ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಜಿಲ್ಲಾದ್ಯಂತ ಪಿಒಪಿ ಗಣಪ ದಿಢೀರ್ ಪ್ರತ್ಯಕ್ಷವಾಗುತ್ತಿದ್ದು, ಇದಕ್ಕೆ ತಲೆದೂಗಿರುವ ಸ್ಥಳೀಯ ಆಡಳಿತ ವರ್ಗ, ನಿಷೇಧಿತ ವಸ್ತುಗಳಿಂದ ಮಾಡಿರುವ ಈ ಮೂರ್ತಿಗಳ ತಯಾರಿಕೆ, ಮಾರಾಟಕ್ಕೂ ಕಡಿವಾಣವೇ ಹಾಕಿಲ್ಲ. ಇದರಿಂದ ಇವುಗಳ ಹಾವಳಿ ಎಲ್ಲೆಡೆ ಕಣ್ಣು ಕುಕ್ಕುತ್ತಿದೆ...!
ಪರಿಸರ ಸ್ನೇಹಿ ಬಣ್ಣರಹಿತ ಗಣೇಶ-ಗೌರಿ ಮೂರ್ತಿಗಳ ದಾಸ್ತಾನು, ಸಾಗಣೆ ಮತ್ತು ಮಾರಾಟಕ್ಕೆ ಉತ್ತೇಜಿಸಲು 2023ರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿ ತಯಾರಿಕೆ, ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದರೆ, ಇದಕ್ಕೆ ಕವಡೆ ಕಿಮ್ಮತ್ತನ್ನು ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನೀಡಿಲ್ಲ. ಹೀಗಾಗಿ, ಈ ಆದೇಶ ಬಹುತೇಕ ಕಡೆಗೆ ಜಾರಿಯಾಗಿಲ್ಲ. ಸ್ಥಳೀಯ ಸಂಸ್ಥೆಗಳು ಜವಾಬ್ದಾರಿ ನಿರ್ವಹಣೆ ವಿಫಲವಾಗಿದೆ ಎಂಬುದು ರಾರಾಜಿಸುತ್ತಿರುವ ಪಿಒಪಿ ಗಣೇಶ ಮೂರ್ತಿ ನೋಡಿದಾಗಲೇ ಅನಿಸುತ್ತದೆ.
ಗಣೇಶ ಚತುರ್ಥಿಗೆ ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ನಿಷೇಧಿತ ಪಿಒಪಿ ಗಣೇಶ ವಿಗ್ರಹಗಳು ರಹಸ್ಯ ಸ್ಥಳಗಳಿಂದ ಸಾಲು ಸಾಲಾಗಿ ಹೊರಬರುತ್ತಿವೆ. ಬೀದಿಯಲ್ಲಿ ಇರಿಸಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ.
ನಗರದ ಹೃದಯಭಾಗದಲ್ಲಿರುವ ಜನಸಂದಣಿ ಪ್ರದೇಶವಾಗಿರುವ ಶಿವರಾಮಪೇಟೆ ಮತ್ತು ಉಮಾ ಚಿತ್ರಮಂದಿರದ ಬಳಿ ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿವೆ. ಇವುಗಳನ್ನು ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದು 5 ಸಾವಿರ ರೂ. ದಂಡ ವಿಧಿಸಿವೆ. ಇದು ನಿಷೇಧಿತ ಪಿಒಪಿ ವಿಗ್ರಹಗಳು ಮಾರಾಟವಾಗುತ್ತಿರುವುದು ಸಾಕ್ಷಿ.
ಅಲ್ಲದೆ, ಇರ್ವಿನ್ ರಸ್ತೆ, ಸಯ್ಯಜಿರಾವ್ ರಸ್ತೆ, ಕೆಆರ್‌ಎಸ್ ರಸ್ತೆ, ಜಯಲಕ್ಷ್ಮೀಪುರಂ, ಗೋಕುಲಂ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ಅವುಗಳಲ್ಲಿ ಹಲವು ಮೂರರಿಂದ ಐದು ಅಡಿ ಎತ್ತರ ಇವೆ. ಎಲ್ಲೆಡೆ ವ್ಯಾಪಾರವು ಜೋರಾಗಿ ನಡೆಯುತ್ತಿದೆ.
ದೊಡ್ಡ ವಿಗ್ರಹಗಳಿಗೆ ಪಿಒಪಿ ಸೂಕ್ತ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಪರಿಸರಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಮಾರಾಟ ಮತ್ತು ಖರೀದಿ ನಡೆಯುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಾರೆ. ಆದರೆ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಚಿಕ್ಕ ವಿಗ್ರಹಗಳಿಗೆ ಮಣ್ಣು ಒಳ್ಳೆಯದು. ಮಣ್ಣಿನಲ್ಲಿ ದೊಡ್ಡ ವಿಗ್ರಹ ಮಾಡಲು ಕಷ್ಟಕರ. ಜತೆಗೆ, ಪಿಒಪಿ ವಿಗ್ರಹಗಳು ಅಗ್ಗ, ಹಗುರವಾಗಿವೆ ಮತ್ತು ಸುಲಭವಾಗಿ ಒಡೆಯುವುದಿಲ್ಲ. ಸಾಗಣೆ ಸುಲಭವಾಗಿ ಮಾಡಬಹುದು. ಹೀಗಾಗಿ, ಗ್ರಾಹಕರೂ ಪಿಒಪಿ ಗಣೇಶ ಮೂರ್ತಿಯನ್ನೇ ಕೇಳುತ್ತಾರೆ. ನಾವು ಏನು ಮಾಡೋಣ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಅಗ್ಗದ ವಿಗ್ರಹಗಳು ಸಿಗುತ್ತವೆ, ಆದರೆ, ಉತ್ತಮ ಗುಣಮಟ್ಟದ ವಿಗ್ರಹಗಳು ಸಿಗುವುದಿಲ್ಲ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ.
ಪರಿಸರಕ್ಕೆ ಹಾನಿಕಾರಕ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)2016ರಲ್ಲಿ ಅಧಿಸೂಚನೆಯ ಮೂಲಕ ಪಿಒಪಿ ವಿಗ್ರಹಗಳನ್ನು ನಿಷೇಧಿಸಿದೆ. 2017ರ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿದೆ.
ಜಲಮೂಲಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದೆ. ಆದರೆ, ಪಿಒಪಿ ಹಾವಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಪಾಲಿಕೆ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳನ್ನು ಮುಂಚಿತವಾಗಿ ಸರಿಯಾಗಿ ಯೋಜನೆ ರೂಪಿಸಿ ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಪಿಒಪಿ ಹಾವಳಿ ನಿಯಂತ್ರಿಸಬಹುದು. ಆದರೆ, ಅದು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂಬುದು ಕಳವಳಕಾರಿ.
ಮೊದಲು ಪಿಒಪಿ ಮೂರ್ತಿ ಮೇಲಿನ ಬೇಡಿಕೆ ಕಡಿಮೆ ಮಾಡಬೇಕಿದೆ. ಆಗಲೇ ಅದರ ಪೂರೈಕೆ ತಗ್ಗುತ್ತದೆ. ದೊಡ್ಡ ಗಣಪತಿ ವಿಗ್ರಹಗಳನ್ನು ಪಿಒಪಿಯಿಂದಲೇ ಮಾಡಲಾಗುತ್ತದೆ. ಇದು ಮಣ್ಣಿನಿಂದ ಕಷ್ಟಕರ. ಇದಕ್ಕೆ ಪರ್ಯಾಯ ಕಂಡುಕೊಳ್ಳಬೇಕು. ಪಿಒಪಿ ವಿಗ್ರಹ ಮೇಲಿನ ಸಾರ್ವಜನಿಕರ ವ್ಯಾಮೋಹ ಬಿಡಬೇಕು.
ಆಗಲೇ ಈ ಹಾವಳಿಗೆ ಕಡಿವಾಣ ಬೀಳಲಿದೆ. ಅಧಿಕಾರಿಗಳು ಸಹ ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳು ಮತ್ತು ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಿ, ಪಿಒಪಿ ಗಣಪತಿ ಮೂರ್ತಿಗಳ ಬದಲು ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪೂಜಿಸುವಂತೆ ಅರಿವು ಮೂಡಿಸಬೇಕು. ಒಂದು ವೇಳೆ, ಮಾತು ಕೇಳದಿದ್ದರೆ ಕ್ರಮ ತೆಗೆದುಕೊಳ್ಳಬೇಕು.
ಪಿಒಪಿ ಸುಲಭವಾಗಿ ಕರಗುವುದಿಲ್ಲ. ಜತೆಗೆ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ನೀರಿನ ಕ್ಷಾರೀಯತೆ, ನೀರಿನಲ್ಲಿರುವ ಕಲ್ಮಶ, ಗಡಸುತನ, ಆಮ್ಲಜನಕದ ಬೇಡಿಕೆ ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಬಣ್ಣಗಳು ದೊಡ್ಡ ಅಪಾಯವನ್ನುಂಟು ಮಾಡುತ್ತವೆ.
ಜಪ್ತಿ ಮಾಡಿರುವ ಪಿಒಪಿ ಮೂರ್ತಿಗಳನ್ನು ಅಧಿಕಾರಿಗಳು ಇಟ್ಟುಕೊಳ್ಳುವುದೂ ಬಿಸಿತುಪ್ಪವಾಗಿದೆ. ಗಣಪತಿ ವಿಗ್ರಹದ ಸೂಕ್ಷ್ಮಸಂಗತಿ. ಅದು ವಿರೂಪ ಅಥವಾ ಬೇರೆ ರೀತಿಯ ಅವಾಂತರವಾದರೆ ದೊಡ್ಡ ಸಮಸ್ಯೆಯೇ ಸೃಷ್ಟಿಯಾಗುತ್ತದೆ. ಹೀಗಾಗಿ, ಅಧಿಕಾರಿಗಳು ಸಹ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.
ಪಿಒಪಿ ಮೂರ್ತಿಗಳ ಮಾರಾಟ, ದಾಸ್ತಾನು, ಸಾಗಣೆ ವಿರುದ್ಧ ನಿಗಾ ವಹಿಸಲಾಗಿದೆ. ನಿತ್ಯ ಕಾರ್ಯಾಚರಣೆ ನಡೆಸಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದು ಇನ್ನಷ್ಟು ಚುರುಕಾಗಲಿದೆ. ವಿಗ್ರಹಗಳು ಬೆಂಗಳೂರಿನಲ್ಲಿ ತಯಾರಾಗಿ ಬೇರೆ ಕಡೆ ಪೂರೈಕೆ ಮಾಡಲಾಗುತ್ತದೆ.ಡಾ.ವೆಂಕಟೇಶ್ ಆರೋಗ್ಯಾಧಿಕಾರಿ, ಮೈಸೂರು ಮಹಾನಗರಪಾಲಿಕೆ