ಮಂಜುನಾಥ ಟಿ.ಭೋವಿ ಮೈಸೂರು
ಬೀದಿ ನಾಯಿಗಳ ಉಪಟಳ ನಿಗ್ರಹಕ್ಕೆ ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ‘ಆಪರೇಷನ್ ಡಾಗ್’ ವಿಫಲವಾಗಿದ್ದು, ಇದರಿಂದಾಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಇದರಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.
ಕಾರ್ಯಾಚರಣೆ ನಡೆಸಿ, ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ. ಆದರೆ, ಈ ‘ಆಪರೇಷನ್ ಡಾಗ್’ ಕಾರ್ಯಾಚರಣೆ ನಿರೀಕ್ಷಿತ ಫಲ ನೀಡುತ್ತಿಲ್ಲ.
ಒಂದು ಶಸ್ತ್ರಚಿಕಿತ್ಸೆಗೆ 880 ರೂ.:
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬೀದಿನಾಯಿಗಳ ಶಾಶ್ವತ ಸ್ಥಳಾಂತರಕ್ಕೆ ಅವಕಾಶ ಇಲ್ಲ. ಹೀಗಾಗಿ, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆ ಅದೇ ಜಾಗದಲ್ಲಿ ಬಿಡಲಾಗುತ್ತಿದೆ. ಈ ಶಸ್ತ್ರಚಿಕಿತ್ಸೆಗಾಗಿ ಒಂದು ನಾಯಿಗೆ 880 ರೂ.ಗಳನ್ನು ರೋಟಾ ಎಂಬ ಎನ್‌ಜಿಒಗೆ ಪಾಲಿಕೆ ವತಿಯಿಂದ ನೀಡಲಾಗುತ್ತಿದೆ. ಜತೆಗೆ, 4 ಸಿಬ್ಬಂದಿಯನ್ನು ಒಳಗೊಂಡ ಪಾಲಿಕೆ ತಂಡವೂ ನಿತ್ಯ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ನಿರೀಕ್ಷಿತ ಫಲಿತಾಂಶವೂ ದೊರೆಯುತ್ತಿಲ್ಲ. ಇದರಿಂದ ಬೀದಿ ನಾಯಿಗಳ ಈ ಹಾವಳಿ ಹೆಚ್ಚಾಗುತ್ತಲೇ ಇದೆ.
ಪ್ರತಿ ಬಡಾವಣೆಯಲ್ಲೂ ನಾಯಿ ಕಾಟ:
ಪ್ರತಿ ಬಡಾವಣೆ, ರಸ್ತೆಯಲ್ಲಿ ಓಡಾಡಿದರೂ ನಾಯಿಗಳ ಹಿಂಡಿನ ದರ್ಶನವಾಗುತ್ತದೆ. ಅಷ್ಟರ ಮಟ್ಟಿಗೆ ಮೈಸೂರು ಬೀದಿ ನಾಯಿಗಳ ಆಶ್ರಯ ತಾಣವಾಗಿದೆ. ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ರಾಮಕೃಷ್ಣನಗರ, ವಿವೇಕಾನಂದನಗರ, ಸರಸ್ವತಿಪುರಂ, ಕುವೆಂಪುನಗರ, ವಿಜಯನಗರ, ಹೆಬ್ಬಾಳ, ಗೌರಿಶಂಕರನಗರ, ಕನಕದಾಸನಗರ ಸೇರಿದಂತೆ ನಗರದ ವಿವಿಧೆಡೆ ಶ್ವಾನಗಳ ಉಪಟಳ ಹೆಚ್ಚಾಗಿದೆ. ಹಗಲು ಹೊತ್ತಿನಲ್ಲಿ ಶಾಂತವಾಗಿರುವ ಬೀದಿನಾಯಿಗಳು ಸೂರ್ಯ ಮುಳುಗುತ್ತಿದ್ದಂತೆ ರೌದ್ರಾವತಾರ ಪ್ರದರ್ಶಿಸುತ್ತವೆ.
ದಾಳಿ ಸಾಮಾನ್ಯ ಎನಿಸಿದೆ:
ಹತ್ತಾರು ನಾಯಿಗಳು ಹಿಂಡು ಕಟ್ಟಿಕೊಂಡು ತಿರುಗಾಡುತ್ತವೆ. ಎದುರಾಗುವ ಪಾದಚಾರಿಗಳ ಮೇಲೆ ಸುಖಾಸುಮ್ಮನೆ ಎರಗುತ್ತವೆ. ಇಲ್ಲವೆ, ಬೊಗಳಿ ಗಾಬರಿ ಹುಟ್ಟಿಸುತ್ತವೆ. ಆಗ ಆತಂಕದಿಂದ ಓಡಿಹೋಗುವ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತವೆ. ಸಂಜೆ ಹೊತ್ತಿನಲ್ಲಿ ಮನೆ ಎದುರು, ರಸ್ತೆಯ ಬದಿ, ಆಟದ ಮೈದಾನ, ಉದ್ಯಾನದಲ್ಲಿ ಆಟವಾಡುವ ಮಕ್ಕಳ ಮೇಲೆಯೂ ನಾಯಿಗಳು ದಾಳಿ ಮಾಡಿ ಮುಖ, ಕೈಕಾಲು ಕಚ್ಚಿ ಗಾಯಗೊಳಿಸಿರುವ ಘಟನೆಗಳು ನಡೆದಿವೆ.
ಗುಂಪು ನಾಯಿಗಳು ಆಕ್ರಮಣಕಾರಿ:
ಪ್ಲಾಸ್ಟಿಕ್ ಕವರ್ ಹಿಡಿದು ಸಾಗುವ ವ್ಯಕ್ತಿಯೇ ಬೀದಿ ನಾಯಿಗಳ ಟಾರ್ಗೆಟ್. ಆಹಾರಕ್ಕಾಗಿ ಕವರ್‌ಗೆ ಬಾಯಿ ಹಾಕುತ್ತವೆ. ಇಲ್ಲವೆ, ಮೈ ಮೇಲೆ ಎರಗುತ್ತವೆ. ಆಗ ಭಯಗೊಂಡ ಜನರು ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಒಂಟಿ ನಾಯಿಗಳು ಅಷ್ಟಾಗಿ ಏನೂ ಮಾಡಲ್ಲ. ಆದರೆ, ಗುಂಪು ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ.
ಸವಾರರೇ ಟಾರ್ಗೆಟ್:
ರಾತ್ರಿ ಹೊತ್ತಿನಲ್ಲೇ ಬೀದಿ ನಾಯಿಗಳ ದಾಳಿ ಹೆಚ್ಚು. ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಧಾವಂತದಲ್ಲಿರುವ ದ್ವಿಚಕ್ರ ವಾಹನ ಸವಾರರು ನಾಯಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ವಾಹನದ ಬೆನ್ನುಹತ್ತಿ ಸವಾರರ ಕಾಲಿಗೆ ಬಾಯಿ ಹಾಕುತ್ತವೆ. ಗಾಬರಿಯಿಂದ ಇನ್ನಷ್ಟು ವೇಗವಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ.
ಹೋಟೆಲ್‌ಗಳ ಬಳಿ ನಾಯಿ ಹಿಂಡು:
ಬೀದಿ ಬದಿ ಹೋಟೆಲ್, ಮಾಂಸಾಹಾರಿ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಉಳಿಕೆ ಆಹಾರ ಬಿಸಾಡುವ ಜಾಗದಲ್ಲೇ ಬೀದಿ ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ಇವುಗಳಿಗೆ ಸಲೀಸಾಗಿ ಆಹಾರ ಸಿಗುತ್ತದೆ. ಇದುವೇ ಈ ಶ್ವಾನಗಳು ಒಂದೆಡೆ ಸೇರಲು ಕಾರಣವಾಗುತ್ತಿದೆ.
ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿರುವ ಪಾಲಿಕೆಯ ಅಧಿಕಾರಿಗಳ ಕೈಗಳನ್ನು ಶ್ವಾನಗಳ ಸಂರಕ್ಷಣಾ ಕಾಯ್ದೆ-ಕಾನೂನುಗಳು ಕಟ್ಟಿಹಾಕಿವೆ. ಈ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಮತ್ತೆ ಬಿಡಲಾಗುತ್ತದೆ. ಇದನ್ನು ಹೊರತುಪಡಿಸಿ ಪಾಲಿಕೆಯಿಂದ ಪರ್ಯಾಯ ಕ್ರಮ ವಹಿಸುತ್ತಿಲ್ಲ.
ಬೀದಿ ನಾಯಿಗಳನ್ನು ಕೊಲ್ಲುವುದು, ಹಿಂಸೆ ನೀಡುವುದನ್ನು ಒಪ್ಪಲು ಆಗುವುದಿಲ್ಲ. ಆದರೆ, ಅವುಗಳ ಆರ್ಭಟಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಜನರು ನೆಮ್ಮದಿಯಿಂದ ರಸ್ತೆಯಲ್ಲಿ ಓಡಾಡಲಾಗಲ್ಲ. ಆದ್ದರಿಂದ ಈ ಹಾವಳಿ ತಡೆಗೆ ಪಾಲಿಕೆ ಪರ್ಯಾಯ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪೆಟ್ ಪಾರ್ಕ್ ನಿರ್ಮಾಣ:
ನಗರದ ರಾಯನಕೆರೆಯಲ್ಲಿ ಪೆಟ್ ಪಾರ್ಕ್ ನಿರ್ಮಾಣ ಹಂತದಲ್ಲಿದೆ. ಸಿವಿಲ್ ಕೆಲಸಗಳು ನಡೆಯುತ್ತಿವೆ. ಇಲ್ಲಿ ಅನಾರೋಗ್ಯ ಪೀಡಿತ, ರೋಗಗ್ರಸ್ತ ನಾಯಿಗಳು ಇನ್ನಿತರ ಸಾಕುಪ್ರಾಣಿಗಳನ್ನು ಆರೈಕೆ ಮಾಡಲಾಗುತ್ತದೆ. ಜತೆಗೆ, ಹಂದಿ ಸಾಕಣೆಗೆ 5 ಎಕರೆ ಜಾಗ ಮೀಸರಿಸಲಾಗಿದೆ. 49 ಲಕ್ಷ ರೂ. ವೆಚ್ಚದಲ್ಲಿ ಶುರುವಾಗಿರುವ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಇದು ಮುಗಿದ ಬಳಿಕ ಸಾಕಣೆ ಮತ್ತು ನಿರ್ವಹಣೆ ಕೆಲಸವನ್ನು ಖಾಸಗಿಯವರಿಗೆ ವಹಿಸಲು ಪಾಲಿಕೆ ಉದ್ದೇಶಿಸಿದೆ.
ಬೀದಿ ನಾಯಿಗಳ ಹಾವಳಿ ತಡೆಯಲು ನಿತ್ಯ ಕಾರ್ಯಾಚರಣೆ ನಡೆಯುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬೀದಿನಾಯಿಗಳ ಶಾಶ್ವತ ಸ್ಥಳಾಂತರಕ್ಕೆ ಅವಕಾಶ ಇಲ್ಲ. ಹೀಗಾಗಿ, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆ ಅದೇ ಜಾಗದಲ್ಲಿ ಬಿಡಲಾಗುತ್ತಿದೆ. ಇದನ್ನು ಹೊರತು ಬೇರೆ ಮಾರ್ಗ ಇಲ್ಲ.ಡಾ.ಹೇಮಂತ್‌ರಾಜ್ ಪಶು ಆರೋಗ್ಯಾಧಿಕಾರಿ, ಮಹಾನಗರ ಪಾಲಿಕೆ