ಮೈಸೂರು: ಕನ್ನಡ ರಾಜ್ಯೋತ್ಸವದ ಸಡಗರ ಶುಕ್ರವಾರ ನಗರದ ವಿವಿಧೆಡೆ ಮೇಳೈಸಿತು. ಈ ಮೂಲಕ ‘ಬಾರಿಸು ಕನ್ನಡ ಡಿಂಡಿಮವ’ ರಿಂಗಣಿಸಿತು.
ಮೈಸೂರು ಕನ್ನಡ ವೇದಿಕೆಯಿಂದ ಹಿರಿಯ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರನ್ನು ಸ್ಮರಣೆ ಮಾಡಲಾಯಿತು. ನಗರದ ಕೆ.ಆರ್.ವೃತ್ತದಲ್ಲಿ ಕನ್ನಡದ ಬಾವುಟವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹೋರಾಟಗಾರ್ತಿ ಮಾಲಿನಿ ಧ್ವಜಾರೋಹಣ ಮಾಡಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ವಾಣಿಜ್ಯ ಮಳಿಗೆಗಳು ಕನ್ನಡದ ನಾಮಫಲಕ ಹಾಕಲು ಹಿಂದೇಟು ಹಾಕಿದ್ದು, ಈ ಬಗ್ಗೆ ಹೋರಾಟ ಮಾಡಿದರೂ ಸಹ ಅವರಿಂದ ಕನ್ನಡಕ್ಕೆ ಅವಮಾನವಾಗುತ್ತಿದೆ. ಆಳುವ ಸರ್ಕಾರ ಇವರ ಬಗ್ಗೆ ಕಟ್ಟುನಿಟ್ಟದ ಕ್ರಮ ವಹಿಸುತ್ತಿಲ್ಲ. ಬದಲಿಗೆ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸುತ್ತಿದೆ. ಐಟಿಬಿಟಿ ಕಂಪನಿಗಳಲ್ಲಿ ಕನ್ನಡದವರಿಗೆ ಸರಿಯಾದ ರೀತಿ ಆದ್ಯತೆ ನೀಡುತ್ತಿಲ್ಲ. ನಮ್ಮ ಭೂಮಿ ಕೊಟ್ಟರೂ ಇವರಿಂದ ಯಾವುದೇ ರೀತಿ ಕನ್ನಡದ ಅಭಿಮಾನ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ನಾಲಾಬೀದಿ ರವಿ, ಡಾ.ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವಸ್ವಾಮಿ ಕಾವೇರಮ್ಮ, ಶಿಕ್ಷಕರಾದ ಮನೋಹರ್, ಗೋವಿಂದರಾಜ್, ಹರೀಶ್, ಪ್ರಗತಿ ಪ್ರತಿಷ್ಠಾನದ ಅಜಯ್ ಕುಮಾರ್ ಜೈನ್, ಮದನ್, ಪಾಲಾಕ್ಷ ಇನ್ನಿತರರಿದ್ದರು.
ಡಿಎಸ್‌ಎಂ ಶಿಕ್ಷಣ ಸಂಸ್ಥೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಡೆಯಿತು. ಕವಿ ಡಾ.ಜಯಪ್ಪ ಹೊನ್ನಾಳಿ ಮಾತನಾಡಿ, ಕನ್ನಡ ಭಾಷೆ ಪ್ರತಿಶತ 99.99ರಷ್ಟು ತಾರ್ಕಿಕ, ವೈಜ್ಞಾನಿಕ ಹಾಗೂ ಪರಿಪೂರ್ಣವಾದ ಭಾಷೆ. ಜಗತ್ತಿನ ಪ್ರಾಚೀನ ಭಾಷೆಗಳಲ್ಲೇ ಮೂರನೆಯ ಭಾಷೆ. ಮೊದಲು ಸಂಸ್ಕೃತ, ಎರಡನೆಯದು ಗ್ರೀಸ್ ಹಾಗೂ ಮೂರನೆಯದೇ ಕನ್ನಡ ಭಾಷೆ. ಅಮೋಘವರ್ಷ ಕವಿರಾಜಮಾರ್ಗ ಬರೆದಾಗ, ಪಂಪ ಮಹಾಕಾವ್ಯ ಬರೆದಾಗ, ಆಂಗ್ಲ ಭಾಷೆ ತೊಟ್ಟಿಲಲ್ಲಿದ್ದರೆ, ಹಿಂದಿ ಹುಟ್ಟಿಯೇ ಇರಲಿಲ್ಲ ಎಂದರು.
ಅಷ್ಟೇ ಏಕೆ, ಅಂತಾರಾಷ್ಟ್ರೀಯ ಭಾಷೆಯಾದ ಆಂಗ್ಲಕ್ಕೆ ಕನ್ನಡದ ಹಾಗೆ ಸ್ವಂತ ಲಿಪಿಯೇ ಇಲ್ಲ. ಅದನ್ನು ರೋಮನ್ ಲಿಪಿಯಲ್ಲಿ ಬರೆಯಲಾಗುತ್ತಿದೆ. ಹಿಂದಿಗೂ ಸ್ವಂತ ಲಿಪಿಯಿಲ್ಲ. ಅದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತಿದೆ. ಅಂದ ಮೇಲೆ ಸ್ವಂತ ಲಿಪಿ ಹಾಗೂ ಅಂಕಿ ಹೊಂದಿರುವ ಕನ್ನಡದ ಶ್ರೀಮಂತಿಕೆ ಎಂತಹದ್ದೆಂದು ಯಾರಾದರೂ ತಿಳಿಯಬಹುದು ಎಂದರು. ಮು.ಶಿ.ಮುರಳೀಧರರಾವ್, ಶಿಕ್ಷಕರಾದ ಶಿವಮೂರ್ತಿ, ಶ್ರೀನಿವಾಸ್, ಹರೀಶ್, ಮಹದೇವಸ್ವಾಮಿ ಇದ್ದರು.
ಮೇಟಗಳ್ಳಿಯ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯೋಪಾಧ್ಯಾಯ ಎನ್.ಪಿ.ಸತೀಶ್ ಅವರು ರಾಷ್ಟ್ರಧ್ವಜಾರೋಣದ ನಂತರ ನಾಡಧ್ವಜಾರೋಣ ಮಾಡಿದರು. ಬಳಿಕ ಮಾತನಾಡಿ, ಭಾವನೆಗಳನ್ನು ಒಬ್ಬರಿಂದ ಒಬ್ಬರಿಗೆ ಕನ್ನಡ ಭಾಷೆಯಲ್ಲಿ ತಿಳಿಸುವುದು ಸುಲಭ ಸಾಧ್ಯವಾಗಿದೆ ಎಂದರು. ಶಿಕ್ಷಕರಾದ ಎಲ್.ಎನ್.ರವಿಶಂಕರ್, ಸುಮಂಗಲಾ ಜಂಗಮಶೆಟ್ಟಿ, ಬಿ.ಮಂಜುಳಾ, ಡಿ.ಚೇತನ್ ಇತರರಿದ್ದರು.
ಮೈಸೂರು ತಾಲೂಕಿನ ದೇವಲಾಪುರದ ಜೆಎಸ್‌ಎಸ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು. ಸಾಹಿತಿ ನಗರ್ಲೆ ಶಿವಕುಮಾರ್ ಅವರು ಕನ್ನಡ ನಾಡು-ನುಡಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಭಾಷಣ, ನೃತ್ಯ ಮತ್ತು ಹಾಡುಗಳೊಂದಿಗೆ ಮನರಂಜಿಸಿದರು. ಮುಖ್ಯಶಿಕ್ಷಕ ಬಿ.ಜಗದೀಶ ಇತರರಿದ್ದರು.