ಜಿಲ್ಲೆ

ಮೈಸೂರಿನಲ್ಲಿ ರೈತರ ಪ್ರತಿಭಟನೆ

ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದಲ್ಲಿ ನಿವೇಶನಕ್ಕೆಂದು ಮಂಜೂರು ಮಾಡಿರುವ ಜಮೀನನ್ನು ನಿವೇಶನಕ್ಕಾಗಿಯೇ ಮೀಸಲಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ನಜರ್‌ಬಾದ್‌ನಲ್ಲಿರುವ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಂಚಲಗೂಡು ಗ್ರಾಮದ ಸರ್ವೆ ಸಂ.14ರ 27 ಎಕರೆ 26 ಗುಂಟೆ ಪ್ರದೇಶದಲ್ಲಿ ಸುಮಾರು 70 ಕುಟುಂಬ ಬಗರ್‌ಹುಕುಂ ಸಾಗುವಳಿಯನ್ನು 70 ವರ್ಷಗಳ ಹಿಂದಿನಿಂದಲೂ ಮಾಡುತ್ತಿದ್ದರು. ದರಖಾಸ್ತು ಮಂಜೂರಾಗಿ ನಮೂನೆ ಸಂಖ್ಯೆ 50ರ ನಮೂನೆ ಅರ್ಜಿ ಕೂಡ ಸಲ್ಲಿಸಿದ್ದರು.

ಮುನ್ಸಿಪಲ್ ವ್ಯಾಪ್ತಿಯಿಂದ ಕಡಿಮೆ ಅಂತರದಲ್ಲಿದೆ ಎಂದು ಸಾಗುವಳಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಸಮಿತಿ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಕುಟುಂಬಕ್ಕೆ ನಿವೇಶನವನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಈ ಸರ್ವೆ ಸಂಖ್ಯೆ 5 ಎಕರೆ 20 ಗುಂಟೆ ಪ್ರದೇಶವನ್ನು ನಿವೇಶನಕ್ಕಾಗಿ ಮೀಸಲಿಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ನಡುವೆ ನಿವೇಶನಕ್ಕಾಗಿ ಕಾಯ್ದಿರಿಸಿರುವ ಸ್ಥಳದಲ್ಲೇ 1 ಎಕರೆ ಪ್ರದೇಶವನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸ್ಮಶಾನಕ್ಕೆ ಪರ್ಯಾಯ ಜಾಗ ನೀಡಿ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗವನ್ನು ನಿವೇಶನಕ್ಕೆ ಮೀಸಲಿಡಬೇಕು. ಈ ಸರ್ಕಾರಿ ಜಾಗದಲ್ಲಿ ಗುಂಪು ಮನೆ ನಿರ್ಮಿಸಬೇಕೆಂದು ಯೋಜನೆಯನ್ನು ರೂಪಿಸಿದ್ದು, ಗುಂಪು ಮನೆ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಮುಖಂಡರಾದ ಪಿ.ಮರಂಕಯ್ಯ, ಬಸಪ್ಪ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.