ಮಂಜುನಾಥ ತಿಮ್ಮಯ್ಯ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಲ್ಲಿ ಗಲ್ಲಿಯಲ್ಲಿ ಫಾಸ್ಟ್‌ಫುಡ್ ಅಂಗಡಿಗಳು ಎಗ್ಗಿಲ್ಲದೆ ತಲೆಯೆತ್ತುತ್ತಿವೆ. ಇಲ್ಲಿ ಗುಣಮಟ್ಟ ಆಹಾರ ದೊರೆಯುತ್ತದೆಯೇ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ನಗರದ ಪ್ರತಿ ಬಡಾವಣೆಯ ಪ್ರಮುಖ ವೃತ್ತ, ರಸ್ತೆಗಳ ಬದಿ ಆಹಾರ ಅಂಗಡಿಗಳು ತೆರೆದುಕೊಂಡಿವೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ-ರಾತ್ರಿ ಲಘು ಉಪಾಹಾರ, ಊಟ, ಚಾರ್ಟ್ಸ್‌ಗಳು ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಗುಣಮಟ್ಟ ಆಹಾರದೊಂದಿಗೆ ಸ್ವಚ್ಛತೆ, ನಿಯಮಪಾಲನೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ. ರುಚಿಕಾರಕಗಳ ಬಳಕೆ ಹೆಚ್ಚಿದ್ದು, ಇದನ್ನು ತಡೆಗಟ್ಟಲು ಪಾಲಿಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ. ಸುರಕ್ಷಿತ ಜಾಗದಲ್ಲಿ ಫಾಸ್ಟ್‌ಫುಡ್ ವಲಯ ತೆರೆಯಬೇಕಿದೆ.
ಪಾಲಿಕೆಯಿಂದ ಪರವಾನಗಿ ಪಡೆದ ಫಾಸ್ಟ್‌ಫುಡ್ ಅಂಗಡಿಗಳ ಸಂಖ್ಯೆ ಬರೀ 3500. ಆದರೆ, ಅನಧಿಕೃತವಾಗಿ 20 ಸಾವಿರ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ನೂರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿರುವ ಈ ಅಂಗಡಿಗಳಲ್ಲಿ ಅಶುಚಿತ್ವ ಎದ್ದುಕಾಣುತ್ತದೆ.
ಪಾದಚಾರಿ ಮಾರ್ಗವನ್ನು ಆಕ್ರಮಿಸಿ ಇವುಗಳು ನೆಲೆವೂರಿವೆ. ಅಡುಗೆ ಅನಿಲ ಸಿಲಿಂಡರ್, ಸ್ಟೌಗಳಿರುತ್ತವೆ. ಬಾಂಡಲಿಗಳಲ್ಲಿ ಎಣ್ಣೆ ಕುದಿಯುತ್ತಿರುತ್ತದೆ. ಧೂಳು-ಗಾಳಿ, ಮಳೆ ನಡುವೆಯೂ ಇವುಗಳು ವಹಿವಾಟು ನಿರ್ವಹಿಸುತ್ತಿವೆ. ಇಲ್ಲಿ ಪೂರೈಕೆಯಾಗುವ ಆಹಾರದ ಶುದ್ಧತೆ, ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಫಾಸ್ಟ್‌ಫುಡ್ ಅಂಗಡಿಗಳ ಬಳಿ ಆಹಾರ ಬೇಯಿಸಿದ ಮಸಾಲೆ ಘಾಟು ಸವಾರರ ಮೂಗಿಗೆ ಬಡಿಯುತ್ತದೆ.
ಚರಂಡಿ ಪಕ್ಕದಲ್ಲೇ ವ್ಯಾಪಾರ ಮಾಡುತ್ತಿರುವುದಿರಂದ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಅಸಮರ್ಪಕ ಕಸ ನಿರ್ವಹಣೆ ಕಣ್ಣಿಗೆ ಕುಕ್ಕುತ್ತದೆ. ಜನನಿಬಿಡ ರಸ್ತೆಗಳ ಪಕ್ಕದಲ್ಲಿ, ಇಕ್ಕಟ್ಟಿನಲ್ಲೇ ಕಾಣಸಿಗುವ ಈ ಅಂಗಡಿಗಳಿಂದ ಸಂಚಾರ ದಟ್ಟಣೆ, ಪಾಕಿರ್ಂಗ್ ಸಮಸ್ಯೆಯೂ ಉಂಟಾಗುತ್ತಿದೆ.
ನಗರದ ಜೆಎಲ್‌ಬಿ ರಸ್ತೆ, ಆರ್‌ಟಿಒ(ಪಶ್ಚಿಮ) ವೃತ್ತ, ನಗರದ ವಾಣಿವಿಲಾಸ ರಸ್ತೆ, ಕೋರ್ಟ್ ಎದುರು, ಆಯಿಷ್-ಎಸ್‌ಜೆಸಿ ರಸ್ತೆ, ಕೃಷ್ಣವಿಲಾಸ ರಸ್ತೆ, ವಿಜಯನಗರ, ಕುವೆಂಪುನಗರ, ಸರಸ್ವತಿಪುರಂ, ದಟ್ಟಗಳ್ಳಿ, ಮಾನಂದವಾಡಿಯ ರಸ್ತೆಯ ಎನ್‌ಐಇ ಕಾಲೇಜು ಸಮೀಪ ಸೇರಿದಂತೆ ವಿವಿಧೆಡೆ ಚರಂಡಿಗಳ ಪಕ್ಕದಲ್ಲೇ ಅಂಗಡಿಗಳಿವೆ. ಮಳೆ ನೀರಿನ ಚರಂಡಿಗೆ ಇವುಗಳು ಕಸ ಹಾಕುತ್ತಿವೆ. ಅದನ್ನು ಶುಚಿಗೊಳಿಸುವುದು ಪೌರಕಾರ್ಮಿಕರಿಗೆ ಕಷ್ಟಕರವಾಗಿದೆ.
ತಿ.ನರಸೀಪುರ, ನಂಜನಗೂಡು, ಬೆಂಗಳೂರು, ಹುಣಸೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಬದಿ ಸಹ ನಿಯಮ ಮೀರಿ ಫಾಸ್ಟ್‌ಫುಡ್ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ರಿಂಗ್‌ರಸ್ತೆಯ ಜಂಕ್ಷನ್‌ಗಳಲ್ಲಿ ಹಾಗೂ ಸರ್ವೀಸ್ ರಸ್ತೆ ಬದಿಯಲ್ಲೂ ಇವುಗಳು ಕಾಣಸಿಗುತ್ತವೆ. ಅವುಗಳನ್ನು ತೆರವುಗೊಳಿಸಿ, ಪರ್ಯಾಯ ಜಾಗಗಳನ್ನು ಕಲ್ಪಿಸಿಕೊಡಬೇಕಾಗಿದೆ.
ಫಾಸ್ಟ್‌ಫುಡ್‌ಗಳು ಕೆಳ ಹಂತದ ಮದ್ಯದಂಗಡಿಗಳಿಗೆ ಸ್ನಾೃಕ್ಸ್(ತಿಂಡಿ) ಪೂರೈಸುತ್ತವೆ. ಜತೆಗೆ, ಇಲ್ಲಿ ಸಿಗುವ ಆಹಾರವನ್ನು ತೆಗೆದುಕೊಂಡು ರಸ್ತೆ ಬದಿಯಲ್ಲೇ ಮದ್ಯ ಸೇವನೆ ಮಾಡುವ ದೃಶ್ಯಗಳು ರಾತ್ರಿ ಹೊತ್ತಿನಲ್ಲಿ ರಿಂಗ್‌ರೋಡ್ ಆಸುಪಾಸು ಸಾಮಾನ್ಯ ಎನಿಸಿದೆ.
ಮಾಂಸಾಹಾರ ತಿನಿಸಿನ ಫಾಸ್ಟ್‌ಫುಡ್ ಕೇಂದ್ರಗಳಲ್ಲಿ ಬೀದಿನಾಯಿಗಳ ಹಾವಳಿಯೂ ಸೃಷ್ಟಿಸಿದೆ. ಇವುಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತವೆ. ನಾಯಿಗಳನ್ನು ದಿಢೀರನೆ ಓಡಿಸುವುದರಿಂದ, ಬೈಕ್ ಮೊದಲಾದ ವಾಹನಗಳಲ್ಲಿ ಹೋಗುವವರು ಅಪಘಾತಕ್ಕೆ ಒಳಗಾಗಿರುವ ನಿದರ್ಶನಗಳೂ ಇವೆ.
ಗುಣಮಟ್ಟ ಪರೀಕ್ಷೆ ಆಗುತ್ತಿಲ್ಲ
ರಸ್ತೆ ಬದಿ ತಯಾರು ಆಗುವ ಆಹಾರದ ಗುಣಮಟ್ಟದ ಪರೀಕ್ಷೆಯೂ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡುತ್ತಿಲ್ಲ. ಪಾಲಿಕೆಗೆ ಈ ಅಂಗಡಿ ತೆರೆಯಲು ಪರವಾನಗಿ ನೀಡುತ್ತದೆಯೇ ಹೊರತು ವ್ಯಾಪಾರಸ್ಥರು ಸಿದ್ಧಪಡಿಸುವ ಆಹಾರ ಗುಣಮಟ್ಟ ಪರೀಕ್ಷಿಸುವ ಅಧಿಕಾರ ಅದಕ್ಕಿಲ್ಲ. ಹೀಗಾಗಿ, ಇವುಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ತಿನಿಸಿನ ಗುಣಮಟ್ಟ ಪರೀಕ್ಷಿಸುವ ಅವಕಾಶ ಪಾಲಿಕೆಗೆ ಇಲ್ಲ. ಅದು ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆಗೆ ಸೇರಿದೆ. ಅವರು ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು. ಅದು ಸಹ ಆಗುತ್ತಿಲ್ಲ.
ಎಗ್ಗಿಲ್ಲದೆ ರುಚಿಕಾರಕ ಬಳಕೆ
ಟೇಸ್ಟಿಂಗ್ ಫೌಡರ್ ಎಂದೇ ಹೆಸರುವಾಸಿಯಾಗಿರುವ ಮೊನೊಸೋಡಿಯಂ ಗ್ಲುಟಾಮೇಟ್(ಎಂಎಸ್‌ಜಿ) ಅವ್ಯಾಹತವಾಗಿ ಬಳಕೆ ಮಾಡಲಾಗುತ್ತದೆ. ತಿನಿಸಿನ ರುಚಿ ಹೆಚ್ಚಿಸಿ ಗ್ರಾಹಕರು ಆಕರ್ಷಿಸಲು ಇದನ್ನು ನಿಯಮಮೀರಿ ಬಳಸಲಾಗುತ್ತಿದೆ. ನಿತ್ಯವೂ ಅತಿಯಾಗಿ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ ಎಂದು ವೈದ್ಯರೊಬ್ಬರು ತಿಳಿಸಿದರು
ತೆರವು ತಡೆಯಲು ರಾಜಕೀಯ ಒತ್ತಡ
ನಗರದಲ್ಲಿ ಫಾಸ್ಟ್‌ಫುಡ್ ಅಂಗಡಿಗಳು ವಿಪರೀತವಾಗಿವೆ. ಇವುಗಳನ್ನು ತೆರವುಗೊಳಿಸಲು ಮುಂದಾದರೆ ರಾಜಕೀಯ ಒತ್ತಡ ಬರುತ್ತದೆ. ಎಲ್ಲ ಗೊತ್ತಿದ್ದರೂ ಸುಮ್ಮನೆ ಇರಬೇಕಾದ ಸ್ಥಿತಿ ಇದೆ. ಹೊರ ರಾಜ್ಯದಿಂದ ಬಂದು ಪಾನಿಪುರಿ, ಚಾರ್ಟ್ಸ್ ಸೆಂಟರ್ ತೆರೆದಿದ್ದಾರೆ. ಇವರ ಅಂಗಡಿ ತೆರವು ಮಾಡಲು ಸಹ ಆಗುತ್ತಿಲ್ಲ. ಫಾಸ್ಟ್‌ಫುಡ್ ಅಂಗಡಿಗಳಲ್ಲಿ ತಯಾರಾಗುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ನಿಯಮಾವಳಿ, ಮಾರ್ಗಸೂಚಿಯನ್ನೂ ಪಾಲನೆ ಮಾಡುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೃತಕ ಬಣ್ಣ ಬಳಕೆ
ಗೋಬಿ ಮಂಚೂರಿ ಸೇರಿದಂತೆ ಇನ್ನಿತರ ತಿನಿಸಿನ ವಸ್ತುಗಳಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧವಿದ್ದರೂ ಅದು ಮುಂದುವರಿದಿದೆ. ಮೀನು, ವೆಜ್, ಚಿಕನ್ ಕಬಾಬ್ ಸೇರಿದಂತೆ ಎಲ್ಲ ರೀತಿಯ ಕಬಾಬ್‌ಗಳಲ್ಲೂ ಕೃತಕ ಬಣ್ಣ ಬಳಕೆ ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ನಗರದಲ್ಲಿ ಅಧಿಕೃತ ಮತ್ತು ಅನಧಿಕೃತ ಫಾಸ್ಟ್‌ಫುಡ್ ಅಂಗಡಿಗಳಿವೆ. ಪರವಾನಗಿ ಪಡೆಯದ ಅಂಗಡಿಗಳ ಪತ್ತೆಗಾಗಿ ಪಾಲಿಕೆ ಮತ್ತು ಆಹಾರ ಸುರಕ್ಷತಾ ಇಲಾಖೆಯೊಂದಿಗೆ ಜಂಟಿ ಕಾರ್ಯಚರಣೆ ನಡೆಸಲಾಗುವುದು. ಇವುಗಳ ಚಟುವಟಿಕೆಗಳ ಮೇಲೆಯೂ ನಿಗಾ ವಹಿಸಲಾಗುವುದು. ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ದಂಡ ಹಾಕಲಾಗುವುದು. ಪ್ರವಾಸಿಗರನ್ನು ಮೋಸಗೊಳಿಸುವ ನಕಲಿ ಬ್ರಾೃಂಡ್ ತಿನಿಸುಗಳ ತಡೆಗೂ ಕ್ರಮ ವಹಿಸಲಾಗುವುದು.
ಡಾ.ಎನ್.ಪಿ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ