ಜಿಲ್ಲೆ

ಮೈಸೂರಿನಲ್ಲಿ ಆಕರ್ಷಣೆಯ ಬೀಜ ಮೇಳ

ಆರ್.ಕೃಷ್ಣ

ಮೈಸೂರು: ಬೀಜ ಸಂರಕ್ಷಣೆ ಹಾಗೂ ಕೃಷಿ ಜೀವವೈವಿಧ್ಯಕ್ಕಾಗಿ ಶ್ರಮಿಸುತ್ತಿರುವ ರಾಜ್ಯದ 30 ಬೀಜ ಸಂರಕ್ಷಕರ ಗುಂಪುಗಳು ಮೈಸೂರು ಬೀಜ ಮೇಳದಲ್ಲಿ ಭಾಗವಹಿಸಿವೆ.
ಒಂದು ಸಾವಿರಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳು, ಸಿರಿಧಾನ್ಯ, ತರಕಾರಿ ಮತ್ತು ಹಣ್ಣು ಹಂಪಲು ತಳಿಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ಕಸಿ ಮಾಡುವ ತಂತ್ರಜ್ಞಾನ, ಬೀಜದ ಉಂಡೆ ತಯಾರಿಕೆ ಪ್ರಾತ್ಯಕ್ಷಿಕೆ ಇದೆ.
ಗ್ರೀನರಿ ಮೈಸೂರು ಸಂಘಟನೆಯು ರಸ್ತೆ ಬದಿ ನೆಡುವ ಹಣ್ಣಿನ ಗಿಡಗಳನ್ನು ಅಗ್ಗದ ಬೆಲೆಗೆ ದೊರೆತರೆ, ತುಮಕೂರಿನ ಕೆಂಪು ಹಲಸಿನ ಖ್ಯಾತಿಯ, ಸಿದ್ದು ಹಲಸು ಮತ್ತು ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ ಮೊದಲಾದ ಹಣ್ಣಿನ ಗಿಡಗಳ ಪ್ರದರ್ಶನ, ಸಹಜ ಸೀಡ್ಸ್ ಮುಂಗಾರಿಗೆ ಸೂಕ್ತವಾದ ವೈವಿಧ್ಯ ಬೀಜಗಳ ಪ್ರದರ್ಶನ, ಮಾರಾಟ ಇದೆ.
ಧಾರವಾಡದ ಮಹಿಳಾ ಸಂಘಗಳು ರಾಗಿ, ಸಾವೆ, ಹಾರಕ, ಬರಗು, ನವಣೆಯ ವಿವಿಧ ತಳಿಯ ಬೀಜ ಮತ್ತು ಸಿರಿಧಾನ್ಯ ಅಕ್ಕಿ, ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಾವೆ ರೊಟ್ಟಿ ಮೇಳದ ಆಕರ್ಷಣೆ. ಸೊಪ್ಪಿನ ಮಹತ್ವವನ್ನು ಪರಿಚಯಿಸಲು ಸಕತ್ ಸೊಪ್ಪು ರೈತ ಗುಂಪು ಹಲವು ಬಗೆಯ ಸೊಪ್ಪು ಮತ್ತು ಸೊಪ್ಪಿನ ವೈವಿಧ್ಯಮಯ ಆಹಾರಗಳನ್ನು ಉಣಬಡಿಸುತ್ತಿದೆ.
ಬೀಜ ಸಂರಕ್ಷಣೆ ಮತ್ತು ಸಾವಯವ ಬೀಜೋತ್ಪಾದನೆಯ ಬಗ್ಗೆ ಜೂ.4ರಂದು 10.30ಕ್ಕೆ ಉಚಿತವಾಗಿ ತರಬೇತಿ ಸಹ ಆಯೋಜಿಸಲಾಗಿದೆ. ಸಂಜೆ 4ಕ್ಕೆ ಬೀಜ ವಿನಿಮಯ ಕಾರ್ಯಕ್ರಮವಿದ್ದು, ಆಸಕ್ತರು ಬೀಜ, ಗಿಡಗಳನ್ನು ವಿನಿಮಯಕ್ಕೆ ತರಲು ಅವಕಾಶವಿದೆ. ಮಾಹಿತಿಗೆ ಮೊ.8088890138 ಅಥವಾ 9632001827 ಅನ್ನು ಸಂಪರ್ಕಿಸಲು ಕೋರಲಾಗಿದೆ.