ಜಿಲ್ಲೆ

ಮೈಸೂರಿನಲ್ಲಿ ಮುಕ್ತಕ ಸಾಹಿತ್ಯ ಕೃತಿ ಬಿಡುಗಡೆ

ಮೈಸೂರು: ಇಪ್ಪತ್ತನೇ ಶತಮಾನದವರೆಗೂ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪವಾದ ‘ಮುಕ್ತಕ’ ರಚನೆಯ ಬಗ್ಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ ಆಯೋಜಿಸಿದ್ದ ಸಾಹಿತ್ಯೋತ್ಸವ ದಲ್ಲಿ ಮುಕ್ತಕ ಕವಿಗಳಾದ ಎಂ.ಮುತ್ತು ಸ್ವಾಮಿ, ಕಮಲಾ ರಾಜೇಶ್, ಮಮತಾ, ಸುಮನಾ ರಾವ್, ಸುಜಾತಾ ರವೀಶ್ ಸಂಯುಕ್ತವಾಗಿ ರಚಿಸಿರುವ ‘ಪಂಚ ಮುಕ್ತಕ ಹಾರ’ ಕೃತಿ ಕುರಿತು ಮಾತನಾಡಿ, ಹನಿಗವನ, ಚುಟುಕುಗಳೆಲ್ಲವೂ ಮುಕ್ತಕವಾಗಲಾ ರವು. ಮುಕ್ತಕಕ್ಕೆ ಅದರದೇ ಆದ ವ್ಯಾಕರಣ, ಛಂದೋಬದ್ಧ ಭಾಷೆ ಇದೆ ಎಂದರು.

ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯದ ಗರ್ಭದೊಳಗೆ ಅನೇಕ ಸಾಹಿತ್ಯ ಪ್ರಕಾರಗಳಿದ್ದು, ಅದರಲ್ಲಿ ಮುಕ್ತಕ ಸಾಹಿತ್ಯವೂ ಪ್ರಮುಖವಾಗಿದೆ. ಛಂದಸ್ಸಿನಲ್ಲಿ ಅಕ್ಷರಗಣ, ಅಂಶಗಣ ಹಾಗೂ ಮಾತ್ರಗಣಗಳೆಂಬ ಮೂರು ವಿಧಗಳಿವೆ. ಇವನ್ನು ಇಟ್ಟುಕೊಂಡು ಮಾತ್ರಗಣಗಳ ಮೂಲಕ ಚೌಪದಿಯಲ್ಲಿ ಮುಕ್ತಕಗಳನ್ನು ರಚಿಸುವಾಗ ಗಣ, ಮಾತ್ರೆ, ಯತಿ, ಹಾಗೂ ಆದಿ ಪ್ರಾಸಗಳನ್ನು ಬಳಸಿ ಅಜ, ಗಜ, ಸಿಂಹ, ಮತ್ತು ವೃಷಭ ಪ್ರಾಸಗಳಲ್ಲಿ ರಚಿಸಬೇಕೆಂಬ ನಿಯಮವಿದ್ದು ಇದರಲ್ಲಿ ಸಾಕಷ್ಟು ಮಂದಿ ಯಶಸ್ವಿಯೂ ಆಗಿದ್ದಾರೆ ಎಂದು ಹೇಳಿದರು.

ಕನ್ನಡದ ಭಗವದ್ಗೀತೆ ಎಂದೇ ಸಾಹಿತ್ಯ ಲೋಕದಲ್ಲಿ ಪರಿಗಣಿಸಲ್ಪಟ್ಟಿರುವ ‘ಮಂಕುತಿಮ್ಮನ ಕಗ್ಗ’ ಎಂಬ ಮುಕ್ತಕ ಸಾಹಿತ್ಯದ ಬೃಹತ್ ಕೃತಿಯನ್ನು ರಚಿಸಿಕೊಟ್ಟು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಕವಿ ಡಿವಿಜಿ ಅವರು ಮುಕ್ತಕ ಸಾಹಿತ್ಯ ಕೃಷಿಕರಿಗೆ ಮಾದರಿಯಾಗಿದ್ದಾರೆ. ಈ ದಿಸೆಯಲ್ಲಿ ಮುಕ್ತಕ ಮೇಷ್ಟ್ರು ಎನಿಸಿರುವ ಮುಕ್ತಕ ಕವಿ ಮುತ್ತುಸ್ವಾಮಿ ಮುಕ್ತಕ ಸಾಹಿತ್ಯ ಅಕಾಡೆಮಿಯೊಂದನ್ನು ಸ್ಥಾಪಿಸಿ ತನ್ಮೂಲಕ ಮುಕ್ತಕ ಸಾಹಿತ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮುಕ್ತಕ ಕವಯತ್ರಿಯರಾದ ಕಮಲಾ ರಾಜೇಶ್, ಮಮತಾ, ಸುಮನಾ ರಾವ್, ಸುಜಾತಾ ರವೀಶ್ ಹಾಗೂ ಕೆ. ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಜರಗನಹಳ್ಳಿ ಸದಾಶಿವಯ್ಯ ‘ಪಂಚ ಮುಕ್ತಕ ಹಾರ’ ಕೃತಿ ಬಿಡುಗಡೆ ಮಾಡಿದರು.

ಉದ್ಯಮಿಗಳಾದ ರಾಘವೇಂದ್ರ ಪ್ರಸಾದ್, ಹರೀಶ್, ಬಿಎಸ್‌ಆರ್ ರೋಟರಿ ಮೈಸೂರ್ ಸ್ಟಾರ್ ಅಧ್ಯಕ್ಷ ಡಾ. ಸಂತೋಷ್ ಗೌಡ, ರೋಟರಿ ಸಹಾಯಕ ಗೌರ‌್ನರ್ ವಾಸುದೇವ್, ಕಲಾವಿದೆ ಡಾ.ಜಮುನಾ ರಾಣಿ ಮಿರ್ಲೆ, ಜೆಡಿಎಸ್ ಗ್ರಾಮಾಂತರ ವಿಭಾಗದ ಅಧ್ಯಕ್ಷ ಗಂಗಾಧರ ಗೌಡ, ಮುಕ್ತಕ ಕವಿ ಮುತ್ತುಸ್ವಾಮಿ, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಅನಂತ, ವಕೀಲ ಎಸ್.ಗಣೇಶ್, ಪತ್ರಕರ್ತ ಗ್ರಹೇಶ್ವರ್, ಲೇಖಕಿ ರತ್ನಾ ಹಾಲಪ್ಪಗೌಡ ಹಾಗೂ ಇತರರು ಇದ್ದರು.