ಜಿಲ್ಲೆ

ಮೈಸೂರಿನಲ್ಲಿ 30ರಂದು ಗೃಹಲಕ್ಷ್ಮೀಗೆ ಚಾಲನೆ

ಸಾಲಿಗ್ರಾಮ: ಆ.30ರಂದು ಮಹಿಳೆಯರ ಮನೆಗೆ ಗೃಹಲಕ್ಷ್ಮೀ ಪ್ರವೇಶ ಮಾಡಲಿದ್ದು, ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.


ಸಾಲಿಗ್ರಾಮ ತಾಲೂಕಿನ ಕಟ್ನಾಳು ಗ್ರಾಮದಲ್ಲಿ ಶನಿವಾರ ಕ್ಷೇತ್ರ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಕುಟುಂಬ ನಿರ್ವಹಣೆ ಮಾಡಲು ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರತಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಆ. 30ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಪ್ರತಿ ಗ್ರಾಮಕ್ಕೂ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.


ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ರಾಜ್ಯದ ಇತಿಹಾಸ ಸೃಷ್ಟಿಸುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಂದಿರುವುದರಿಂದ ಮೊದಲ ವರ್ಷದಲ್ಲಿ ಗ್ರಾಮಗಳ ಸಂಪೂರ್ಣ ಅಭಿವೃದ್ಧಿ ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಕಾಟ್ನಾಳು ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಿ ಅಭಿವೃದ್ಧಿ ಮಾಡಲಾಗುತ್ತದೆ. ಗ್ರಾಮದಲ್ಲಿ ತುರ್ತಾಗಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಶೀಘ್ರದಲ್ಲೇ ಮಾಡಿಕೊಡುತ್ತೇನೆ. ನನಗೆ ಹೆಚ್ಚು ಮತ ನೀಡುವ ಮೂಲಕ ಕಾಟ್ನಾಳು ಗ್ರಾಮದ ಮತದಾರರು ನನ್ನನ್ನು ಶಾಸಕರಾಗಿ ಮಾಡಲು ಸಹಕಾರ ನೀಡಿದ್ದು, ಗ್ರಾಮವನ್ನು ಅಭಿವೃದ್ಧಿ ಮಾಡುವ ಮೂಲಕ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಗ್ರಾಮದಲ್ಲಿ ಹಲವು ಸಮಸ್ಯೆಗಳ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಸಾಲಿಗ್ರಾಮ ಕಾಂಗ್ರೆಸ್ ನಗರ ಅಧ್ಯಕ್ಷ ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಕುಮಾರ್, ಡೇರಿ ಅಧ್ಯಕ್ಷ ರಾಮೇಗೌಡ, ಡಿ.ಕೆ.ಶಿವಕುಮಾರ್ ಬಳಗದ ಅಧ್ಯಕ್ಷ ಸಂತೋಷ್, ಮುಂಡೂರ್ ನಾಗಣ್ಣ, ಗಾಮ ಪಂಚಾಯಿತಿ ಸದಸ್ಯ ವಿನೋದಾ ರಮೇಶ, ಮುಖಂಡರಾದ ಕಳ್ಳಿಮುದ್ದನಹಳ್ಳಿ ದಿನೇಶ್, ವಿಶ್ವ, ರವಿ, ಕುಮಾರ್. ಹರೀಶ್, ಮಂಜುನಾಥ್, ಅರುಣ, ದೇವರಾಜ್, ಪುಟ್ಟಯ್ಯ, ದೊಡ್ಡಯ್ಯ, ರಾಜಯ್ಯ, ಬೊಮ್ಮರಾಯಿ, ನಾಗರಾಜು, ಶಂಕರಗೌಡ, ಬಸವಣ್ಣ, ಕಾಟ್ನಾಳು ರಮೇಶ್, ಮುದುಗುಪ್ಪೆ ಮಾದೇವ್ ಇತರರು ಇದ್ದರು.