ಜಿಲ್ಲೆ

ಮೈಸೂರಿನಲ್ಲಿ ಕಸದಿಂದ ಇದ್ದಿಲು ಉತ್ಪಾದನಾ ಘಟಕ ಸ್ಥಾಪನೆ

ಮೈಸೂರು: ವಾರಣಾಸಿ ಮಾದರಿಯಲ್ಲಿ ಹಸಿ ತ್ಯಾಜ್ಯವನ್ನು ಇದ್ದಿಲು(ಬಯೋ ಚಾರ್) ಆಗಿ ಪರಿವರ್ತನೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ (ಪಿಪಿಪಿ) ಇದನ್ನು ಜಾರಿಗೆ ತರಲಾಗುವುದು. ಇದರಿಂದ ಪಾಲಿಕೆಗೆ ಆರ್ಥಿಕ ಹೊರೆ ತಗ್ಗಲಿದೆ. ಜಾಗ ಕೊಟ್ಟರೆ ಸಾಕು ಎಂದು ಗುರುವಾರ ಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ಪಾಲಿಕೆ ನಿಯೋಗವು ಅಧ್ಯಯನ ಪ್ರವಾಸ ಕೈಗೊಂಡಿತ್ತು. ವಾರಣಾಸಿಯಲ್ಲಿ ತ್ಯಾಜ್ಯವನ್ನು ಇದ್ದಿಲು ಆಗಿ ಪರಿವರ್ತಿಸುವ ಉತ್ಪಾದನಾ ಘಟಕಕ್ಕೆ ಭೇಟಿ ನೀಡಲಾಯಿತು. ಅಲ್ಲಿ ನಿತ್ಯ ಸಂಗ್ರಹವಾಗುವ 600 ಟನ್ ಕಸವನ್ನು ಇದ್ದಿಲು ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಮೈಸೂರಿನಲ್ಲೂ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ವಿಂಡ್-ರೋ ವಿಧಾನದಲ್ಲಿ ಗೊಬ್ಬರ(ಏರೋಬಿಕ್ ಕಾಂಪೋಸ್ಟ್) ಮಾಡಲಾಗುತ್ತಿದೆ. ಇದಕ್ಕೆ 35-40 ದಿನ ಹಿಡಿಯುತ್ತದೆ. ತ್ಯಾಜ್ಯ ಶೇಖರಣೆಗೆ ಹೆಚ್ಚಿನ ಸ್ಥಳಾವಕಾಶವೂ ಬೇಕಾಗುತ್ತದೆ. ಕೊಳೆತ ಕಸದಿಂದ ವಿಷಕಾರಿ ದ್ರವ ಉತ್ಪತ್ತಿಯಾಗುವುದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಬಯೋ ಚಾರ್ ವ್ಯವಸ್ಥೆಯಲ್ಲಿ ಈ ರೀತಿ ಅಡ್ಡ ಪರಿಣಾಮ ಇರಲ್ಲ ಎಂದು ವಿವರಿಸಿದರು.

ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ನಿತ್ಯ ಬರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಅದೇ ದಿನದಂದು ಸಂಸ್ಕರಿಸಿ ವಿಲೇವಾರಿ ಮಾಡಬೇಕಿದೆ. ಇದು ಪರಿಸರವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ಹಸಿಕಸವನ್ನು ಇದ್ದಿಲು ರೂಪಕ್ಕೆ ಮಾಡಲು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್, ಕೇಂದ್ರ ಇಂಧನ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆಯಾದ ಆರ್‌ಡಿ ಸಂಶೋಧಕರ ವಿಭಾಗವು ಸಫಲವಾಗಿದೆ. ಇದು ವಾರಣಾಸಿಗೆ ಭೇಟಿ ನೀಡಿದಾಗ ತಿಳಿದುಬಂದಿದೆ ಎಂದು ಹೇಳಿದರು.

ಕಾರ್ಬೋನೈಜಿಂಗ್ ಅಂದರೆ ರಿಯಾಕ್ಟರ್ ಒಳಗೆ ಕಡಿಮೆ ಆಮ್ಲಜನಕದ ವಾತಾವರಣದಲ್ಲಿ ಹಸಿ ತ್ಯಾಜ್ಯವನ್ನು ಸುಟ್ಟಾಗ ಇದ್ದಿಲು ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಸಂಕುಚಿತಗೊಳಿಸಿ (ಕಂಪ್ರೆಸ್)ಕಲ್ಲಿದ್ದಲು ಸಹ ಮಾಡಬಹುದಾಗಿದೆ. ಇದನ್ನು ವಿದ್ಯುತ್ ಉತ್ಪಾದನೆಗೆ, ಇತರ ಕಾರ್ಖಾನೆಗಳಲ್ಲಿ ಬಾಯ್ಲರ್‌ಗಳಲ್ಲಿ ಬಳಸಬಹುದಾಗಿದೆ ಎಂದರು.

ಬಯೋ ಚಾರ್ ವ್ಯವಸ್ಥೆಯಿಂದ ಕಸ ವಿಲೇವಾರಿ ಸಮಯ ಕಡಿಮೆಯಾಗುತ್ತದೆ. ವಸ್ತುಗಳ ಮೌಲ್ಯ ಹೆಚ್ಚಾಗುತ್ತದೆ. ವಿಷಕಾರಿ ಅನಿಲ ಪರಿಸರಕ್ಕೆ ಸೇರುವುದನ್ನು ಕಡಿಮೆ ಮಾಡಬಹುದಾಗಿದೆ. ಹಸಿ ಕಸದಿಂದ ಕಾಂಪೋಸ್ಟ್ ತಯಾರಿಸುವುದರಿಂದ ಪರಿಸರಕ್ಕೆ ಆಗುತ್ತಿರುವ ಅಡ್ಡ ಪರಿಣಾಮವನ್ನು ನಿಯಂತ್ರಿಸಲು ಈ ಆಧುನಿಕ ಯೋಜನೆ ನಗರಕ್ಕೆ ಅವಶ್ಯಕವಾಗಿದೆ ಎಂದರು.
ಈ ಯೋಜನೆ ಜಾರಿಗಾಗಿ ಎಲ್ಲ ರೀತಿಯ ತಾಂತ್ರಿಕ ಸಹಾಯವನ್ನು ಪಡೆಯಲು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್‌ನ ಅಧಿಕಾರಿಗಳನ್ನು ಸಂಪರ್ಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.