ಜಿಲ್ಲೆ

ಮೈಸೂರಿನಲ್ಲಿ 3 ಕರೊನಾ ಕೇಸ್:  ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸಿದ್ಧ

ಮೈಸೂರು: ಜಿಲ್ಲೆಯಲ್ಲಿ ಕರೊನಾ ಮತ್ತೆ ಕಾಣಿಸಿಕೊಂಡಿದ್ದು, ಕಳೆದ ಮೂರು ದಿನಗಳಲ್ಲಿ ಮೂರು ಕೋವಿಡ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಆರ್‌ಟಿಪಿಸಿರ್ ಪರೀಕ್ಷೆಯನ್ನು ನಿಯಮಿತವಾಗಿ ಮಾಡಲಾಗುತ್ತಿದ್ದು, ಜನವರಿಯಿಂದ ಈವರೆಗೆ 80 ಪರೀಕ್ಷೆ ನಡೆಸಲಾಗಿದೆ.

ಆದರೆ ಇದರಲ್ಲಿ ಎರಡು ದಿನಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನ ಇಬ್ಬರು ಮತ್ತು ಶನಿವಾರ ಕೆ.ಆರ್.ನಗರ ತಾಲೂಕಿನ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಬಹುಪಾಲು ಜನರು ಶೀತ, ಕೆಮ್ಮು, ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇಂತಹವರಲ್ಲಿ ಕರೊನಾ ಸೋಂಕಿನ ಲಕ್ಷಣ ಇದ್ದವರಿಗೆ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಿದೆ.

ಹೀಗೆ ಪರೀಕ್ಷೆ ವೇಳೆ ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ, ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ನಗರದಲ್ಲಿನ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲೂ ವಿಶೇಷ ವಾರ್ಡ್ ತೆರೆಯಲು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ

ಮೂರು ವರ್ಷಗಳ ಹಿಂದೆ ಇದ್ದ ಎಲ್ಲ ಆಸ್ಪತ್ರೆಗಳಲ್ಲಿನ ಐಸೋಲೇಷನ್ ವಾರ್ಡ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಲು ಕಾರ್ಯಯೋಜನೆ ರೂಪಿಸಿಕೊಳ್ಳಲಾಗಿದೆ

60 ವರ್ಷ ಮೇಲ್ಪಟ್ಟವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಮತ್ತು ನೆಗಡಿ ಲಕ್ಷಣ ಕಂಡುಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟು ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ ಧರಿಸುವುದು. ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ಜನರೊಂದಿಗೆ ಹೆಚ್ಚು ಬೆರೆಯದೇ ಮನೆಯಲ್ಲೀ ಪ್ರತ್ಯೇಕವಾಗಿ ಇರುವುದು ಹಾಗೂ ಸಕಾಲದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ.