ಮಂಜುನಾಥ ತಿಮ್ಮಯ್ಯ ಮೈಸೂರು
ರಾಜ್ಯ ಸರ್ಕಾರದ ಘೋಷಣೆಯಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೈಟ್ ಲೈಫ್ ಇನ್ನೂ ಜಾರಿಗೆ ಬಂದಿಲ್ಲ. ಇದರಿಂದಾಗಿ ರಾತ್ರಿ 1ರವರೆಗೆ ವ್ಯಾಪಾರ-ವಹಿವಾಟು ವಿಸ್ತರಿಸುವ ಅವಕಾಶವೂ ದೊರೆತಿಲ್ಲ...!
ಈ ವಿಷಯದಲ್ಲಿ ಮೀನಮೇಷ ಎಣಿಸುತ್ತಿರುವುದರಿಂದ ಪ್ರವಾಸೋದ್ಯಮ ಅವಕಾಶ ಹೆಚ್ಚಿಸಿ ನಗರದ ಬೆಳವಣಿಗೆ, ವಾಣಿಜ್ಯ ಚಟುವಟಿಕೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಅಡ್ಡಿಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 1ರವರೆಗೆ ವ್ಯಾಪಾರ ಮಾಡಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಇದು ಘೋಷಣೆಯಾಗಿ 9 ತಿಂಗಳು ಕಳೆದಿದೆ.
ಆದರೆ ಪಾಲಿಕೆ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ಅಧೀನ ಸಂಸ್ಥೆಗಳೇ ಇದನ್ನು ಜಾರಿ ಮಾಡಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ, ಇದು ನನೆಗುದಿಗೆ ಬಿದ್ದಿದೆ. ಬೆಂಗಳೂರು ಹೊರತುಪಡಿಸಿದರೆ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ವ್ಯಾಪ್ತಿಗಳಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ.
ಮೈಸೂರಿನಲ್ಲಿ ಸದ್ಯಕ್ಕೆ ರಾತ್ರಿ 11ರವರೆಗೆ ಮಾತ್ರ ವಾಣಿಜ್ಯ ವಹಿವಾಟಿಗಳಿಗೆ ಅವಕಾಶ ಇದೆ. ಇದನ್ನು ರಾತ್ರಿ 1 ರವರೆಗೂ ವಿಸ್ತರಣೆ ಮಾಡಬೇಕೆಂಬುದು ಸ್ಥಳೀಯ ವ್ಯಾಪಾರಿಗಳ ಬಹುದಿನದ ಬೇಡಿಕೆ. ಆದರೆ ಇದು ಇನ್ನೂ ಈಡೇರಿಲ್ಲ ಎಂಬ ಕೊರಗು ಕಾಡುತ್ತಿದೆ.
ನೈಟ್ ಲೈಫ್‌ಗೆ ಅವಕಾಶ ನೀಡಿದರೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮಧ್ಯರಾತ್ರಿ 1ರವರೆಗೂ ಪಬ್, ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಸೇರಿದಂತೆ ವಾಣಿಜ್ಯ ಮತ್ತು ವ್ಯಾಪಾರ ನಡೆಸಲು ಅವಕಾಶ ಸಿಗಲಿದೆ. ಇದರಿಂದ ಆರ್ಥಿಕ ಚಟುವಟಿಕೆ ಉತ್ತೇಜನ ದೊರೆಯಲಿದೆ.
ಊಟಕ್ಕಾಗಿ ಪ್ರವಾಸಿಗರ ಪರದಾಟ: ರಾಜ್ಯದಲ್ಲೇ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಗರ ಮೈಸೂರು. ಇಲ್ಲಿಗೆ ದೇಶ-ವಿದೇಶಗಳಿಂದ ಸಹಸ್ರಾರು ಜನರು ಭೇಟಿ ನೀಡಿ ನಗರಸಿರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ರಾತ್ರಿ ಹೊತ್ತಿನಲ್ಲಿ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ.
ಬಲವಂತವಾಗಿ ಅಂಗಡಿ ಬಂದ್:
ನಗರದಲ್ಲಿ ರಾತ್ರಿ 9ರ ವೇಳೆಗೆ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನಂತೂ 11 ಗಂಟೆಗೇ ಮುಚ್ಚಿಸುತ್ತಿದ್ದಾರೆ. ಅದೇ ರೀತಿ ಗೂಡಂಗಡಿಯವರು, ಬೀದಿ ಬದಿ ವ್ಯಾಪಾರವನ್ನೂ ನಿಲ್ಲಿಸಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಾರೆ.
ಬಸ್‌ಗಳ ಓಡಾಟಕ್ಕೂ ಅನುಕೂಲ:
ರಾತ್ರಿ 9 ಗಂಟೆ ಬಳಿಕ ನಗರದಲ್ಲಿ ಸಂಚಾರ ಮಾಡುವ ಬಸ್‌ಗಳ ಸೇವೆ ಸಹ ಸ್ತಬ್ಧವಾಗುತ್ತದೆ. ಬಳಿಕ ಆಟೋರಿಕ್ಷಾ, ಟ್ಯಾಕ್ಸ್‌ಗಳನ್ನೇ ಅವಲಂಬಿಸಬೇಕಾಗುತ್ತದೆ. ಇವುಗಳು ದುಬಾರಿ ಬಾಡಿಗೆ ವಸೂಲಿ ಮಾಡುತ್ತವೆ. ನೈಟ್ ಲೈಫ್ ಜಾರಿಯಾದರೆ ಮಧ್ಯರಾತ್ರಿವರೆಗೆ ಬಸ್ ಸಂಚಾರ ಮಾಡುವುದರಿಂದ ಕೆಲಸ ಮುಗಿಸಿ ಬರುವ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹೀಗಾಗಿ, ಕೆಎಸ್‌ಎಸ್‌ಆರ್‌ಟಿ ನಗರ ಸಾರಿಗೆ ವಿಭಾಗ ಸಹ ಅಗತ್ಯವಾಗಿದೆ.
ನಗರದ ಅಭಿವೃದ್ಧಿಗೆ ಪೂರಕ:
ಅಭಿವೃದ್ಧಿ ದೃಷ್ಟಿಯಿಂದ ರಾತ್ರಿ 1ರ ತನಕ ನಗರವನ್ನು ತೆರೆದಿಡಬೇಕು ಎನ್ನುವುದು ಮೊದಲಿನಿಂದಲೂ ಇದ್ದ ಬೇಡಿಕೆ. ಬೆಳೆಯುವ ನಗರವನ್ನು ಬಂದ್ ಮಾಡಿದರೆ ಇಲ್ಲಿ ಸಾಫ್ಟ್‌ವೇರ್ ಉದ್ಯಮಗಳು ಬರುವುದು ಹೇಗೆ? ಪ್ರಗತಿ ಆಗೋದು ಹೇಗೆ?
ಕಾನೂನು ಪ್ರಕಾರ ವ್ಯಾಪಾರಕ್ಕೆ ಅವಕಾಶ ಇರುವಷ್ಟು ಸಮಯ ನಗರವನ್ನು ಓಪನ್ ಇಟ್ಟರೆ ಜನರ ಓಡಾಟ ಹೆಚ್ಚಿಸಿ ಕಾನೂನು ಸುವ್ಯವಸ್ಥೆಗೆ ಏನೂ ಸಮಸ್ಯೆ ಆಗಲ್ಲ. ಹೀಗೆ ಮಾಡಿದರೆ ಪ್ರವಾಸೋದ್ಯಮ ಸೇರಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ನಿರ್ವಹಣೆ ಕಷ್ಟಕರವಲ್ಲ:
ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ನೈಟ್ ಲೈಫ್ ಭಂಗ ತರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಕಷ್ಟಕರವಾಗಲಿದೆ ಎಂಬ ವಿರೋಧದ ಧ್ವನಿಯೂ ಕೇಳಿಬರುತ್ತದೆ.
ಆದರೆ 1.50 ಕೋಟಿ ಜನಸಂಖ್ಯೆ ಇರುವ ಅಂದಾಜು 45 ಕಿ.ಮೀ.ಸುತ್ತಲಿನ ಬೆಂಗಳೂರಿನಲ್ಲಿ ಈ ರೀತಿ ಸಮಸ್ಯೆಗಳು ಕಂಡು ಬರುತ್ತಿಲ್ಲ. ಇನ್ನೂ ಕೇವಲ 12 ಲಕ್ಷ ಜನಸಂಖ್ಯೆಯ ಅಂದಾಜು 15 ಕಿ.ಮೀ.ಸುತ್ತಳತೆಯ ಮೈಸೂರಿನಲ್ಲಿ ಏನು ಸಮಸ್ಯೆಯಾಗಲಿದೆ?
ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿರುವ ನೈಟ್ ಲೈಫ್‌ನಿಂದ ರಾಜಧಾನಿ ಬೆಳವಣಿಗೆಗೆ ಪೂರಕವಾಗಿದೆ. ಈ ಪ್ರಯೋಗವನ್ನು ಮೈಸೂರಿನಲ್ಲೂ ಅನುಷ್ಠಾನಕ್ಕೆ ತರಬೇಕು. ಇದನ್ನು ನಿರ್ವಹಣೆ ಕಷ್ಟಕರವಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ತೆರಿಗೆ ರೂಪದಲ್ಲಿ ಸರ್ಕಾರಕ್ಕೂ ಆದಾಯ
ನೈಟ್ ಲೈಫ್ ಜಾರಿಯಾದರೆ ಮೈಸೂರಿಗೆ ಆಗಮಿಸುವ ಪ್ರವಾಸಿಗರು, ಸಾರ್ವಜನಿಕರು ಮತ್ತು ಆಸ್ಪತ್ರೆಗಳಿಗೆ ಆಗಮಿಸುವವರಿಗೆ ಬಹಳ ಉಪಯುಕ್ತವಾಗುತ್ತದೆ. ಇದರಿಂದ ಸರ್ಕಾರಕ್ಕೂ ವಿವಿಧ ರೀತಿಯ ತೆರಿಗೆಗಳ ರೂಪದಲ್ಲಿ ಆದಾಯವು ಹೆಚ್ಚುತ್ತದೆ. ವ್ಯಾಪಾರ-ವಹಿವಾಟಿಗೆ ಅನುಮತಿಯನ್ನು ರಾತ್ರಿ 1 ಗಂಟೆವರೆಗೆ ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
ಲಾಭ ಏನು?
*ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್‌ಗಳು ಮಧ್ಯರಾತ್ರಿ 1 ರವರೆಗೂ ವಹಿವಾಟು ನಡೆಸಲು ಅವಕಾಶ
*ಈ ಕ್ರಮದಿಂದ ಮೈಸೂರಿನ ಜನತೆಗೆ, ಪ್ರವಾಸಿಗರಿಗೂ ಅನುಕೂಲ
*ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ, ಉದ್ಯೋಗಗಳ ಸೃಷ್ಟಿ