ಮೈಸೂರು: ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಮಂಡಿ ಪೊಲೀಸ್ ಠಾಣೆ ಸರಹದ್ದಿನ ಪುಲಕೇಶಿ ರಸ್ತೆಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡಲು ಇಬ್ಬರು ಆರೋಪಿಗಳು ನಿಂತಿದ್ದರು. ಜತೆಗೆ, ಡ್ರಗ್ಸ್ ಅನ್ನು ಖರೀದಿಸಿ ಇತರರಿಗೆ ಮರುಮಾರಾಟ ಮಾಡಲು ನಿಂತಿದ್ದ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದು, ಅವರಿಂದ ಡ್ರಗ್ಸ್, 43,500 ರೂ. ನಗದು ಹಣ, 3 ಮೊಬೈಲ್ ಫೋನ್, ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ಹಲವು ದಿನಗಳಿಂದ ಡ್ರಗ್ಸ್ ಅನ್ನು ಬೆಂಗಳೂರಿನ ಮುಖ್ಯ ಪೆಡ್ಲರ್‌ನಿಂದ ತರಿಸಿಕೊಂಡು ಮೈಸೂರು ನಗರದ ವಿವಿಧ ಕಾಲೇಜುಗಳ ಯುವಕ-ಯುವತಿಯರು ಸೇರಿದಂತೆ ಇತರರಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಬೆಂಗಳೂರಿನ ಮುಖ್ಯ ಪೆಡ್ಲರ್, ಮೈಸೂರಿನಲ್ಲಿ ಡ್ರಗ್ಸ್ ಅನ್ನು ಖರೀದಿಸಿ ಬಳಕೆ ಮಾಡಿದವರ ಪತ್ತೆ ಕಾರ್ಯವೂ ಮುಂದುವರಿದಿದೆ.