ಮೈಸೂರು: ಕಾರ್ಗಿಲ್ ಯುದ್ಧ 23ನೇ ವರ್ಷದ ವಿಜಯೋತ್ಸವದ ಅಂಗವಾಗಿ ಬೃಹತ್ ಬೈಕ್ ರ‌್ಯಾಲಿ ಮಂಗಳವಾರ ನಡೆಯಿತು.
ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಜಿಲ್ಲಾ ಸಂಘಟನೆ ಮತ್ತು ರೋಟರಿ ಹೆರಿಟೇಜ್ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ಬೈಕ್ ರ‌್ಯಾಲಿಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಎಲ್.ನಾಗೇಂದ್ರ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಂಟಿಯಾಗಿ ಚಾಲನೆ ನೀಡಿದರು.
ಹುತಾತ್ಮ ಯೋಧರಿಗೆ ಒಂದು ನಿಮಿಷದ ಮೌನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಮಕ್ಕಳು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಓನಕೆ ಒಬವ್ವ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದವರ ವೇಷತೊಟ್ಟು ಗಮನಸೆಳೆದರು.
ನಿವೃತ್ತ ಯೋಧರು, ಎನ್‌ಸಿಸಿ ಕೆಡಟ್ಸ್ ಮತ್ತು ರೋಟರಿ ಸದಸ್ಯರು ಸೇರಿ ಸುಮಾರು 350ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಗಮನಸೆಳೆದರು. ಯೋಧರ ಪರ ಘೋಷಣೆ ಕೂಗಿದರು. ಜೈ ಜವಾನ್, ಜೈ ಕಿಸಾನ್ ಘೋಷಣೆಗಳು ವ್ಯಕ್ತವಾಯಿತು.
ಜೆಎಲ್‌ಬಿ ರಸ್ತೆ ಮಾರ್ಗವಾಗಿ ಸಾಗಿದ ರ‌್ಯಾಲಿಯು ರೈಲ್ವೆ ನಿಲ್ದಾಣದ ಡಾ.ಬಾಬು ಜಗಜೀವನರಾಮ್ ವೃತ್ತದ ಮಾರ್ಗವಾಗಿ, ಸಯ್ಯಜಿರಾವ್ ರಸ್ತೆ, ಪ್ರಭಾ ಚಿತ್ರಮಂದಿರದ ರಸ್ತೆ, ಗಾಂಧಿ ವೃತ್ತ, ದೊಡ್ಡ ಗಡಿಯಾರ, ಚಾಮರಾಜ ಒಡೆಯರ್ ವೃತ್ತ, ಬೆಂಗಳೂರು-ನೀಲಗಿರಿ ರಸ್ತೆ, ಗನ್‌ಹೌಸ್ ವೃತ್ತ, ಚಾಮರಾಜ ಜೋಡಿ ರಸ್ತೆ ಮಾರ್ಗದಲ್ಲಿ ಸಂಚರಿಸಿತು. ರಾಮಸ್ವಾಮಿ ಮಾರ್ಗವಾಗಿ ಸಂಚರಿಸಿದ ರ‌್ಯಾಲಿಯು ಅಗ್ನಿಶಾಮಕ ದಳದ ಮಾರ್ಗವಾಗಿ ಬಳಸಿಕೊಂಡು ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.
ನಿವೃತ್ತ ಯೋಧರೂ ಆದ ಎಂಎಲ್‌ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ಕಾರ್ಗಿಲ್ ಯುದ್ಧದ ಸನ್ನಿವೇಶಗಳನ್ನು ಹಂಚಿಕೊಂಡರು. 1999ರ ಮೇ 3ರಂದು ಕಾರ್ಗಿಲ್ ಯುದ್ಧ ಆರಂಭಗೊಂಡಿತು. ಆಗ ತಾಪಮಾನ ಶೂನ್ಯದಲ್ಲಿತ್ತು. ದೇಶ ಗಡಿಯನ್ನು ಪಾಕಿಸ್ತಾನ ವಶಕ್ಕೆ ಪಡೆದಿದ್ದ ಸ್ಥಳಕ್ಕೆ ತೆರಳಿದ್ದ ಐವರು ಸೈನಿಕರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೂರು ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ 490 ಸೈನ್ಯ ಅಧಿಕಾರಿಗಳು ಸೇರಿ ಒಟ್ಟು 520 ಸೈನಿಕರು ಮೃತಪಟ್ಟರು. ಸಾಕಷ್ಟು ಪ್ರಾಣಹಾನಿಯುಂಟಾಯಿತು ಎಂದರು.
ಭಾರತದ ಸೇನೆ, ಅಸಂಖ್ಯಾತ ಸೈನಿಕರು ತಮ್ಮ ಜೀವನವನ್ನು ಪಣಕ್ಕಿಟ್ಟು ಗಡಿ ಕಾಯುತ್ತಿರುವುದರಿಂದ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ. ದೇಶಕ್ಕಾಗಿ ಸೈನಿಕರ ನೀಡುತ್ತಿರುವ ಕೊಡುಗೆಯನ್ನು ಸದಾ ಸ್ಮರಿಸುವುದಲ್ಲದೇ, ಗೌರವಿಸಬೇಕು ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ರೋಟರಿ ಇಂಟರ್‌ನ್ಯಾಷನಲ್ ನಿವೃತ್ತ ಜಿಲ್ಲಾ 3181 ಗೌರ‌್ನರ್ ಎಚ್.ಆರ್.ಕೇಶವ್, ಸಹಾಯಕ ಗೌರ‌್ನರ್ ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ನಂಜುಂಡಸ್ವಾಮಿ, ರೋಟರಿ ವಲಯ-8ರ ರಾಜಶೇಖರ್ ಕದಂಬ, ರೋಟರಿ ಹೆರಿಟೇಜ್ ಕ್ಲಬ್ ಮೈಸೂರು ಅಧ್ಯಕ್ಷ ಸುರೇಶ್, ಜಗದೀಶ್, ಎಂ.ಪಿ.ಪ್ರಭಾಕರ್ ಮುಂತಾದವರು ಹಾಜರಿದ್ದರು.