ಜಿಲ್ಲೆ

ಮೈಸೂರಿನಲ್ಲಿ ಡಿ.23ರಂದು ರೈತರ ರಾಷ್ಟ್ರೀಯ ಸಮಾವೇಶ

ಮೈಸೂರು: ವಿಶ್ವ ರೈತ ದಿನದ ಅಂಗವಾಗಿ ರೈತರ ಹಬ್ಬ ಆಚರಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೈತ ಸಮಾವೇಶವನ್ನು ಡಿ.23ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಎಲ್ಲ ಸರ್ಕಾರಗಳು ರೈತರನ್ನು ಮೋಸಗೊಳಿಸುತ್ತಿವೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳು ಕೃಷಿಯನ್ನು ವಶಪಡಿಸಿಕೊಳ್ಳಲು ವಾಮಮಾರ್ಗ ಬಳಸುತ್ತಿವೆ. ಮುಂದಿನ ದಿನಗಳಲ್ಲಿ ರೈತ ಕುಲವನ್ನು ಅಪಾಯದಿಂದ ಪಾರು ಮಾಡಲು ಚಿಂತಿಸಬೇಕಾಗಿದೆ. ಅದಕ್ಕಾಗಿ ಮೈಸೂರಿನಲ್ಲಿ ರಾಷ್ಟ್ರೀಯ ರೈತ ಸಮಾವೇಶ ನಡೆಸಲಾಗುತ್ತಿದ್ದು, ದೇಶದ ವಿವಿಧ ರಾಜ್ಯಗಳ ನೂರಾರು ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 8 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರವು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಕುರಿತು ಮೊಸಳೆ ಕಣ್ಣೀರು ಸುರಿಸದೆ ಹಾಲು ಉತ್ಪಾದಕರ ಖಾತೆಗೆ ಹಣವನ್ನು ಜಮೆ ಮಾಡಬೇಕು. ಸರ್ಕಾರದ ನಿರ್ಲಕ್ಷೃ ವಹಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ಶುಂಠಿ ಬೆಲೆ ಕುಸಿತಕ್ಕೆ ಕಂಗಾಲು: ಶುಂಠಿ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಚೀಲಕ್ಕೆ 5 ಸಾವಿರ ರೂ. ದರ ಇತ್ತು. ಪ್ರಸಕ್ತ ಸಾಲಿನಲ್ಲಿ 1600 ರೂ.ಗೆ ಇಳಿಕೆಯಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ ಕಾನೂನು ಜಾರಿಗೆ ತರಬೇಕು ಎಂದು ದೆಹಲಿಯಲ್ಲಿ ರೈತ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ನ.25ರಿಂದ ನಡೆಯಲಿರುವ ಸಂಸತ್ ಅಧಿವೇಶನದ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆಯು ದೇಶಾದ್ಯಂತ ರೈತ ಚಳವಳಿಯನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹಧನ 500 ರೂ. ನೀಡಲು ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು.

ಎಪಿಎಂಸಿಗಳಲ್ಲಿ ಹಣ್ಣು, ತರಕಾರಿ, ಧಾನ್ಯ ಮಾರಾಟ ಮಾಡುವ ರೈತರಿಂದ ಕಾನೂನು ಪ್ರಕಾರ ದಲ್ಲಾಳಿಗಳು ಕಮಿಷನ್ ಪಡೆಯಬಾರದು ಎಂದು ಕೃಷಿ ಮಾರಾಟ ಮಂಡಳಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘನೆ ಮಾಡಿದರೆ ರಹದಾರಿ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದರು.

ಇತ್ತೀಚಿಗೆ ನಡೆದ ಮುಡಾ ಸಭೆಯಲ್ಲಿ 50:50 ಅನುಪಾತದ ನಿವೇಶನಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆಯಾಗಿರುವುದು ವರದಿ ಮಾಡಿವೆ. ಇದರಿಂದ ಜಮೀನು ಕಳೆದುಕೊಂಡ ನೈಜ ರೈತರಿಗೆ ತೊಂದರೆ ಉಂಟು ಮಾಡಬಾರದು. ರೈತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ಅತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ್, ನೀಲಕಂಠಪ್ಪ, ಪೈಲ್ವಾನ್ ವೆಂಕಟೇಶ್, ಸೂರಿ, ಉಮೇಶ್ ಇದ್ದರು.