ಜಿಲ್ಲೆ

ಮೈಸೂರಿನಲ್ಲಿ ಕಾಯಿಗಳಿಂದ 21 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ

ಮೈಸೂರು: ಮಹಾಶಿವರಾತ್ರಿ ಸಪ್ತಾಹ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಗರದಲ್ಲಿ 21 ಅಡಿ ಎತ್ತರದ ತೆಂಗಿನ ಕಾಯಿಗಳಿಂದ ಶಿವಲಿಂಗ ಪ್ರತಿಷ್ಠಾಪಿಸುತ್ತಿದೆ.

ಲಲಿತಮಹಲ್ ಮೈದಾನದಲ್ಲಿ ಮಾ.7ರಿಂದ 13 ವರೆಗೆ ಮಹಾಶಿವರಾತ್ರಿ ಸಪ್ತಾಹ ಮಹೋತ್ಸವ ಆಯೋಜಿಸಲಾಗಿದ್ದು, ಅಲ್ಲಿ ತೆಂಗಿನಕಾಯಿ ಶಿವಲಿಂಗ ಮುಖ್ಯ ಆಕರ್ಷಣೆಯಾಗಲಿದೆ ಎಂದು ಬ್ರಹ್ಮಕುಮಾರೀಸ್‌ನ ಸ್ವಯಂ ಸೇವಕಿ ಮಂಜುಳಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಸರಾ ಸ್ತಬ್ಧಚಿತ್ರ ತಯಾರಿಸುವ ಕಲಾವಿದರ ತಂಡವು ಈಗಾಗಲೇ ತೆಂಗಿನ ಕಾಯಿ ಶಿವಲಿಂಗ ನಿರ್ಮಾಣ ಕಾರ್ಯ ಆರಂಭಿಸಿದ್ದು, 18-20 ಕಲಾವಿದರು ಎಂಟು ಸಾವಿರ ತೆಂಗಿನಕಾಯಿಗಳನ್ನು ಬಳಸಿ 18 ಅಡಿ ಅಗಲ, 21 ಅಡಿ ಎತ್ತರದ ಶಿವಲಿಂಗ ನಿರ್ಮಿಸುತ್ತಿದ್ದಾರೆ ಎಂದು ಬ್ರಹ್ಮಕುಮಾರೀಸ್‌ನ ವಾಣಿ ಮಾಹಿತಿ ನೀಡಿದರು.

ಮಾ.7ರಂದು ಸಂಜೆ 4.30ಕ್ಕೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಶಿವರಾತ್ರಿ ಸಪ್ತಾಹ ಮಹೋತ್ಸವಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಲಿದ್ದಾರೆ.

ಮಂಡ್ಯದ ಬ್ರಹ್ಮ ಕುಮಾರೀಸ್‌ನ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಶಾರದಾ ಆಶೀರ್ವಚನ ನೀಡಲಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯೆ ರೂಪಾ, ಬ್ರಹ್ಮಕುಮಾರೀಸ್ ಹಾಸನ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಮೀನಾ ಭಾಗವಹಿಸಲಿದ್ದಾರೆ ಎಂದರು.

ನಿತ್ಯ ಸಂಜೆ 6.30ರಿಂದ 7ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.8ರಿಂದ 11ವರೆಗೆ ವಿವಿಧ ವಿಚಾರಗಳ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸ್ವಯಂ ಸೇವಕ ಸುಧೀರ್ ಸುದ್ದಿಗೋಷ್ಠಿಯಲ್ಲಿದ್ದರು.