ಜಿಲ್ಲೆ

ಮೈಸೂರಿನಲ್ಲಿ ಮಾ.26ಕ್ಕೆ ಪಂಚರತ್ನ ರಥಯಾತ್ರೆಯ ಸಮಾರೋಪ

ಮೈಸೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೈಗೊಂಡಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮಾ.26ರಂದು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 10 ಲಕ್ಷ ಜನ ಕಾರ್ಯಕರ್ತರನ್ನು ಸೇರಿಸುವ ಗುರಿ ಹೊಂದಲಾಗಿದೆ.


ನಗರದ ಹೊರವಲಯದ ಹೂಟಗಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ಗುರುವಾರ ಸಂಜೆ ಈ ಕಾರ್ಯಕ್ರಮದ ಕುರಿತು ಎಚ್.ಡಿ.ಕುಮಾರಸ್ವಾಮಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದರು.


ಪಂಚರತ್ನ ರಥಯಾತ್ರೆಗೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದೆ. ಹಳೇ ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪಂಚರತ್ನ ಯೋಜನೆಗಳು ತಮಗೆ ಅನುಕೂಲ ಆಗುತ್ತವೆ ಎನ್ನುವ ನಂಬಿಕೆ ಜನರಿಗೆ ಬಂದಿದೆ ಎಂದು ತಿಳಿಸಿದರು.


ಆ ಉತ್ಸಾಹದಿಂದ ಮೈಸೂರು ಜಿಲ್ಲೆಯಲ್ಲೂ ರಥಯಾತ್ರೆ ನಡೆಯಲಿದ್ದು, ಇಲ್ಲೇ ಬೃಹತ್ ಸಮಾರೋಪ ಸಮಾರಂಭ ನಡೆಸಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಸೂಚಿಸಿದರು.


ಈ ಕಾರ್ಯಕ್ರಮದ ಕುರಿತು ಶಾಸಕರಿಂದ, ಮುಖಂಡರಿಂದ ಸಲಹೆ ಸ್ವೀಕರಿಸಿದರು. ಮಾ.22, 26ರಂದು ಸಮಾರೋಪ ಆಯೋಜನೆ ಕುರಿತು ಸಮಾಲೋಚಿಸಲಾಯಿತು. ಅಂತಿಮವಾಗಿ ಮಾ.26ರಂದು ಆಯೋಜನೆಯೇ ಸೂಕ್ತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್, ಪುಟ್ಟರಾಜು, ಕೆ.ಮಹದೇವ್, ಎಂ.ಅಶ್ವಿನ್‌ಕುಮಾರ್, ರವೀಂದ್ರ ಶ್ರೀಕಂಠೇಗೌಡ, ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಎಸ್.ಎಲ್.ಬೋಜೇಗೌಡ, ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ ಇನ್ನಿತರರು ಇದ್ದರು