ಸಾಂಸ್ಕೃತಿಕ ನಗರಿ ಮೈಸೂರು ರಂಗ ಪ್ರದರ್ಶನ ಕಲೆಯ ತವರೂರು. ಆದರೀಗ ನಾಟಕ ಪ್ರದರ್ಶನಕ್ಕೆ ರಂಗಮಂದಿರಗಳ ಕೊರತೆ ಕಾಡುತ್ತಿದ್ದು, ರಂಗಮಂಚಕ್ಕೆ ಬೇಡಿಕೆ ತೀವ್ರವಾಗಿದೆ.
ರಂಗ ಚಟುವಟಿಕೆಗಳಿಗೆ ಉತ್ತೇಜನ ಕಲ್ಪಿಸುವುದು ಅಗತ್ಯವಾಗಿದೆ. ಈ ಕಲೆ ಉಳಿಸಿ ಬೆಳೆಸಲು ನಗರದ ನಾಲ್ಕು ದಿಕ್ಕಿನಲ್ಲೂ ರಂಗಸ್ಥಳ ನಿರ್ಮಾಣವಾಗಬೇಕು ಎಂಬುದು ರಂಗಕರ್ಮಿಗಳ, ರಂಗಾಸಕ್ತರ ಒತ್ತಾಸೆ.
ನಗರದಲ್ಲಿ ನಾಟಕ ಪ್ರದರ್ಶನಕ್ಕೆ ಸೂಕ್ತವಾದ ರಂಗವೇದಿಕೆಗಳು ಇರುವುದೇ 4 ಮಾತ್ರ. ಅತ್ಯುತ್ತಮ ಸೌಲಭ್ಯ ಇರುವುದು ರಂಗಾಯಣದ ಭೂಮಿಗೀತ ರಂಗಮಂದಿರ ಮಾತ್ರ. ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರ ಸಹ ಉತ್ತಮವಾಗಿದೆ. ಶಿಥಿಲಗೊಂಡಿರುವ ಪುರಭವನದಲ್ಲಿ ಪೌರಾಣಿಕ ನಾಟಕಕ್ಕೆ ಮಾತ್ರ ಸಿಮೀತವಾಗಿದೆ. ಇವುಗಳಷ್ಟೇ ಸರ್ಕಾರಿ ರಂಗಮಂದಿರಗಳು. ಉಳಿದಂತೆ ರಾಮಕೃಷ್ಣನಗರದಲ್ಲಿ ನಟನ ರಂಗವೇದಿಕೆ ಖಾಸಗಿ ಸಂಸ್ಥೆಯ ಅಧೀನದಲ್ಲಿ ಇದೆ. ಹೀಗಾಗಿ, ನಗರದಲ್ಲಿ ಹುಡುಕಿದರೆ ಒಂದೇ ಒಂದು ರಂಗಮಂದಿರ ದೊರೆಯುತ್ತದೆ.
ಭೂಮಿಗೀತ, ಕಿರುರಂಗಮಂದಿರ, ನಟನ ರಂಗವೇದಿಕೆಯಲ್ಲಿ ನಿರಂತರವಾಗಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ. ಪುರಭವನದಲ್ಲಿ ದಸರಾ ಹೊರತು ಪಡಿಸಿದರೆ ಅಪರೂಪಕ್ಕೆ ಪೌರಾಣಿಕ ನಾಟಕಗಳ ಪ್ರದರ್ಶನ ಕಾಣಬಹುದು. ಉಳಿದಂತೆ ರಂಗ ಚಟುವಟಿಕೆಗಳಿಗೆ ಸೂಕ್ತ ರಂಗವೇದಿಕೆ ಮೈಸೂರಿನಲ್ಲಿ ಸಿಗುವುದಿಲ್ಲ. ಇದ್ದರೂ ಅಲ್ಲಿ ನಾಟಕ ಮಾಡುವಂತಹ ವ್ಯವಸ್ಥೆ, ಸೌಲಭ್ಯ ಇರುವುದಿಲ್ಲ. ಹೀಗಾಗಿ, ರಂಗಮಂದಿರ ಅಗತ್ಯ ಹೆಚ್ಚಿದೆ.
ಒಂದು ಪಾಳಿಗೆ 3500 ರೂ. ಬಾಡಿಗೆ ಇರುವ ಇದು ನಾಟಕರಹಿತ ಚಟುವಟಿಕೆಗಳೂ ವಿನಿಯೋಗವಾಗುತ್ತದೆ. ಮಹನೀಯರ ಜಯಂತಿ, ವಿಚಾರಸಂಕಿರಣ, ಜಾನಪದ ಕಲೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಬಳಕೆಯಾಗುತ್ತದೆ. ಹೀಗಾಗಿ, ಮೈಸೂರಿನಲ್ಲಿ ಇರುವ ಬೇಡಿಕೆ ರಂಗಮಂದಿರ ಇದು.
ಆದರೆ, ಇದು ಸುಲಭಕ್ಕೆ ಸಿಗುವುದಿಲ್ಲ. ಕೆಲವರೇ ಹೆಚ್ಚು ಬಳಕೆ ಮಾಡಿಕೊಳ್ಳುತ್ತಾರೆ. ಇವರ ಸಂಸ್ಥೆಗಳು ಬುಕ್ಕಿಂಗ್ ಮಾಡಿ ಬೇರೆಯವರಿಗೆ ದೊರೆಯದಂತೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.
ಭೂಮಿಗೀತ ರಂಗಮಂದಿರ ಪೂರ್ಣಪ್ರಮಾಣದಲ್ಲಿ ರಂಗಾಯಣಕ್ಕೆ ಮಾತ್ರ ಸೀಮಿತವಾಗಿದೆ. ಈ ಸಂಸ್ಥೆಯ ಅಧೀನದಲ್ಲಿರುವ ನಾಟಕಗಳು ಮಾತ್ರ ಇಲ್ಲಿ ಪ್ರದರ್ಶನವಾಗುತ್ತದೆ. ಹವ್ಯಾಸಿ ರಂಗ ತಂಡಗಳಿಗೆ ಭೂಮಿಗೀತ ರಂಗಮಂದಿರ ನೀಡುವುದು ಕಡಿಮೆ.
ರಂಗಾಯಣದ ಸಹಯೋಗವಿದ್ದರೆ ಮಾತ್ರ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ರಂಗಾಯಣ ಕಲಾವಿದರು, ರಂಗಶಿಕ್ಷಣದ ವಿದ್ಯಾರ್ಥಿಗಳು ನಿತ್ಯ ತಾಲೀಮು ಮಾಡುವ ವೇದಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಅನ್ಯ ಸಂಸ್ಥೆಗಳಿಗೆ ಈ ವೇದಿಕೆ ಅಲಭ್ಯವಾಗಿರುತ್ತದೆ.
ಭೂಮಿಗೀತದ ಪಕ್ಕದಲ್ಲಿರುವ ಚಿಕ್ಕದಾದ ‘ಶ್ರೀರಂಗ’ದಲ್ಲಿ ನಾಟಕಕ್ಕೆ ಸೂಕ್ತವಾಗಿಲ್ಲ. ಅಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನಗಳು ಹಿಂದೆ ನಡೆಯುತ್ತಿದ್ದವು. ಅದು ಸಹ ಕಡಿಮೆಯಾಗಿದೆ. ಬಯಲು ರಂಗಮಂದಿರವಾಗಿರುವ ಕಾರಣಕ್ಕೆ ‘ವನರಂಗ’ ಬಳಕೆಯೂ ಕಡಿಮೆಯೇ.
ರಂಗಾಯಣದ ಆವರಣದಲ್ಲಿದ್ದರೂ ನಾಟಕ ಪ್ರದರ್ಶನ ಇದು ವರ್ಷವಿಡೀ ಬಳಕೆಯಾಗುವುದಿಲ್ಲ. ಮಳೆಗಾಲ, ಬೇಸಿಗೆಯಲ್ಲಿ ಇಲ್ಲಿ ನಾಟಕ ಪ್ರದರ್ಶನ ಮಾಡಲಾಗುವುದಿಲ್ಲ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸೇರಿದಂತೆ ವರ್ಷದಲ್ಲಿ ಬೆರಳೆಣಿಕೆಯಷ್ಟು ನಾಟಕಗಳು ಇಲ್ಲಿ ಪ್ರದರ್ಶನವಾಗುತ್ತವೆ. ಉಳಿದ ದಿನಗಳಲ್ಲಿ ಖಾಲಿ ಹೊಡೆಯುತ್ತದೆ.
ನಗರದ ಮೂಲೆಯಲ್ಲಿ ಖಾಸಗಿ ರಂಗಮಂದಿರ ‘ನಟನಾ’ದಲ್ಲಿ ನಾಟಕ ಪ್ರದರ್ಶನಕ್ಕೆ ಹವ್ಯಾಸಿ ರಂಗತಂಡಗಳು ಹೆಚ್ಚಾಗಿ ಆಸಕ್ತಿ ತೋರಲ್ಲ. ಪಾರ್ಕಿಂಗ್ ಸಮಸ್ಯೆ ಇರುವ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಹ ಸೇರಲ್ಲ. ಹೀಗಾಗಿ, ನಟನ ರಂಗಶಾಲೆಗೆ ಮಾತ್ರ ಹೆಚ್ಚು ಬಳಕೆಯಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಭವ್ಯವಾದ ಕಲಾಮಂದಿರ ನಾಟಕ ಪ್ರದರ್ಶನಕ್ಕೆ ಆಪ್ತವಾಗಿಲ್ಲ. ವಿಶ್ವ ಕನ್ನಡ ಸಮ್ಮೇಳನದ ಸ್ಮರಣಾರ್ಥವಾಗಿ 2 ಕೋಟಿ ರೂ.ವೆಚ್ಚದಲ್ಲಿ ಇದನ್ನು ತುರ್ತಾಗಿ ನಿರ್ಮಿಸಲಾಯಿತು.
ಇದು ಸಭಾಕಾರ್ಯಕ್ರಮಗಳಿಗೆ, ನೃತ್ಯ, ಭರತನಾಟ್ಯ, ಜಯಂತಿ, ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಹೊಂದಿಕೆಯಾಗುತ್ತದೆ. ಆದರೆ, ರಂಗಕಲೆ ಪ್ರದರ್ಶನಕ್ಕೆ ಸರಿಹೊಂದಲ್ಲ. ತಾಂತ್ರಿಕ ಸಮಸ್ಯೆಗೂ ಇವೆ. ಹಿಂಭಾಗ ಕುಳಿತ ಸಭಿಕರಿಗೆ ವೇದಿಕೆ ಮೇಲಿನ ಕಲಾವಿದರು ಕಾಣುವುದಿಲ್ಲ.
ಇಂಥ ಅನೇಕ ಸಮಸ್ಯೆಗಳು ಅಲ್ಲಿವೆ. ಹೀಗಾಗಿ, ರಂಗ ತಂಡಗಳು ಈ ಕಲಾಮಂದಿರವನ್ನು ರಂಗಭೂಮಿಗಾಗಿ ಬಳಕೆಗೆ ಮಾಡಲು ಹಿಂದೇಟು ಹಾಕುತ್ತಾರೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕಂಪನಿ ನಾಟಕಗಳ ಪ್ರದರ್ಶನಕ್ಕೆ ಇದು ಬಳಕೆಯಾಗುತ್ತದೆ.
ಹೆಚ್ಚು ಬಳಕೆಯಾಗುವ ಕಿರುರಂಗಮಂದಿರ, ರಂಗಾಯಣ ಇರುವುದು ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ. ಇದನ್ನು ಹೊರತುಪಡಿಸಿದರೆ ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ರಂಗಮಂದಿರ ಇಲ್ಲ.
12 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರದ ಜನರು ನಾಟಕ ವೀಕ್ಷಣೆಗೆ ಈ ಎರಡು ರಂಗಮಂದಿರಕ್ಕೆ ಬರಬೇಕಿದೆ. ದೂರ, ಸಂಚಾರ ದಟ್ಟಣೆ ಕಾರಣಕ್ಕೆ ದೂರದ ಎನ್‌ಆರ್ ಸೇರಿದಂತೆ ನಗರದ ಹೊರವಲಯದ ಜನರು ಇಲ್ಲಿಗೆ ಬರುವುದು ಕಡಿಮೆ.
ನಗರದ ನಾಲ್ಕು ದಿಕ್ಕಿನಲ್ಲೂ ಒಂದು ರಂಗಮಂದಿರ ನಿರ್ಮಾಣ ಮಾಡಬೇಕು. ಅದು ವಿವಿಧ ಪ್ರದರ್ಶನ ಕಲೆಗಳಿಗೂ ವೇದಿಕೆಯಾಗಬೇಕು. ವಿಚಾರ ಸಂಕಿರಣ, ಕಾರ್ಯಾಗಾರ, ಸಭಾ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕು. ಆ ರೀತಿಯಲ್ಲಿ ರಂಗಮಂದಿರ ನಿರ್ಮಿಸಬೇಕು.
ನಾಟಕ ಪ್ರದರ್ಶನಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿದ ರಂಗಮಂದಿರ ಎಲ್ಲ ಕಲೆಗಳ ಪ್ರದರ್ಶನಕ್ಕೂ ಸೂಕ್ತವಾಗಿರಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂಬುದು ರಂಗಕರ್ಮಿಗಳ ಆಗ್ರಹ.
ನಗರ ವ್ಯಾಪ್ತಿಯ ವಿಧಾನಸಭಾಕ್ಷೇತವಾರು ಕಿರುರಂಗಮಂದಿರ ನಿರ್ಮಾಣದ ಕುರಿತು ಚರ್ಚೆಯಾಗಿದೆ. ಆದರೆ, ನಮ್ಮ ಕಡೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಈ ಕುರಿತು ನಿರ್ದೇಶನ ಬಂದರೆ ಕ್ರಿಯಾಯೋಜನೆ, ನೀಲಿನಕ್ಷೆ ಸಲ್ಲಿಸಲಾಗುವುದು.
ಡಾ.ಎಂ.ಡಿ.ಸುದರ್ಶನ್
ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮೈಸೂರಿನ ಅಗತ್ಯತೆಗೆ ಇನ್ನೂ 4-5 ರಂಗಮಂದಿರಗಳು ಬೇಕಾಗಿದೆ. ನಗರದ ನಾಲ್ಕು ದಿಕ್ಕಿನಲ್ಲೂ ಮಾಡಿದರೂ ಅನುಕೂಲ. ಆದರೆ, ಮುಡಾ ನೀಡುವ 40*50 ಸಿಎ ನಿವೇಶನದಲ್ಲಿ ರಂಗಮಂದಿರ ನಿರ್ಮಿಸಲು ಆಗುತ್ತದೆಯೇ? ಜನವಸತಿಯ ಬಡಾವಣೆಯಲ್ಲಿ ನಿವೇಶನ ಕೊಟ್ಟರೆ ಅಲ್ಲಿ ವಾಹನ ನಿಲುಗಡೆ ಸಾಧ್ಯವಾಗಲಿದೆಯೇ? ಇಂತಹ ಸಣ್ಣ ವಿಷಯಗಳು ಅಧಿಕಾರಿ ವರ್ಗದವರಿಗೆ ಅರ್ಥವಾಗಲ್ಲ. ರಂಗಕಲೆಯ ಪರಿಣಿತರ ಅಭಿಪ್ರಾಯ ಪಡೆದು ನಗರದ ವಿವಿಧೆಡೆ ನಾಟಕ ಪ್ರದರ್ಶನಕ್ಕೆ ಹೊಂದಿಕೆಯಾಗುವ ವಿನ್ಯಾಸದಲ್ಲಿ ರಂಗಮಂದಿರವನ್ನು ನಿರ್ಮಾಣ ಮಾಡಬೇಕು.
ಎಂ.ಎಂ. ಸುಗುಣ
ರಂಗಕರ್ಮಿ