ಜಿಲ್ಲೆ

ಮೈಸೂರಿನಲ್ಲಿ ಪಿಯು ಶಿಕ್ಷಣ ಬಲು ತುಟ್ಟಿ..!

ಮಂಜುನಾಥ ತಿಮ್ಮಯ್ಯ ಮೈಸೂರು

ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕಿಂತ ಪದವಿ ಪೂರ್ವ ಶಿಕ್ಷಣ ಬಲು ತುಟ್ಟಿಯಾಗಿದ್ದು, ಖಾಸಗಿ ಪಿಯು ಕಾಲೇಜುಗಳು ಪಾಲಕರ ಜೀವ ಹಿಂಡುತ್ತಿವೆ. ಈ ಸುಲಿಗೆಗೆ ಕಡಿವಾಣ ಹಾಕಬೇಕಿರುವ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಮತ್ತು ಜಿಲ್ಲಾಡಳಿತ ಜಾಣ ಮೌನಕ್ಕೆ ಜಾರಿದೆ.

ಬಹುತೇಕ ಪ್ರತಿಷ್ಠಿತ ಕಾಲೇಜುಗಳು ಪಠ್ಯಕ್ರಮ ಬೋಧನೆಯೊಂದಿಗೆ ‘ಇಂಟಿಗ್ರೇಟೆಡ್’ ಕಲಿಕೆಯ ಹೆಸರಿನಲ್ಲಿ ಡಬಲ್ ಶುಲ್ಕ ವಸೂಲಿ ಮಾಡುತ್ತಿವೆ. ಹೀಗಾಗಿ, ಈ ಎರಡು ಸೇರಿದರೆ ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ ಶುಲ್ಕವು 1.50 ಲಕ್ಷ ರೂ.ದಿಂದ 3.50 ಲಕ್ಷ ರೂ. ವರೆಗೂ ದಾಟುತ್ತದೆ. ಪಿಯು ಶಿಕ್ಷಣ ದಂಧೆಯಾಗಿರುವುದಕ್ಕೆ ಇದುವೇ ಸಾಕ್ಷಿ.

ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 306 ಪದವಿ ಪೂರ್ವ ಕಾಲೇಜುಗಳಿವೆ. ಈ ಪೈಕಿ ಖಾಸಗಿ ಕಾಲೇಜುಗಳದ್ದೇ ಸಿಂಹಪಾಲು. 187 ಅನುದಾನರಹಿತ ಖಾಸಗಿ ಕಾಲೇಜುಗಳಿವೆ.

80 ಸರ್ಕಾರಿ, 25 ಅನುದಾನಿತ, 3 ಅಲ್ಪಸಂಖ್ಯಾತರ ಕಾಲೇಜು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ(ಕ್ರೈಸ್) ವ್ಯಾಪ್ತಿಯ 2 ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು, ತಲಾ ಒಂದು ಏಕಲವ್ಯ ವಸತಿ ಕಾಲೇಜು, ಅಟಲ್‌ಬಿಹಾರಿ ವಾಜಪೇಯಿ ವಸತಿ ಕಾಲೇಜು ಇದೆ. ಇದರಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜುಗಳತ್ತ ಬಹಳಷ್ಟು ವಿದ್ಯಾರ್ಥಿಗಳು ಆಕರ್ಷಿತರಾಗಿದ್ದಾರೆ. ಗ್ರಾಮಾಂತರ, ಬಡವರ ಮಕ್ಕಳಿಗೆ ಸರ್ಕಾರಿ ಕಾಲೇಜುಗಳೇ ಅನಿವಾರ್ಯ ಆಯ್ಕೆಯಾಗಿವೆ.

ಪಾಲಕರು ಹೈರಾಣ:

ಪ್ರಥಮ ಪಿಯು ವಿಜ್ಞಾನ ಪ್ರವೇಶಕ್ಕೆ ಪ್ರತಿಷ್ಠಿತ ಕಾಲೇಜುಗಳು ಲಕ್ಷ ರೂ. ಲೆಕ್ಕದಲ್ಲಿ ಶುಲ್ಕ ವಿಧಿಸುತ್ತಿವೆ. ಮಕ್ಕಳನ್ನು ಡಾಕ್ಟರ್-ಇಂಜಿನಿಯರ್ ಮಾಡುವ ಕನಸು ಹೊತ್ತವರು ಸಾಲ ಮಾಡಿ ಪಿಯುಸಿ ಸೀಟು ಕೊಡಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಬಡ ಹಾಗೂ ಮಧ್ಯಮ ವರ್ಗದ ಬಹುತೇಕ ಪಾಲಕರು ಹೈರಾಣರಾಗಿದ್ದಾರೆ.

ಹೋಟೆಲ್‌ನಂತಿರುವ ದರ ಪಟ್ಟಿ:

ಪಿಯು ಶಿಕ್ಷಣದ ಶುಲ್ಕ ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. ರಾಜ್ಯ ಪಠ್ಯಕ್ರಮಕ್ಕಿಂತ ಸಿಬಿಎಸ್‌ಇಗೆ ಹೆಚ್ಚಿನ ಶುಲ್ಕ ಇದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಕಲಿಕೆಗೆ ಪೂರಕವಾಗಿ ಪಿಯು ಶಿಕ್ಷಣದ ಶುಲ್ಕದಲ್ಲೂ ಸಾಕಷ್ಟು ವ್ಯತ್ಯಾಸ ಇದೆ.ಹೋಟೆಲ್‌ನಲ್ಲಿ ಇಡ್ಲಿ,ವಡ್ಡಾ, ದೋಸೆ, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಾಹಾರಗಳಿಗೆ ಇರುವಂತೆ ಪಿಯು ಶುಲ್ಕದಲ್ಲೂ ದರ ಪಟ್ಟಿ ನಿಗದಿ ಪಡಿಸಲಾಗಿದೆ. ಅಲ್ಪಸ್ವಲ್ಪ ಹಣ ಕೂಡಿಟ್ಟ ಪಾಲಕರಿಗೆ ಈ ‘ದರ ಪಟ್ಟಿ’ ಕೇಳಿಯೇ ತಲೆತಿರುಗಿಬೀಳುವಂತಾಗುತ್ತದೆ.

ಲಕ್ಷ ರೂ ದಾಟು ಶುಲ್ಕ;

ಪ್ರಥಮ ಪಿಯು ಪಿಸಿಎಂಬಿ, ಪಿಸಿಎಂಸಿ ವಿಷಯ ಪ್ರವೇಶಕ್ಕೆ ಎರಡು ರೂಪದಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ. ಕೆಲ ಕಾಲೇಜುಗಳು ಕೇವಲ ಬೋಧನೆ ಆಧಾರಿತ ಪ್ರವೇಶಾತಿಯನ್ನು ಮಾತ್ರ ನೀಡುತ್ತಿವೆ. ಇಲ್ಲಿ ಸಾಮಾನ್ಯವಾಗಿ ಶುಲ್ಕ 50 ಸಾವಿರ ರೂ. ಶುರುವಾಗಿ 1 ಲಕ್ಷ ರೂ. ವರೆಗೂ ಇದೆ.

ಕೆ-ಸಿಇಟಿ, ಜೆಇಇ, ಜೆಇಇ ಮೇನ್ಸ್, ನೀಟ್ ಮೊದಲಾದ ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆಗಳಿಗೆ ಈಗ ಕಾಲೇಜುಗಳಲ್ಲೇ ತರಬೇತಿ ಕೊಡಲಾಗುತ್ತದೆ. ಹೆಚ್ಚಿನ ಕಾಲೇಜುಗಳಲ್ಲಿ ಸಾಮಾನ್ಯ ಪ್ರವೇಶ ಮತ್ತು ಇಂಟಿಗ್ರೇಟೆಡ್ ಕೋರ್ಸ್ ಸೇರಿದಂತೆ ಪ್ರಥಮ ಪಿಯುಸಿಗೆ ಕನಿಷ್ಠ 1 ಲಕ್ಷ ರೂ.ದಿಂದ 1.50 ಲಕ್ಷ ರೂ. ಶುಲ್ಕ ವಿಧಿಸಿವೆ. ಹೆಸರಾಂತ ಕಾಲೇಜುಗಳಲ್ಲಿ ಈ ಶುಲ್ಕವು 3 ಲಕ್ಷ ರೂ. ದಾಟುತ್ತದೆ.

ಬಹುತೇಕ ಪ್ರವೇಶಾತಿ ಮುಕ್ತಾಯ?:

ನಿಯಮಾವಳಿ ಉಲ್ಲಂಘನೆ ಮಾಡಿ ಬಹುತೇಕ ಕಾಲೇಜು ಪ್ರವೇಶ ಪ್ರಕ್ರಿಯೆ ನಡೆಸಿದ್ದು, ಇದು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಶೇ.90ರಷ್ಟು ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಆದರೆ, ಎಸ್ಸೆಸ್ಸೆಲ್ಸಿ, ಸಿಬಿಎಸ್‌ಇ-10 ತರಗತಿಯ ಪರೀಕ್ಷಾ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಫಲಿತಾಂಶಕ್ಕೂ ಮುನ್ನವೇ ದಾಖಲಾತಿ ಮಾಡಿಕೊಳ್ಳುವಂತಿಲ್ಲ ಎಂಬುದು ಸರ್ಕಾರಿ ನಿಯಮ ಜಿಲ್ಲೆಯಲ್ಲಿ ಎಲ್ಲಿಯೂ ಪಾಲನೆಯಾಗುತ್ತಿಲ್ಲ.

ಈಗಲೇ ಸೀಟ್ ಬೇಕೆಂದರೆ ಮೊದಲೇ ಬುಕ್ಕಿಂಗ್ ಮಾಡಬೇಕು ಎಂಬ ಷರತ್ತು ಸಹ ಹಾಕಿರುವ ಈ ಕಾಲೇಜುಗಳು, ಶುಲ್ಕದ ಅರ್ಧದಷ್ಟು ಹಣವನ್ನೂ ಕಟ್ಟಿಸಿಕೊಂಡಿವೆ. ಸೀಟು ಕೈ ತಪ್ಪಿಹೋಗಬಹುದು ಎಂಬ ಕಾರಣಕ್ಕೆ ಅನೇಕ ಪಾಲಕರು ಫಲಿತಾಂಶಕ್ಕೂ ಮುನ್ನವೇ ಹಣ ಪಾವತಿಸಿ ‘ಸೀಟ್’ ಖಾತ್ರಿ ಪಡಿಸಿಕೊಂಡಿದ್ದಾರೆ.

ವಿಶೇಷ ತರಬೇತಿ ಆಮಿಷ;

ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ತರಬೇತಿಯನ್ನೂ ನೀಡುವ ಆಮಿಷ ಒಡ್ಡುತ್ತಿವೆ. ಟ್ಯೂಷನ್‌ಗಾಗಿ ಬೇರೆ ಕಡೆ ಹೋಗುವಂತಿಲ್ಲ.

ಇಂಟಿಗ್ರೇಟೆಡ್ ಕಲಿಕೆ ಹೆಸರಿನಲ್ಲಿ ಆಯಾ ಕಾಲೇಜುಗಳಲ್ಲೇ ಪಾಠ ಪ್ರವಚನದೊಂದಿಗೆ ಹೆಚ್ಚುವರಿ ತರಗತಿ(ಟ್ಯೂಷನ್) ಸಹ ನೀಡುತ್ತಿವೆ. ಇಂಟಿಗ್ರೇಟೆಡ್ ಕಲಿಕೆಯು ಪಿಸಿಎಂಬಿ, ಪಿಸಿಎಂಸಿ ವಿಷಯಗಳ ಪಠ್ಯಕ್ರಮ ಬೋಧನೆಯ ಜತೆಗೆ ವೃತ್ತಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ತರಬೇತಿಯನ್ನೂ ಸೇರಿಕೊಂಡಿದೆ. ಸಾಮಾನ್ಯ ತರಗತಿಗಳ ಬಳಿಕ ವಿಶೇಷ ಕ್ಲಾಸ್‌ಗಳು ನಡೆಯುತ್ತವೆ. ಹೀಗಾಗಿ, ಮಕ್ಕಳು ಬೆಳಗ್ಗೆ ಹೋದರೆ ಸಂಜೆಯೇ ಕಾಲೇಜಿನಿಂದ ಹೊರ ಬರುವ ವಾತಾವರಣ ಇದೆ.

ನಗರದ ಕೆಲ ಕಾಲೇಜುಗಳು ಮಕ್ಕಳಿಗೆ ವೃತ್ತಿಪರ ಪರೀಕ್ಷೆಗಳ ತರಬೇತಿಗಾಗಿ ಅದಕ್ಕೆಂದೇ ಇರುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತವೆ. ಕಾಲೇಜಿನ ಉಪನ್ಯಾಸಕರು ಮಕ್ಕಳಿಗೆ ಸಾಮಾನ್ಯ ಪಠ್ಯಕ್ರಮ ಬೋಧಿಸಿದರೆ ನಂತರ ನಿಪುಣ ತರಬೇತುದಾರರು ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಿಗೆ ಬೇಕಾದ ತರಬೇತಿ ಕೊಡುತ್ತಾರೆ.

ನಿಯಮ ಏನು ಹೇಳುತ್ತದೆ?

ರೋಸ್ಟರ್ ಪ್ರಕಾರ ಸೀಟು ಸಂಖ್ಯೆಗಳನ್ನು ಪ್ರಕಟಿಸಬೇಕು. ಅನುಮೋದನೆ ಪಡೆದ ಬಳಿಕ ದಾಖಲಾತಿ ಶುರು ಮಾಡಬೇಕು. ಪ್ರವೇಶಾತಿಯ 1, 2, 3ನೇ ಪಟ್ಟಿ ಬಿಡುಗಡೆ ಮಾಡಬೇಕು. ಅಂತಿಮವಾಗಿ ಇದಕ್ಕೂ ಒಪ್ಪಿಗೆ ಪಡೆದುಕೊಳ್ಳಬೇಕು. ಬಳಿಕವೇ ಇಲಾಖೆಯ ಸ್ಯಾಟ್ಸ್‌ನಲ್ಲಿ ವಿದ್ಯಾರ್ಥಿಗಳ ಹೆಸರು ನೋಂದಣಿಯಾಗಲಿದೆ. ಜತೆಗೆ, ಅನುದಾನಿತ, ಖಾಸಗಿ ಕಾಲೇಜುಗಳು ಇಂತಿಷ್ಟು ಶುಲ್ಕ ಪಡೆಯಬೇಕೆಂಬ ನಿಯಮ ಇದೆ. ಪೇಮೆಂಟ್ ಸೀಟ್‌ಗೆ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಇದೆಲ್ಲ ನಿಯಮಗಳಿದ್ದರೂ ಸುಲಿಗೆ ನಿಂತಿಲ್ಲ.

ಯಾವುದೇ ಶಿಕ್ಷಣ ಸಂಸ್ಥೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೂ ಮುನ್ನವೇ ದಾಖಲಾತಿ ಪ್ರಕ್ರಿಯೆ ಶುರು ಮಾಡುವಂತಿಲ್ಲ. ದಾಖಲಾತಿ ಕುರಿತು ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಇಲ್ಲವಾದರೆ, ಅದು ಊರ್ಜಿತವಾಗಲ್ಲ. ಎಂ.ಮರಿಸ್ವಾಮಿ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಈಗಾಗಲೇ ಶೇ.50ರಷ್ಟು ಶುಲ್ಕವನ್ನು ಪಾವತಿಸಿದ್ದು, 10ನೇ ಕ್ಲಾಸ್ ಫಲಿತಾಂಶ ಬಂದ ತಕ್ಷಣ ಉಳಿದ ಹಣವನ್ನು ಕೊಡಬೇಕಿದೆ. ಶುಲ್ಕ ವಿಷಯದಲ್ಲಿ ಯಾವುದೇ ರಿಯಾಯಿತಿ ಕೊಡಲಿಲ್ಲ. ಹೆಚ್ಚಿಗೆ ಮಾತನಾಡಿದರೆ ಸರ್ಕಾರಿ ಕಾಲೇಜಿಗೆ ಹೋಗಿ ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ. ಪಿಯು ಶಿಕ್ಷಣ ಪಕ್ಕಾ ವ್ಯವಹಾರ ಆಗಿದೆ. ಲಕ್ಷ್ಮೀಕಾಂತ್, ಪಾಲಕರು