ಜಿಲ್ಲೆ

ಮೈಸೂರಿನಲ್ಲಿ ಇಡೀ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ

Mysuru

ಮೈಸೂರು: ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ ಇಡೀ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಕೈಗೊಳ್ಳುವ ಚಿಂತನೆ ಇದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಅರಮನೆಯಲ್ಲಿ ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ದಸರಾ ವೇಳೆ ಮಾತ್ರವಲ್ಲದೆ, ಉಳಿದ ಸಂದರ್ಭದಲ್ಲೂ ಮೈಸೂರು ನೋಡುಗರ ಕಣ್ಮನ ಸೆಳೆಯುವಂತೆ ಮಾಡಬೇಕಿದೆ. ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಹಂತ ಹಂತವಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಇಲ್ಲಿ ಸಂಜೆಯಾಗುತ್ತಿದ್ದಂತೆ ನಗರ ಸ್ತಬ್ಧವಾಗುತ್ತದೆ. ಸಂಜೆ ವೇಳೆಯೂ ಕಾರ್ಯಕ್ರಮಗಳಾಗಬೇಕು. ಹೊರಗಿನಿಂದ ಬರುವ ಪ್ರವಾಸಿಗರು ಒಂದೆರಡು ದಿನಗಳ ಕಾಲ ನಗರದಲ್ಲೇ ಉಳಿಯುವಂತೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಪ್ರವಾಸೋದ್ಯಮ ಬಹಳ ಹಿಂದಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆ ಬಗ್ಗೆ ನಿರಾಸೆಯಾಗುತ್ತಿದೆ. ಇದನ್ನೆಲ್ಲ ನಿವಾರಿಸುವ ದೃಷ್ಟಿಯಿಂದ ವಿವಿಧ ಯೋಜನೆ ರೂಪಿಸಲಾಗುವುದು ಎಂದರು.
‘ಬ್ರಾೃಂಡ್ ಮೈಸೂರು’ ಕಲ್ಪನೆಯಡಿ ಏನೇನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲು ಪ್ರಮೋದಾದೇವಿ ಅವರನ್ನು ಭೇಟಿ ಮಾಡಿದ್ದು, ಅರಮನೆಯನ್ನು ಹೊರಗಿಟ್ಟು ನಮಗೆ ಮೈಸೂರಿನಲ್ಲಿ ಪ್ರವಾಸೋದ್ಯಮ ಕಲ್ಪಿಸಿಕೊಳ್ಳಲೂ ಆಗಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜಮನೆತನದ ಸಹಕಾರ ಮುಖ್ಯವಾಗಿದೆ. ಈ ಕುರಿತು ಅವರ ಸಹಕಾರ ಕೋರಲಾಗಿದೆ. ಬಹಳಷ್ಟು ಸಮಯ ಅವರೊಂದಿಗೆ ಚರ್ಚೆ ಮಾಡಲಾಯಿತು. ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮನಸ್ಸಿನ ಭಾವನೆಗಳನ್ನು ನಾವು ಅರ್ಥೈಸಿಕೊಂಡಿದ್ದು,  ಮುಂದಿನ ದಿನಗಳಲ್ಲಿ ಸಹಕಾರ ಕೊಡುತ್ತೇವೆಂಬ ಭರವಸೆ ನೀಡಿದ್ದಾರೆ. ಇಲಾಖೆ ವತಿಯಿಂದ ಕೈಗೊಳ್ಳುವ ಯೋಜನೆಗಳನ್ನು ಮುಕ್ತ ಮನಸ್ಸಿನಿಂದ ಅವರಿಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆ ಮುಂದುವರಿಯಬೇಕಿದೆ ಎಂದು ಹೇಳಿದರು.
ದಸರಾ ಸಂದರ್ಭದಲ್ಲಿ ಮಾತ್ರ ಸರ್ಕಾರ ನಮ್ಮ ಬಳಿ ದಸರಾ ಆಚರಣೆ ಬಗ್ಗೆ ಮಾತನಾಡುತ್ತದೆ. ಉಳಿದ ದಿನಗಳಲ್ಲಿ ನಮ್ಮ ಬಳಿ ಬರುವುದಿಲ್ಲವೆಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಅವರ ಮನಸ್ಸಿಗೆ ನೋವಾಗಿದೆ. ಪರಸ್ಪರ ಮಾತುಕತೆ ಮೂಲಕ ಎಲ್ಲವೂ ಸರಿಹೋಗಲಿದೆ ಎಂದರು.
ಹೆಲಿ ಟೂರಿಸಂ ಅಭಿವೃದ್ಧಿಗಾಗಿ, ರಾಜವಂಶಸ್ಥರ ಸುಪರ್ದಿಯಲ್ಲಿರುವ ಬೆಂಗಳೂರಿನ ಅರಮನೆ ಮೈದಾನ ಮತ್ತು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಕೆಗೆ ಅವಕಾಶ ನೀಡಬೇಕೆಂದು ಕೋರಲಾಗಿದೆ. ಇದಕ್ಕೆ ಪ್ರಮೋದಾದೇವಿ ಒಡೆಯರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು