ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ಸಡಗರ, ಸಂಭ್ರಮ, ಶ್ರದ್ಧಾಭಕ್ತಿಯೊಂದಿಗೆ ಹನುಮಂತೋತ್ಸವ ಪ್ರಯುಕ್ತ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಹನುಮ ಹಬ್ಬದ ಉತ್ಸವ ಮೂರ್ತಿಗಳು ಎಲ್ಲರ ಗಮನ ಸೆಳೆಯಿತು.
ಹನುಮಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹನುಮೋತ್ಸವ ಮೆರವಣಿಗೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಚಾಲನೆ ದೊರೆಯಿತು. ಹನುಮೋತ್ಸವದ ಉತ್ಸವ ಮೂರ್ತಿಗಳ ಮೆರವಣಿಗೆಗೆ ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವನಾಥ ಸ್ವಾಮೀಜಿ ಚಾಲನೆ ನೀಡಿದರು. ಶ್ರೀರಾಮ, ಸೀತೆ, ಆಂಜನೇಯ ಹಾಗೂ ಲಕ್ಷ್ಮಣ ಮೂರ್ತಿಗೆ ಸ್ವಾಮೀಜಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದರು.
ಮೆರವಣಿಗೆಯಲ್ಲಿ 20ಕ್ಕೂ ಹೆಚ್ಚು ಹನುಮ ಮೂರ್ತಿಗಳು ಗಮನ ಸೆಳೆಯಿತು. ವಾಹನದಲ್ಲಿ ಹನುಮ ಮೂರ್ತಿಗಳನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ತಮಟೆ, ಡೋಲು, ಚಂಡೆಮೇಳ ಮೆರಗು ನೀಡಿತು. ಕೇಸರಿ ಧ್ವಜ ಹಿಡಿದ ಹನುಮ ಭಕ್ತರು ‘ ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಉತ್ಸವ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಅದ ಸಾಗಿತು. ದೇವಾಲಯದಿಂದ ಹೊರಟು ಅಶೋಕ ರಸ್ತೆ, ಇರ್ವಿನ್ ರಸ್ತೆ, ಸಯ್ಯಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಗನ್‌ಹೌಸ್, ಹಾರ್ಡಿಂಜ್ ವೃತ್ತ ಮೂಲಕ ಸಾಗಿ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಗೆ ಆಗಮಿಸಿದ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಾನಪದ ಕಲಾವಿದರು ದಾರಿಯುದ್ದಕ್ಕೂ ತಮ್ಮ ಕಲೆಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ನಂದಿ ಕಂಬ, ಬೀಸು ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ ಪ್ರದರ್ಶಿಸಿದರು. ಕಾಳಿ ವೇಷಧಾರಣಿಯೊಂದಿಗೆ ವೀರಗಾಸೆ ವೇಷಧಾರಿ ಕಲಾವಿದರು ವೀರಭದ್ರನ ಕುಣಿತ ಕುಣಿದು ಎಲ್ಲರ ಗಮನ ಸೆಳೆದರು. ಶಿವ, ಕಾಳಿ, ಪಾರ್ವತಿ, ದುರ್ಗೆ ಮುಂತಾದ ದೇವರ ವೇಷಧಾರಿಗಳು ಮೆರವಣಿಗೆಯಲ್ಲಿ ತೆರಳಿದರು. ಕೈಯಲ್ಲಿ ಗಧೆ ಹಿಡಿದ ವ್ಯಕ್ತಿಯೊಬ್ಬ ಹನುಮ ವೇಷಧಾರಿಯಾಗಿದೆ ಸಾಗಿದರೆ, ಮತ್ತೊಬ್ಬರು ಬಾಹುಬಲಿ ಹನುಮಧಾರಿ ವೇಷತೊಟ್ಟು ಸಾಗುವ ಮೂಲಕ ಎಲ್ಲರ ಕಣ್ಮನ ಸೆಳೆದರು. ವೇಷಧಾರಿಗಳೊಂದಗೆ ಜನರು ಫೋಟೋ ತೆಗೆಯಿಸಿಕೊಂಡು ಸಂಭ್ರಮಿಸಿದರು.
ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್, ಟಿ.ಎಸ್. ಶ್ರೀವತ್ಸ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಸಾ.ರಾ.ಮಹೇಶ್ ಮೆರವಣಿಗೆಗೆ ಸಾಥ್ ನೀಡಿದರು. ಅಶೋಕ ರಸ್ತೆಯ ಬಳಿ ಮಾಜಿ ಸಂಸದ ಪ್ರತಾಪ ಸಿಂಹ ಜತೆಯಾಗಿ ಯುವ ಸಮೂಹಕ್ಕೆ ಜೋಶ್ ನೀಡಿದರು. ಆರ್‌ಎಸ್‌ಎಸ್ ಮುಖಂಡ ಕೇಶವಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಶ್ರೀರಾಮ ಸೇನೆ ಸಂಜಯ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು. ಹನುಮೋತ್ಸವದ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಮುಂದೆ ಕಮಾಂಡೋ ಪಡೆ ಸಾಗಿದರೆ, ಮೆರವಣಿಗೆ ಹಿಂದೆ ಕೆಎಸ್‌ಆರ್‌ಪಿ ತುಕುಡಿಗಳು ಸಾಗಿದವು.