ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಂತ ಫಿಲೋಮಿನಾ ಚರ್ಚ್‌ನಲ್ಲಿ ಡಿ.25ರಂದು ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಬಿಷಪ್ ಡಾ.ಕೆ.ಎ.ವಿಲಿಯಂ ತಿಳಿಸಿದರು.
ಡಿ.24ರಂದು ರಾತ್ರಿ 11ಕ್ಕೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 12ಕ್ಕೆ ಜಾಗರಣೆ, ಬಲಿಪೂಜೆ ನೆರವೇರಲಿದೆ. ಡಿ.25ರಂದು ಬೆಳಗ್ಗೆ 5 ರಿಂದ 9ರವರೆಗೆ ಪ್ರತಿ ಗಂಟೆಗೊಮ್ಮೆ ಪೂಜೆ, ಪ್ರಾರ್ಥನೆ ಇರಲಿದೆ. ಗೋಂದಳಿಯಲ್ಲಿರುವ ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಎಲ್ಲ ಚರ್ಚ್‌ಗಳಲ್ಲಿಯೂ ವಿಶೇಷ ಪ್ರಾರ್ಥನೆ ಇರಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನೆಲ್ಲೆಡೆ ಅಶಾಂತಿ, ಹಿಂಸೆ ತುಂಬಿದ್ದು, ಇದರಿಂದ ಜನರು ನೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳ ಪ್ರಸಾರ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಆಧುನಿಕ ತಂತ್ರಜ್ಞಾನದಿಂದ ವಿಶ್ವವನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಲು ಸಾಧ್ಯವಿದೆ. ಆದರೆ ಇದೇ ವೇಳೆ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯೇಸು ಕ್ರಿಸ್ತ ವಿಶ್ವಕ್ಕೆ ಶಾಂತಿ, ಪ್ರೀತಿ, ಕ್ಷಮೆ, ದಯೆಯನ್ನು ತಿಳಿಸಿರುವಂತೆ ಮನುಜ ಕುಲ ದೊಡ್ಡ ಕುಟುಂಬದಂತಿದ್ದು, ಪರಸ್ಪರ ಸಹೋದರತ್ವದಿಂದ ಬಾಳಬೇಕು. ಈ ಕಾರಣಕ್ಕಾಗಿ ಎಲ್ಲ ಸಮುದಾಯದವರಿಗೂ ನಿಸ್ವಾರ್ಥ ಭಾವದಿಂದ ಸಮಾಜ ಸೇವೆ, ಬಡವ ಬಲ್ಲಿದರಿಗೆ ಸಹಕಾರ ನೀಡುತ್ತಾ ಬರಲಾಗುತ್ತಿದೆ ಎಂದರು.
ಕರೊನಾ ಜಾಗೃತಿ:
ಕರೊನಾ ಮಹಾಮಾರಿಯಿಂದ ಮನುಕುಲ ತೊಂದರೆಗೆ ಸಿಲುಕಿ ಎರಡು ವರ್ಷಗಳಿಂದ ಹಬ್ಬ ಆಚರಣೆಗೂ ತೊಡಕಾಗಿತ್ತು. ಈ ವರ್ಷ ಮತ್ತೆ ಆತಂಕ ಇದ್ದರೂ ದೈಹಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬಹುದು. ಸರ್ಕಾರದ ಮಾರ್ಗಸೂಚಿ ಜತೆಗೆ ವೈಯಕ್ತಿವಾಗಿಯೂ ಸಾಕಷ್ಟು ಎಚ್ಚರ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಬದಲಾವಣೆ ಜಗದ ನಿಯಮವಾದರೂ ಇದರ ವ್ಯತ್ಯಾಸಗಳನ್ನು ಮನುಷ್ಯ ಅನುಭವಿಸಬೇಕಿದೆ. ಅನೇಕ ಕಾಯಿಲೆಗಳು ಬಂದರೂ ಮನುಷ್ಯರಿಗೆ ಭಯ ಇಲ್ಲದಂತಾಗಿದೆ. ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಚಿಂತಿಸುತ್ತಾನೆ. ಆದರೆ ಸಮಾಜ, ಸಮುದಾಯದ ಆರೋಗ್ಯದ ಕಡೆ ನಿರ್ಲಕ್ಷೃ ವಹಿಸುತ್ತಾನೆ. ಹಣ, ಉದ್ಯೋಗ ಎಲ್ಲ ಇದ್ದರೂ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಹಾಗಾಗಿ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಬಹುದಾಗಿದೆ ಎಂದು ಹೇಳಿದರು.
ಅಸೂಯೆ, ಅಹಂಕಾರ, ದ್ವೇಷ, ಸೇಡು ತೀರಿಸಿಕೊಳ್ಳುವ ಮನೋಭಾವ, ಸ್ವಾರ್ಥ ಮತ್ತು ಇತರ ದುಷ್ಟ ಪ್ರವೃತ್ತಿಗಳನ್ನು ನಾವು ಬದಿಗಿಟ್ಟು, ಹೊಸ ಮತ್ತು ಉತ್ತಮ ಸಮಾಜಕ್ಕಾಗಿ ಅಡಿಪಾಯ ಹಾಕುವ ಅವಕಾಶ ಕಲ್ಪಿಸುವ ಸಂದರ್ಭ ಇದಾಗಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳುವೆ ಮಾಡಬೇಕು ಎಂದು ಆಶಿಸಿದರು.
ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಫಾದರ್ ವಿಜಯಕುಮಾರ್, ಧರ್ಮಗುರುಗಳಾದ ಕ್ಲಿಫರ್ಡ್, ಡೊಮಿನಿಕ್ ವಾಸ್, ಅಲ್ಫ್ರೆಡ್ ಜಾನ್ ಬೆಂಡೋಂಜಾನ್, ಜೋಸೆಫ್ ಪ್ಯಾಕಿಯಾರಾಜ್ ಇದ್ದರು.