ಮೈಸೂರು: ಮಳೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೊದಲ ದಿನ (ಆ.30) ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ (ಆ.31) ಗಣೇಶನ ಹಬ್ಬ. ಹೀಗಾಗಿ, ಗೌರಿ ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವ ತಯಾರಿ ಭರದಿಂದ ಸಾಗಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸಬೇಕೆನ್ನುವ ಉದ್ದೇಶದಿಂದ ಬಾಲಗಂಗಾಧರನಾಥ ತಿಲಕ್ ಅವರು ಪುಣೆಯಲ್ಲಿ ಆರಂಭಿಸಿದ ಗಣೇಶೋತ್ಸವ ಇಂದು ದೇಶದ ಮೂಲೆ ಮೂಲೆಯಲ್ಲಿ ಹರಡಿದೆ. ನಗರದಲ್ಲೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.
ಗೌರಿ ಹಬ್ಬವು ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಪ್ರೀತ್ಯಾಧರದಿಂದ ತಂದೆ-ತಾಯಿ ತವರು ಮನೆಗೆ ಬರಮಾಡಿಕೊಳ್ಳುವ ಒಂದು ವಿಶೇಷ ಸಡಗರದ ಕ್ಷಣವಾಗಿದೆ. ಗೌರಿಪೂಜೆಯಲ್ಲಿ ಸುಮಂಗಲಿಯರು ಮುಖ್ಯ ಪಾತ್ರ ವಹಿಸಿದರೂ ಮದುವೆಯಾಗದ ಹೆಣ್ಣು ಮಕ್ಕಳೂ ಭಾಗವಹಿಸುತ್ತಾರೆ. ವಿವಿಧ ರೀತಿಯ ತಿನಿಸು ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ದೇವಿಯನ್ನು ಗಂಡನ ಮನೆಗೆ ಕಳುಹಿಸುವ ಸಂಕೇತವಾಗಿ ಹೂವು, ವೀಳ್ಯದೆಲೆ, ಫಲ, ವಿವಿಧ ಪದಾರ್ಥವನ್ನು ನೀರಿನಲ್ಲಿ ತೇಲಿ ಬಿಡುವ ರೂಢಿ ಇದೆ. ಇದು ಗಂಡನ ಮನೆಗೆ ಕಳುಹಿಸುವ ಒಂದು ಸಂಕೇತ.
ಸುಮಂಗಲಿಯರು ಪರಸ್ಪರ ಬಾಗಿನ ಹಂಚಿಕೊಳ್ಳುತ್ತಾರೆ. ಮೊರದ ಜತೆಯಲ್ಲಿ ಫಲ ತಾಂಬೂಲದೊಂದಿಗೆ ಗಾಜಿನ ಬಳೆ, ಕನ್ನಡಿ, ಅರಶಿಣ ಕುಂಕುಮ ಮುಂತಾದವುಗಳನ್ನು ಇರಿಸಿ ಸುಮಂಗಲಿಯ ಸಂಕೇತವಾಗಿ ಪರಸ್ಪರ ಕೊಟ್ಟು ತೆಗೆದುಕೊಳ್ಳುತ್ತಾರೆ. ದೂರದ ಊರಿನಲ್ಲಿರುವ ಹೆಣ್ಣು ಮಕ್ಕಳು ತವರು ಮನೆಗೆ ಬರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮನೆಯಿಂದ ಅವರಿಗೆ ಬಾಗಿನ ಮುಂಚಿತವಾಗಿಯೇ ತಲುಪಿಸುತ್ತಾರೆ. ಹಾಗೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಹಣವನ್ನು ಕಳುಹಿಸುವ ಮೂಲಕ ತವರು ಮನೆಯ ಬಾಗಿನವನ್ನು ತಲುಪಿಸುತ್ತಾರೆ.
ನೈವೇದ್ಯ ಅರ್ಪಣೆ:
ಪ್ರತಿವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪೂಜಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಬೆಲೆ ಏರಿಕೆ ಬಿಸಿ:
ಹಬ್ಬದ ಮುನ್ನ ದಿನವಾದ ಸೋಮವಾರ ಬೆಲೆ ಏರಿಕೆಯ ನಡುವೆಯೂ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದು ಪೂಜಾ ಸಾಮಗ್ರಿ ಖರೀದಿಸಿದರು. ಮಳೆಯ ನಡುವೆಯೂ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕಗಡಿಯಾರ, ದಿವಾನ್ಸ್ ರಸ್ತೆ, ಸಯ್ಯಜಿರಾವ್ ರಸ್ತೆ, ಧನ್ವಂತ್ರಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ರಸ್ತೆ ಬದಿಗಳಲ್ಲೂ ವ್ಯಾಪಾರ ವಹಿವಾಟು ಜೋರಾಗಿತ್ತು. ವರ್ತಕರು ತಳ್ಳುವಗಾಡಿಯಲ್ಲಿ ಹೂ, ಹಣ್ಣು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.