ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕಾಗಿ ಸಿದ್ಧತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಭರದಿಂದ ಸಾಗಿದ್ದು, ಗುರುವಾರ ನರಕ ಚತುರ್ದಶಿ ಆಚರಿಸಿರುವ ಜನರು ನ.2ರಂದು ಬಲಿಪಾಡ್ಯಮಿಗೆ ಸಜ್ಜಾಗಿದ್ದಾರೆ.
ನ.1ರಂದು ಲಕ್ಷ್ಮೀಪೂಜೆ ಮಾಡಲಾಗುತ್ತದೆ. ಅದೇ ದಿನ ಕನ್ನಡ ರಾಜ್ಯೋತ್ಸವವನ್ನೂ ಆಚರಣೆ ಮಾಡಲಾಗುತ್ತಿದೆ. ಶನಿವಾರ ಬಲಿಪಾಡ್ಯಮಿಯೊಂದಿಗೆ ದೀಪಾವಳಿ ಸಗಡರ ಕಳೆಗಟ್ಟಲಿದೆ.
ಹಿಂದು ಸಂಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ಪ್ರಮುಖ ಸ್ಥಾನ ಇದೆ. ನರಕ ಚತುರ್ದಶಿ ಬಳಿಕ ಬಲಿ ಪಾಡ್ಯಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬದ ಸಿದ್ಧತೆಗಳು ಬಿರುಸಿನಿಂದ ನಡೆಯಿತು.
ಹಬ್ಬದ ಅಂಗವಾಗಿ ಗುರುವಾರ ಮಾರುಕಟ್ಟೆಯಲ್ಲಿ ಎಲ್ಲೆಡೆ ಖರೀದಿಯ ಭರಾಟೆ ಕಂಡು ಬಂತು. ಮಕ್ಕಳ ನೋಟ ಮಾತ್ರ ಪಟಾಕಿಯತ್ತಲೇ ಕೇಂದ್ರೀಕರಣಗೊಂಡಿದ್ದರೆ, ಮಹಿಳೆಯರು ಮತ್ತು ಹಿರಿಯರಿಗೆ ಹಬ್ಬದ ತಯಾರಿಯಲ್ಲಿ ಸಕ್ರಿಯವಾಗಿದ್ದರು.
ಆಹಾರ ಪದಾರ್ಥಗಳು, ಪಟಾಕಿ, ಹಣತೆಯಿಂದ ಎಲ್ಲ ರೀತಿಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬದ ಸಂಭ್ರಮ ಕಳೆದುಕೊಳ್ಳಲು ಜನತೆ ತಯಾರಿಲ್ಲ ಎಂಬುದು ಅವರ ಸಿದ್ಧತೆಯಲ್ಲಿನ ಉತ್ಸಾಹದಲ್ಲಿ ಕಂಡುಬಂತು.
ನಗರದ ಮಾರುಕಟ್ಟೆ ಬೆಳಗ್ಗೆಯಿಂದಲೇ ಜನರಿಂದ ಗಿಜಿಗುಡುತ್ತಿತ್ತು. ವಹಿವಾಟು ಜೋರಾಗಿ ನಡೆಯುತ್ತಿತ್ತು. ಸಿಹಿ ತಿಂಡಿ, ಹೂವು ಹಣ್ಣಿನ ಬೆಲೆಯೂ ಅಧಿಕವಾಗಿತ್ತು. ಹಾಗೆಯೇ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಲಕ್ಷ್ಮೀ ಪೂಜೆಗೆ ತಯಾರಿ ಮತ್ತು ಅಂಗಡಿಗಳ ಅಲಂಕಾರಿಕ ಕೆಲಸವೂ ಬಹುತೇಕ ಕಡೆ ಕಂಡುಬಂತು. ಜತೆಗೆ ದೀಪಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆಯೇ ಮನೆಗಳನ್ನು ಅಲಂಕರಿಸುವ ಹಣತೆಯ ಖರೀದಿಯೂ ಹೆಚ್ಚಾಗಿತ್ತು. ಪೂಜಾ ಸಾಮಗ್ರಿ ಖರೀದಿ ಗರಿಗೆದರಿತ್ತು.
ಹಬ್ಬದ ಖರೀದಿ ಬಿರುಸು
ದೇವರಾಜ ಮಾರುಕಟ್ಟೆ, ಎಂ.ಜಿ. ರಸ್ತೆ ಮಾರುಕಟ್ಟೆ, ಅಗ್ರಹಾರ ವೃತ್ತ, ಧ್ವನಂತ್ರಿ ರಸ್ತೆ, ಇರ್ವಿನ್ ರಸ್ತೆ, ಸಯ್ಯಜಿರಾವ್ ರಸ್ತೆ, ಚಿಕ್ಕಗಡಿಯಾರ ವೃತ್ತ ಸೇರಿದಂತೆ ಇನ್ನಿತರ ಕಡೆ ಹಬ್ಬದ ಖರೀದಿ ಬಿರುಸುಗೊಂಡಿತ್ತು. ಸೇವಂತಿಗೆ ಹೂವು, ಬಾಳೆಕಂಬ, ಚೆಂಡು ಹೂವು, ಬಾಳೆಹಣ್ಣು, ತೆಂಗಿನಕಾಯಿ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳ ಮಾರಾಟ ಚುರುಕಾಗಿತ್ತು.
ಮತ್ತೊಂದೆಡೆ ಸಿಹಿ ತಿನಿಸು ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದರು. ಹಬ್ಬಕ್ಕೆ ಸಿಹಿ ತಿನಿಸು ಕೊಡುಗೆ ನೀಡುವುದಕ್ಕಾಗಿಯೇ ಗಿಫ್ಟ್ ಬಾಕ್ಸ್ ಸಿದ್ಧಪಡಿಸಲಾಗಿದ್ದು, ಅವುಗಳ ಖರೀದಿ ಜೋರಾಗಿಯೇ ಸಾಗಿತು.
ಪರಿಸರ ಮಾಲಿನ್ಯ ತಡೆಗಟ್ಟಲು ಕೆಲವರು ಪಟಾಕಿ ಸಿಡಿಸುವ ಬದಲು ಆಕಾಶಬುಟ್ಟಿ ಹಚ್ಚಲು ನಿರ್ಧರಿಸಿದ್ದು, ಇದರ ಅಂಗವಾಗಿ ಆಕಾಶಬುಟ್ಟಿ ಕೊಂಡುಕೊಳ್ಳುವಲ್ಲಿ ಕೆಲವರು ಮಗ್ನರಾಗಿದ್ದರು.
ದೀಪ ಬೆಳಗಿಸಲು ನಗರದ ಹಲವೆಡೆ ರಸ್ತೆ ಬದಿಗಳಲ್ಲಿ ಮಣ್ಣಿನ ಹಣತೆ ಮಾರಾಟ ಮಾಡಲಾಗುತ್ತಿತ್ತು. ಪಟಾಕಿ ಅಬ್ಬರದ ನಡುವೆಯೂ ಮಣ್ಣಿನ ಹಣತೆ ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು. ಕೆಲ ಕಡೆ ಪ್ಲಾಸ್ಟಿಕ್ ಹಣತೆಗಳೂ ಕಂಡು ಬಂದವು.
ಪಟಾಕಿ ವ್ಯಾಪಾರದ ಸದ್ದು:
ಪಟಾಕಿ ಭರಾಟೆ ಜೋರಾಗಿಯೇ ನಡೆದಿದೆ. ನಗರದ ಜೆ.ಕೆ.ಮೈದಾನ, ಕುವೆಂಪುನಗರ, ಸರಸ್ವತಿಪುರಂ, ಲಲಿತಮಹಲ್ ಪ್ಯಾಲೇಸ್ ಬಳಿ ಮುಡಾ ಮೈದಾನ, ಚಾಮುಂಡಿಪುರಂ, ಹೆಬ್ಬಾಳು ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧೆಡೆ ತೆರೆದಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಬಿರುಸಾಗಿ ನಡೆಯಿತು.
ಪರಿಸರಕ್ಕೆ ಪೂರಕವಾದ ಹಸಿರು ಪಟಾಕಿ ಮಾರಾಟ ಮಾಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪರಿಸರ ಮಾರಕ ಹಾಗೂ ಹೆಚ್ಚು ಶಬ್ದ ಸೂಸುವ ಪಟಾಕಿ ಮಾರಾಟ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತೆರೆದಿರುವ ಮಳಿಗೆಗಳಲ್ಲಿ ಹಸಿರು ಪಟಾಕಿಯನ್ನಷ್ಟೇ ಗ್ರಾಹಕರು ಖರೀದಿಸುತ್ತಿದ್ದರು.
ಕೆಲ ಮಳಿಗೆಗಳಲ್ಲಿ ಗ್ರಾಹಕರು ಚಿಕ್ಕ ಪೊಟ್ಟಣಗಳ ಪಟಾಕಿ ಖರೀದಿಸಿದರೆ, ಕೆಲವರು ದೊಡ್ಡ ದೊಡ್ಡ ಬಾಕ್ಸ್ ಪಟಾಕಿ ಖರೀದಿಸುತ್ತಿದ್ದರು. ಬಹುತೇಕ ಎಲ್ಲ ಬಾಕ್ಸ್‌ಗಳ ಮೇಲೆ ಹಸಿರು ಪಟಾಕಿ ಚಿಹ್ನೆ ಇತ್ತು. ಪಟಾಕಿ ಬಾಕ್ಸ್‌ಗೆ 230 ರಿಂದ 2500 ರೂ.ವರೆಗೆ ಬೆಲೆ ನಿಗದಿ ಮಾಡಲಾಗಿತ್ತು. ಪಟಾಕಿ ಬೆಲೆ ಹೆಚ್ಚಾಗಿದ್ದರೂ ಗ್ರಾಹಕರು ಮಾತ್ರ ಪಟಾಕಿ ಖರೀದಿಸಲು ಹಿಂದೇಟು ಹಾಕದೆ ವಿವಿಧ ಬಗೆಯ ಪಟಾಕಿ ಖರೀದಿಸಿ ಮನೆಗೆ ಕೊಂಡೊಯ್ದರು.