ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಪ್ರಸ್ತಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಳೇ ಮೈಸೂರು ಪ್ರಾಂತ್ಯದ ಶಕ್ತಿಕೇಂದ್ರವಾದ ಮೈಸೂರಿನಲ್ಲೇ ಒಂದೇ ಒಂದು ಬೃಹತ್ ರಾಜಕೀಯ ಸಮಾವೇಶ ನಡೆಯಲಿಲ್ಲ…!
ಪ್ರತಿ ಚುನಾವಣೆಯಲ್ಲಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಒಂದಲ್ಲ ಒಂದು ಪ್ರಚಾರ ಸಮಾವೇಶ ನಡೆಯುವುದು ಸಾಮಾನ್ಯ. ಪ್ರಧಾನಿಯಿಂದ ಹಿಡಿದು ರಾಷ್ಟ್ರ ನಾಯಕರು ಪ್ರಚಾರ ಮಾಡಿ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ.
ಆದರೆ ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ಸಾವಿರಾರು ಜನರು ಸೇರಿರುವ ಸಮಾವೇಶ ಆಯೋಜನೆ ಮಾಡಲಿಲ್ಲ. ಜೆ.ಕೆ. ಮೈದಾನದಲ್ಲೂ ಪ್ರಚಾರ ಸಭೆ ನಡೆಯಲಿಲ್ಲ. ಈ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಆಸಕ್ತಿ ತೋರಲಿಲ್ಲ.
ಪ್ರಮುಖ ಪಕ್ಷಗಳು ಬೃಹತ್ ಸಮಾವೇಶ ಆಯೋಜನೆಗೆ ಅಷ್ಟಾಗಿ ಮನಸ್ಸು ಮಾಡಲಿಲ್ಲ. ಬದಲಿಗೆ ಕ್ಷೇತ್ರವಾರು ಪ್ರಚಾರ ಸಭೆ, ಮನೆ ಮನೆ ಪ್ರಚಾರಕ್ಕೆ ಈ ಸಲ ಹೆಚ್ಚಿನ ಒತ್ತು ನೀಡಿದ್ದು ವಿಶೇಷ.
ಮಹಾರಾಜ ಮೈದಾನದಲ್ಲಿ ಮಾತಿಲ್ಲ, ಕಥೆವಿಲ್ಲ:
ಚುನಾವಣಾ ಘೋಷಣೆಗೂ ಮುನ್ನವೇ ಬಿಜೆಪಿ ವತಿಯಿಂದ ಚಾಮರಾಜ ಕ್ಷೇತ್ರದ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಏಪ್ರಿಲ್ 5ರಂದು ಆಯೋಜಿಸಲಾಗಿತ್ತು. ರಾಜ್ಯ ಬಿಜೆಪಿ ಸಹ ಉಸ್ತುವಾರಿ ಅಣ್ಣಾಮಲೈ, ಶಾಸಕ ಕೆ.ಎಸ್. ಈಶ್ವರಪ್ಪ ಇನ್ನಿತರರು ಇದ್ದರು. ಬಳಿಕ ಇಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ, ಸಮಾವೇಶ ನಡೆಯಲಿಲ್ಲ. ಗಣ್ಯ ನಾಯಕರ ಮಾತಿಗೆ ಸಾಕ್ಷಿಯಾಗುತ್ತಿದ್ದ, ಪ್ರತಿಸ್ಪರ್ಧಿಗಳ ವಿರುದ್ಧ ಟೀಕೆ, ಆರೋಪಕ್ಕೆ ವೇದಿಕೆಯಾಗುತ್ತಿದ್ದ ಈ ಮೈದಾನದಲ್ಲಿ ಈ ಸಲ ಚುನಾವಣಾ ಆಶ್ವಾಸನೆಗಳು ಮೊಳಗಲಿಲ್ಲ.
ಜೆಡಿಎಸ್ ಕ್ಷೇತ್ರವಾರು ಮತಪ್ರಚಾರ:
ಚುನಾವಣೆಗೆ ಮುನ್ನವೇ ಮೈಸೂರಿನ ಹೊರವಲಯ ಉತ್ತನಹಳ್ಳಿ ಬಳಿ ಪಂಚರತ್ನ ಯಾತ್ರೆ ಸಮಾವೇಶವನ್ನು ಜೆಡಿಎಸ್ ಆಯೋಜಿಸಿತ್ತು. ಬಳಿಕ ಚುನಾವಣೆ ಸಂದರ್ಭದಲ್ಲಿ ಕೃಷ್ಣರಾಜ, ಚಾಮರಾಜ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾತ್ರಿ ಹೊತ್ತಿನಲ್ಲಿ ರೋಡ್ ಶೋ ನಡೆಸಿದರು. ಜಿಲ್ಲೆಯ ಗ್ರಾಮಾಂತರ ಕ್ಷೇತ್ರಗಳಲ್ಲಿ ಸಮಾವೇಶವನ್ನು ನಡೆಸಿ ಶಕ್ತಿಪ್ರದರ್ಶನ ಮಾಡಿದ ಜೆಡಿಎಸ್ ಮಹಾರಾಜ ಕಾಲೇಜು ಮೈದಾನದಲ್ಲಿ ಈ ಸಲ ಸಮಾವೇಶವನ್ನೇ ಹಮ್ಮಿಕೊಳ್ಳಲಿಲ್ಲ.
ಕೈ-ಕಮಲದ ಆರ್ಭಟವೂ ಇಲ್ಲ:
ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿ ಈ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಅಬ್ಬರಿಸುತ್ತಿದ್ದವು. ಈ ಸಲ ಯಾವುದೇ ಆರ್ಭಟವೂ ಇರಲಿಲ್ಲ.
ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರೂ ಬರಲಿಲ್ಲ
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಅಧ್ಯಕ್ಷರು ನಗರದಲ್ಲಿ ಮತಪ್ರಚಾರ ಮಾಡಲಿಲ್ಲ. ಕಳೆದ ಬಾರಿ ಬಂದಿದ್ದ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಷಾ ಈ ಸಲ ಜಿಲ್ಲೆಯಲ್ಲಿ ಮತಪ್ರಚಾರ ಮಾಡಲಿಲ್ಲ. ಈ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಕದ ಜಿಲ್ಲೆಯಲ್ಲೇ ತಿರುಗಾಡಿದ್ದರೂ ಮೈಸೂರಿಗೆ ಬರಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಮೈಸೂರು ಜಿಲ್ಲೆಯಲ್ಲಿ ಮತಪ್ರಚಾರ ಮಾಡಲಿಲ್ಲ. ಕಳೆದ ಬಾರಿ ಖರ್ಗೆ ಅವರು ಲೋಕಸಭಾ ಪ್ರತಿಪಕ್ಷ ನಾಯಕರಾಗಿ ಅಬ್ಬರದ ಪ್ರಚಾರ ಮಾಡಿದ್ದರು. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡರು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಮಾಡಿದರೇ ಹೊರತು, ನಗರದಲ್ಲಿ ಮತಪ್ರಚಾರ ನಡೆಸಲಿಲ್ಲ. ಕಳೆದ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಿದ್ದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಈ ಸಲ ಬರಲಿಲ್ಲ.
ಪ್ರಿಯಾಂಕಾ ಬಂದರು, ರಾಹುಲ್ ಬರಲಿಲ್ಲ:
ಕೆಲ ನಾಯಕರು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಇತರ ಕಡೆ ಪ್ರಚಾರಕ್ಕೆ ತೆರಳಿದರು. ಗಣ್ಯನಾಯಕರು ಮೈಸೂರು ನಗರ ಬದಲಿಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ತಮ್ಮ ಪಕ್ಷಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ತಿ.ನರಸೀಪುರ ಕ್ಷೇತ್ರದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರು, ಕೆ.ಆರ್. ನಗರ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಭಾರತ್ ಜೋಡೋ ಯಾತ್ರೆಯನ್ನು ಮೈಸೂರಿನಲ್ಲಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನ ಕಡೆ ಬರಲಿಲ್ಲ. 2018ರಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಜನಾಶೀರ್ವಾದ ಸಮಾವೇಶ’ದಲ್ಲಿ ಭಾಗಿಯಾಗಿದ್ದರು.
ರೋಡ್ ಶೋಗೆ ಮೊರೆ ಹೋದ ಮೋದಿ:
ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಈ ಸಲ ಸಮಾವೇಶದ ಬದಲಿಗೆ ರೋಡ್ ಶೋಗೆ ಮೊರೆ ಹೋಗುವ ಸಂಚಲನ ಸೃಷ್ಟಿಸಿದರು. ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಮೂರು ಸಲ ಬಂದಿರುವುದು ವಿಶೇಷ. ಹುಲಿಯೋಜನೆ 50ನೇ ವರ್ಷಾಚಣೆ ಮತ್ತು ಬಂಡೀಪುರದಲ್ಲಿ ಸಫಾರಿಗಾಗಿ ನಗರದಲ್ಲೇ ಎರಡು ದಿನ ಉಳಿದುಕೊಂಡಿದ್ದರು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮದ ಹೊರತು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಮತಪ್ರಚಾರಕ್ಕಾಗಿ ಏ.30ರಂದು ಬಂದಿದ್ದ ಮೋದಿ ಅವರು, ನಗರದಲ್ಲಿ 5 ಕಿ.ಮೀ. ಭರ್ಜರಿ ರೋಡ್ ಶೋ ನಡೆಸಿ ಕಮಲ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾಗಿದ್ದರು. ಬಹಿರಂಗ ಪ್ರಚಾರಕ್ಕೆ ಕೊನೇ ಒಂದು ದಿನ ಮುನ್ನ ನಂಜನಗೂಡು ತಾಲೂಕಿನ ಬೃಹತ್ ರಾಜಕೀಯ ಸಮಾವೇಶ ನಡೆಸಿ ವಿಧಾನಸಭಾ ಚುನಾವಣೆ ಪ್ರಚಾರವನ್ನು ಕೊನೆಗೊಳಿಸಿದ್ದಾರೆ.
ಅಂದು ಚಾಮುಂಡೇಶ್ವರಿ, ಇಂದು ವರುಣದಲ್ಲಿ ಸಿದ್ದು ಬಂಧಿ:
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮತಪ್ರಚಾರ ಮಾಡಲು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈ ಸಲವೂ ಆಗಿಲ್ಲ.
ಕಳೆದ ಚುನಾವಣೆಯಲ್ಲಿ ಸಿಎಂ ಆಗಿದ್ದ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರನ್ನು ಬಿಜೆಪಿ, ಜೆಡಿಎಸ್ ಸೇರಿಕೊಂಡು ಕಟ್ಟಿಹಾಕಿದ್ದವು. ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರು ಕಳೆದ ಬಾರಿ ತೀವ್ರ ಸ್ಪರ್ಧೆಯೊಡ್ಡಿದ್ದರು. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ತಮ್ಮ ಪ್ರಚಾರಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದ ಅವರು, ಮೈಸೂರು-ಚಾಮರಾಜನಗರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಕೊಡಲು ಆಗಿರಲಿಲ್ಲ. ಒಮ್ಮೆ ಮಾತ್ರ ಹೋಗಿ ಬಂದಿದ್ದರು. ಈ ಸಲವೂ ಇದು ಪುನರಾವರ್ತನೆಯಾಗಿದೆ.
ವರುಣ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರನ್ನು ಈ ಸಲವೂ ಬಿಜೆಪಿ ಕಟ್ಟಿ ಹಾಕಿದೆ. ಚುನಾವಣೆ ಘೋಷಣೆ ಆದ ಬಳಿಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದ ಅವರು, ಬಹಿರಂಗ ಪ್ರಚಾರಕ್ಕೆ ಒಂದು ದಿನ ಮುನ್ನವಾದ ಭಾನುವಾರ ಎಚ್.ಡಿ.ಕೋಟೆ, ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ಕ್ಷೇತ್ರದಲ್ಲಿ ಮತಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಜಿಲ್ಲೆಯ ನಂಜನಗೂಡು, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ.