ಮೈಸೂರು: ನಗರದಲ್ಲಿ ಒತ್ತುವರಿಯಾಗಿದ್ದ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಮೈಸೂರು ನಗರಪಾಲಿಕೆ ಮುಂದಾಗಿದ್ದು, ವಿವಿಧ ರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರನ್ನು ಕಾರ್ಯಾಚರಣೆ ಮೂಲಕ ಬುಧವಾರ ತೆರವುಗೊಳಿಸಿದ ಅಧಿಕಾರಿಗಳು, ಮತ್ತೆ ವ್ಯಾಪಾರ ಮಾಡಲು ಮುಂದಾದರೆ ಗುರುವಾರದಿಂದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗ್ಗೆಯಿಂದಲೇ ಪಾಲಿಕೆ ವಲಯ 6ರ ವಲಯಾಧಿಕಾರಿ, ಹಿರಿಯ ಆರೋಗ್ಯಾಧಿಕಾರಿ ನಾಗರಾಜು ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಗೆ ಇಳಿದು ಸಯ್ಯಜಿರಾವ್ ರಸ್ತೆ, ಗಾಂಧಿವೃತ್ತದಲ್ಲಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗುವ ಫುಟ್‌ಪಾತ್ ವ್ಯಾಪಾರಸ್ಥರನ್ನು ಗುರುತಿಸಿದರು. ಸಯ್ಯಜಿರಾವ್ ರಸ್ತೆಯ ಒಂದು ಬದಿಯಲ್ಲಿ 150ಕ್ಕೂ ಹೆಚ್ಚು ಮಂದಿ ವ್ಯಾಪಾರ ಮಾಡುತ್ತಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಅತಿಕ್ರಮಣಕಾರರನ್ನು ತೆರವುಗೊಳಿಸಲಾಯಿತು.
ಮತ್ತೊಂದು ತಂಡ ಕಾರ್ಯಾಚರಣೆ:
ಪಾಲಿಕೆ ವಲಯ 1ರ ವಲಯಾಧಿಕಾರಿ ಮಂಜುನಾಥಶೆಟ್ಟಿ ನೇತೃತ್ವದಲ್ಲಿ ಮತ್ತೊಂದು ತಂಡ ಅರಮನೆ ಸುತ್ತಲ ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಸಿತು. ಈ ಸಂದರ್ಭದಲ್ಲಿ ಅರಮನೆ ಪ್ರವೇಶದ್ವಾರದಲ್ಲಿ ಅನಧಿಕೃತವಾಗಿ ಹಾಕಿಕೊಳ್ಳಲಾಗಿದ್ದ ಅಂದಾಜು 15 ಅಂಗಡಿಗಳನ್ನು ತೆರವುಗೊಳಿಸಲಾಯಿತು. ನಗರಪಾಲಿಕೆಯಿಂದಲೇ ಅನುಮತಿ ನೀಡಿದ್ದ 19 ಅಂಗಡಿಯವರು ಅರಮನೆ ಪ್ರವೇಶದ್ವಾರದ ಬಳಿಯೇ ವ್ಯಾಪಾರ ಮಾಡುತ್ತಿದ್ದರಿಂದ ಅವರಿಗೆ ಎಚ್ಚರಿಕೆ ನೀಡಿ, ವ್ಯಾಪಾರ ಮಾಡಲು ಪಾಲಿಕೆಯಿಂದ ಅನುಮತಿ ನೀಡಿರುವ ಮಹದೇಶ್ವರ ದೇವಸ್ಥಾನದ ಬಳಿ ಅಂಗಡಿ ಹಾಕಿಕೊಳ್ಳುವಂತೆ ಸೂಚನೆ ನೀಡಿದರು.
ಧ್ವನಿ ಎತ್ತಿದ್ದ ಪಾಲಿಕೆ ಸದಸ್ಯರು:
ನಗರದ ಹೃದಯಭಾಗದಲ್ಲಿ ಒತ್ತುವರಿ ಆಗುತ್ತಿದ್ದು, ಎಲ್ಲೆಂದರಲ್ಲಿ ಫುಟ್‌ಪಾತ್ ಮೇಲೆ ಅನಧಿಕೃತ ವ್ಯಾಪಾರಸ್ಥರು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಫುಟ್‌ಪಾತ್‌ನಲ್ಲಿ ಜನರು ಸಂಚಾರ ಮಾಡುವುದೇ ಕಷ್ಟವಾಗುತ್ತಿದೆ. ಪ್ರವಾಸಿಗರು ಹೆಚ್ಚಾಗಿ ಬರುವ ಅರಮನೆ ಸುತ್ತ, ಸಯ್ಯಜಿರಾವ್ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಅಶೋಕರಸ್ತೆ, ಮಂಡಿ ಮೊಹಲ್ಲಾ, ಗಾಂಧಿ ವೃತ್ತ, ಮಕ್ಕಾಜಿ ಚೌಕ, ಶಿವರಾಂಪೇಟೆ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಹಲವೆಡೆ ಪಾದಚಾರಿಗಳಿಗೆ ತಿರುಗಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಪಾಲಿಕೆ ಸಭೆಯಲ್ಲಿ ಸದಸ್ಯರು ಧ್ವನಿ ಎತ್ತಿದ್ದರು.
ಅಲ್ಲದೆ, ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿರುವ ಕಾರಣ, ಸಾರ್ವಜನಿಕರು ಫುಟ್‌ಪಾತ್ ಬಿಟ್ಟು ರಸ್ತೆಗಿಳಿಯುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಅಂತಹ ವ್ಯಾಪಾರಿಗಳನ್ನು ತೆರವುಗೊಳಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು.
ಸ್ಥಳ ಪರಿಶೀಲಿಸಿದ್ದ ಮೇಯರ್:
ಫುಟ್‌ಪಾತ್ ಅತಿಕ್ರಮಣ ವೀಕ್ಷಿಸಲು ಮೇಯರ್ ಶಿವಕುಮಾರ್ ಅವರು ಉಪಮೇಯರ್ ಡಾ. ರೂಪಾ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಹಿರಿಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ನಗರದ ಹೃದಯಭಾಗದಲ್ಲಿ ಪರಿಶೀಲನೆ ನಡೆಸಿ ಒತ್ತುವರಿ ಗುರುತಿಸಿದ್ದರು. ವೀಕ್ಷಣೆಯ ಸಂದರ್ಭದಲ್ಲಿಯೇ ಫುಟ್‌ಪಾತ್ ತೆರವುಗೊಳಿಸಬೇಕು. ಇಲ್ಲವಾದರೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವ ಎಚ್ಚರಿಕೆ ನೀಡಿದ್ದರು. ಅಷ್ಟಾಗಿಯೂ ಫುಟ್‌ಪಾತ್ ವ್ಯಾಪಾರಸ್ಥರು ತಮ್ಮ ವ್ಯಾಪಾರ ಮುಂದುರಿಸಿದ್ದರಿಂದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ನಿರಂತರವಾಗಿರಲಿ:
ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಸ್ವಾಗತಾರ್ಹ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದಲ್ಲದೆ, ನಗರದ ಸೌಂದರ್ಯವೂ ಹೆಚ್ಚುತ್ತದೆ. ಪ್ರವಾಸಿಗರಿಗೂ ಒಳ್ಳೆಯ ಭಾವನೆ ಬರುತ್ತದೆ. ಆದರೆ ತೆರವು ಕಾರ್ಯಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಹಿಂದೆ ಕಾರ್ಯಾಚರಣೆ ನಡೆದಾಗ ಕೆಲವು ದಿನ ಸುಮ್ಮನಿದ್ದು ಮತ್ತೆ ಫುಟ್‌ಪಾತ್ ಅತಿಕ್ರಮಣ ನಡೆದಿತ್ತು. ಆದ್ದರಿಂದ ಅದನ್ನು ನಿಯಂತ್ರಿಸಲು ತಂಡವೊಂದನ್ನು ನಿಯೋಜಿಸಿ ಶಾಶ್ವತವಾಗಿ ಹತೋಟಿಗೆ ತರಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು.
ದೇಶ, ವಿದೇಶದಿಂದ ಪ್ರವಾಸಿಗರು ಬರುವ ಅರಮನೆ ನಗರಿಯಲ್ಲಿ ಫುಟ್‌ಪಾತ್ ಅತಿಕ್ರಮಣ ಶೋಭೆ ತರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅರಮನೆ ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರು ನಡೆದುಕೊಂಡು ಅರಮನೆ ಒಳಗೆ ಪ್ರವೇಶಿಸಲು ಅಡ್ಡಿಯಾಗುವಂತೆ ಅನಧಿಕೃತ ವ್ಯಾಪಾರ ನಡೆಸಲಾಗುತ್ತಿತ್ತು. ದಿನದಿಂದ ದಿನಕ್ಕೆ ಫುಟ್‌ಪಾತ್‌ನಲ್ಲಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು.