ಜಿಲ್ಲೆ

ಮೈಸೂರಿನಲ್ಲಿ ಮೇ 23ರಿಂದ ಮಾವು ಮೇಳ

ಮೈಸೂರು: ನೈಸರ್ಗಿಕವಾಗಿ ಮಾವು ಬೆಳೆಯುವ ರೈತರು ಹಾಗೂ ಮಾವು ಸವಿಯುವ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಸಲುವಾಗಿ ಮಾವು ಮೇಳವನ್ನು ಮೇ 23ರಿಂದ 25ರ ವರೆಗೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಲಾಗಿದೆ.

ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಮಾವು ಉತ್ಸವದಲ್ಲಿ ಬಾದಾಮಿ, ರಸಪುರಿ, ಮಲ್ಲಿಕಾ, ತೋತಾಪುರಿ, ಮಲ್ಗೊಬಾ, ಕೇಸರ್, ಸಕ್ಕರೆ ಗುದ್ದಿ ಸೇರಿದಂತೆ ವಿವಿಧ ಮಾವು ತಳಿಗಳು ಈ ಬಾರಿಯ ಮೇಳದಲ್ಲಿ ದೊರೆಯಲಿವೆ.

ಉತ್ತರ ಕರ್ನಾಟಕದ ಮಾವಿನ ತಳಿಯಾದ ‘ಕೇಸರ್’ ಈ ಸಲ ಆಕರ್ಷಣಿಯವಾಗಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ಮೇಳದಲ್ಲಿ ಕಾಣಸಿಗಲಿದೆ. ಇತರ ಮಾವಿನ ಹಣ್ಣಿಗೆ ಹೋಲಿಸಿದರೆ ಕೇಸರ್ ಮಾವಿನ ಹಣ್ಣು ಹೆಚ್ಚು ಸಿಹಿ ಹಾಗೂ ರುಚಿಕರವಾಗಿರುತ್ತದೆ.

ವಿವಿಧ ಜಿಲ್ಲೆಗಳ ಹಾಪ್‌ಕಾಮ್ಸ್‌ಗಳ ದರವನ್ನು ಪರಿಗಣಿಸಿ ದರವನ್ನು ನಿಗದಿಪಡಿಸಲಾಗುತ್ತದೆ.

ಈ ಸಲ 45 ಮಳಿಗೆಗಳನ್ನು ತೆರೆಯಲಾಗಿದೆ. ಮೈಸೂರು, ಹಾಸನ ರಾಮನಗರ, ಚನ್ನಪಟ್ಟಣ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಿಂದ ರೈತರು ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ಮಾವಿನ ಮೇಳದಲ್ಲಿ ಸುಮಾರು 130 ಟನ್ ಮಾವು ಬಂದಿದ್ದವು. ಈ ಬಾರಿ 200 ಟನ್ ಮಾವಿನ ಹಣ್ಣು ಬರುವ ನಿರೀಕ್ಷೆ ಇದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಇಳುವರಿ ಬಂದಿದ್ದು, ರೈತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೇಳದಲ್ಲಿ ಯಾವುದೇ ರೀತಿಯ ಕೃತಕವಾಗಿ ಹಣ್ಣು ಮಾಡಿದ ಮಾವಿನ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಮೇಳದಲ್ಲಿ ಭಾಗವಹಿಸುವ ರೈತರು ತಾವು ಬೆಳೆದ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಾಟ ಮಾಡುತ್ತಾರೆ. ರೈತರಿಗೆ ಕೃತಕ ಹಣ್ಣನ್ನು ಮಾರಾಟವ ಮಾಡಬಾರದೆಂಬ ಷರತ್ತನ್ನು ವಿಧಿಸಿದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕಿ ಮಮತಾ ತಿಳಿಸಿದ್ದಾರೆ.