು: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ಸಾಂಸ್ಕೃತಿಕ ನಗರಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಹಬ್ಬಕ್ಕೆಂದು ಕೆಲ ದಿನಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದ ಮಹಿಳೆಯರು ಬೆಳಗ್ಗೆಯಿಂದಲೇ ಪೂಜೆಯಲ್ಲಿ ತೊಡಗಿಸಿದ್ದರು. ಮನೆಯಲ್ಲಿ ಲಕ್ಷ್ಮೀ ಪೋಟೋ, ಕಳಸವಿಟ್ಟು ಅಷ್ಟಲಕ್ಷ್ಮೀಯರನ್ನು ಪೂಜಿಸಿ ಸುಖ, ಶಾಂತಿ, ನೆಮ್ಮದಿ, ಧನ ಸಂಪತ್ತಿಗಾಗಿ ಪ್ರಾರ್ಥಿಸಿದರು.
ಕಳಸ ಪ್ರತಿಷ್ಠಾಪನೆ ಮಾಡಿ ಅದಕ್ಕೆ ಲಕ್ಷ್ಮೀಯ ಮುಖವಾಡ, ಸೀರೆ, ಬಳೆ ತೊಡಿಸಿ, ಬಗೆ ಬಗೆಯ ಹೂನಿಂದ ಅಲಂಕಾರ ಮಾಡಿ, ವಿವಿಧ ತಿನಿಸುಗಳು, ಹಣ್ಣಗಳನ್ನು ನೈವೇದ್ಯಕ್ಕಿಟ್ಟು, ಮನೆಯಲ್ಲಿರುವ ಹಣ, ಚಿನ್ನದೊಡವೆಗಳನ್ನು ದೇವರ ಮುಂದಿಟ್ಟು ನಮಿಸಿದರು. ಬಳಿಕ ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿಣ, ಕುಂಕುಮ, ಫಲ ತಾಂಬೂಲ ನೀಡಿದರು. ಹಿಂದೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಲಕ್ಷ್ಮೀ ಪೂಜೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ.
ವರಮಹಾಲಕ್ಷ್ಮಿ ಹಬ್ಬವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು. ಮಹಿಳೆಯರು ಮನೆಯಲ್ಲಿ ವ್ರತ ಆಚರಣೆ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದಟ್ಟಗಳ್ಳಿಯ ನೇತಾಜಿ ಸರ್ಕಲ್‌ನಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲೂ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟ ಸೇರಿದಂತೆ ನಗರದ ವಿವಿಧ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳನ್ನು ನಡೆಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಮನೆಗಳಲ್ಲಿ ಪೂಜೆ ಸಲ್ಲಿಸಿದ ಭಕ್ತರು ನಂತರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಇದರಿಂದ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೆ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ, ಲಕ್ಷ್ಮೀ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.