ಜಿಲ್ಲೆ

ಮೈಸೂರಿನಲ್ಲಿ ಫೆ.14 ರಂದು ಬೃಹತ್ ಉದ್ಯೋಗ ಮೇಳ : ಶಾಸಕ ಎಸ್.ಎ. ರಾಮದಾಸ್

ಮೈಸೂರು: ಸರ್ಕಾರ ನಾಗರಿಕ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರ ಸದುಪಯೋಗ ಮಾಡಿಕೊಳ್ಳಿ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದರು.

ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 50 ಹಾಗೂ 55ನೇ ವಾರ್ಡಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸರ್ಕಾರಿ ಸವಲತ್ತುಗಳ ಅದಾಲತ್, ವಾರ್ಡ್ ಸಮಸ್ಯೆಗಳ ಪರಿಹಾರ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಸ್ಯೆಗೆ ಪರಿಹಾರ ಕೇಳಿಕೊಂಡು ನೀವು ಸರ್ಕಾರಿ ಕಚೇರಿಗೆ ಹೋಗುವ ಬದಲಾಗಿ ಸಮಸ್ಯೆ ಬಗೆಹರಿಸಲು ಸರ್ಕಾರಿ ವ್ಯವಸ್ಥೆಯೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಜನವರಿ 23ನೇ ತಾರೀಖಿನಿಂದ ಅದಾಲತ್ ಕಾರ್ಯಕ್ರಮ ರೂಪಿಸಿದ್ದು, ನೀರು, ಒಳಚರಂಡಿ, ಅರಣ್ಯ, ರಸ್ತೆ, ಆರೋಗ್ಯ, ವಿದ್ಯುತ್, ಶಿಕ್ಷಣ, ಕಾರ್ಮಿಕರು ಸಮಸ್ಯೆಗಳು ಸೇರಿದಂತೆ 20 ಇಲಾಖೆಗಳ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಯನ್ನು ಯೋಜನೆಯಲ್ಲಿ ಜೋಡಿಸಿಕೊಂಡು ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಫೆ.14 ರಂದು 150 ಕಂಪನಿಗಳು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಅದೇ ಸ್ಥಳದಲ್ಲಿ ಕೌಶಲ್ಯ ತರಬೇತಿ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದರು. ಕ್ಷೇತ್ರದಲ್ಲಿ ನೆಲೆಸಿರುವ ಬಡವರಿಗೆ ಆಶ್ರಯ ಮನೆ ಅವಶ್ಯಕತೆ ಇದ್ದರೆ ಫೆ.15ರಂದು ಶಂಕರಮಠದಲ್ಲಿ ನೋಂದಣಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.