ಮೈಸೂರು:ದೇಶದ ಸ್ಮಾರ್ಟ್ ಸಿಟಿಗಳಲ್ಲಿ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸಲು ಇರುವಂತಹ ‘ಕಮಾಂಡಿಂಗ್ ಕಂಟ್ರೋಲ್’ ಕೇಂದ್ರವನ್ನು ಮೈಸೂರಿನಲ್ಲೂ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ತಿಳಿಸಿದರು.
ಈಗ ಇರುವ ಪೊಲೀಸ್ ಕಂಟ್ರೋಲ್ ರೂಮ್ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿದೆ. ಆದರೆ ನೂತನ ಕಮಾಂಡಿಂಗ್ ಕಂಟ್ರೋಲ್ ಕೇಂದ್ರ, ಪೊಲೀಸ್, ಆಸ್ಪತ್ರೆ, ಅಗ್ನಿಶಾಮಕದಳ ಸೇರಿದಂತೆ ಇತರ ತುರ್ತು ಸೇವೆಗಳನ್ನು ಒಳಗೊಂಡ ಕೇಂದ್ರವಾಗಿರಲಿದೆ. ಸಾರ್ವಜನಿಕರು ಒಂದೊಂದು ಸೇವೆಗೆ ಒಂದೊಂದು ಸಂಖ್ಯೆಗೆ ಕರೆ ಮಾಡುವ ಬದಲು ಕಮಾಂಡೆಂಟ್ ಕಂಟ್ರೋಲ್ ಕೇಂದ್ರಕ್ಕೆ ಕರೆ ಮಾಡಿ ನೇರ ಸೇವೆ ಪಡೆಯಲು ಅವಕಾಶ ಇರಲಿದೆ. ಇದರಿಂದ ಸಮಯ ಉಳಿತಾಯದ ಜತೆಗೆ, ಹೆಚ್ಚಿನ ಹಾನಿ ತಪ್ಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.