ಮೈಸೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಗೃಹಲಕ್ಷ್ಮೀ’ ಗ್ಯಾರಂಟಿ ಯೋಜನೆಗೆ ಆ. 30ರಂದು ನಗರದಲ್ಲಿ ಚಾಲನೆ ನೀಡಲಾಗುವುದು.
ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು 1.5 ಲಕ್ಷ ಮಹಿಳಾ ಫಲಾನುಭವಿಗಳನ್ನು ಸೇರಿಸಿ, ಸಮಾವೇಶ ನಡೆಸುವ ಮೂಲಕ ಯೋಜನೆ ಉದ್ಘಾಟನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಬೆಳಗಾವಿಯಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದು, ಸಮಯದ ಅಭಾವ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ 1.85 ಕೋಟಿಗೂ ಹೆಚ್ಚು ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ಏಕಕಾಲದಲ್ಲಿ ಅಂದು ತಲಾ 2 ಸಾವಿರ ರೂ. ಜಮೆಯಾಗಲಿದೆ. ಇದರಲ್ಲಿ ಮೈಸೂರು ಭಾಗದ 4 ಜಿಲ್ಲೆಗಳ 13,81,430 ಕುಟುಂಬಗಳ ಫಲಾನುಭವಿಗಳು ಸೇರಿದ್ದಾರೆ ಎಂದರು.
ಕಾರ್ಯಕ್ರಮಸ ರೂಪುರೇಷೆ ಕುರಿತು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗುವುದರೊಂದಿಗೆ, ನಮ್ಮದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಬಣ್ಣಿಸಿದರು.
ಈಗಾಗಲೇ ಶೇ.80ರಷ್ಟು ನೋಂದಣಿ ಪ್ರಕ್ರಿಯೆ ಮುಗಿದಿದ್ದು, ನೋಂದಣಿಗೆ ಯಾವುದೇ ಅಂತಿಮ ಸಮಯ ನಿಗದಿ ಮಾಡಿಲ್ಲ. ನೋಂದಣಿ ಕಾರ್ಯ ನಿರಂತರವಾಗಿರುತ್ತದೆ. ಆದರೆ ಕೆಲ ಪಡಿತರ ಕಾರ್ಡ್‌ಗಳ ಜೋಡಣೆ ಕಾರ್ಯದಲ್ಲಿ ತೊಂದರೆ ಆಗಿದ್ದು, ಅದನ್ನು ಶೀಘ್ರವೇ ಸರಿಪಡಿಸಿ ಮುಂದಿನ ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೂ ಯೋಜನೆ ತಲುಪಿಸಲಾಗುವುದು. ಸದ್ಯಕ್ಕೆ ಹೊಸ ಕಾರ್ಡ್‌ಗಳ ವಿತರಣೆ ನಿಲ್ಲಿಸಿದ್ದು, ಮುಂದೆ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ರಾಜ್ಯದ 1.30 ಕೋಟಿ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಯೋಜನೆಯಾಗಿದ್ದು, ಸ್ವಾತಂತ್ರ್ಯಾನಂತರದ ಬಹುದೊಡ್ಡ ಯೋಜನೆಯಾಗಿದೆ ಎಂದು ಹೇಳಿದರು.
ಮಹಿಳಾ ಸಶಕ್ತೀಕರಣದೊಂದಿಗೆ ಮಹಿಳೆಯರ ಆತ್ಮಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದು ಅವರಿಗೆ ಸರಿಯಾದ ಊಟ, ಶೌಚಗೃಹ, ಬಸ್ ವ್ಯವಸ್ಥೆ, ಕುಡಿಯುವ ನೀರು ಸಮರ್ಪಕವಾಗಿರಲಿದೆ ಎಂದರು.
ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕಿ ಅರ್ಚನಾ, ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮೈಸೂರು ಜಿ.ಪಂ. ಸಿಇಒ ಕೆ.ಎಂ.ಗಾಯತ್ರಿ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಇತರರು ಇದ್ದರು.