ಮೈಸೂರು: ಯುವಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳವನ್ನು ಅ.17ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೌಶಲ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇದು ನಡೆಯಲಿದ್ದು, ರಾಜ್ಯದ ಯಾವುದೇ ಜಿಲ್ಲೆಗಳ ಅಸಕ್ತರು ಪಾಲ್ಗೊಂಡು ಇದರ ಲಾಭ ಪಡೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
220ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, 45 ಸಾವಿರಕ್ಕೂ ಹೆಚ್ಚು ಉದ್ಯೋಗಳನ್ನು ನೀಡುವ ಸಾಧ್ಯತೆಗಳಿವೆ. ಈಗಾಗಲೇ ಆನ್‌ಲೈನ್ ಮೂಲಕ 25 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೈಸೂರು ವಿಭಾಗದಲ್ಲಿ 43,577 ಯುವನಿಧಿ ಫಲಾನುಭವಿಗಳಿದ್ದು, ಇವರಲ್ಲಿ 3158 ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದವರು ವಿವರಿಸಿದರು.
ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡವರಲ್ಲಿ ಈವರೆಗೆ 14,825 ಜನ ತಮ್ಮ ವೈಯಕ್ತಿಕ ಸ್ವವಿವರ ನೀಡಿದ್ದಾರೆ. ಈ ಪೈಕಿ 8,894 ಪುರುಷರು, 5,923 ಮಹಿಳೆಯರು ಹಾಗೂ 8 ಲಿಂಗತ್ವ ಅಲ್ಪಸಂಖ್ಯಾತರು ಸೇರಿದ್ದಾರೆ. ಮೈಸೂರು ಜಿಲ್ಲೆಯಿಂದ 8,998 ಅಭ್ಯರ್ಥಿಗಳು, ಬೆಂಗಳೂರು ನಗರದಿಂದ 1,770 ಸೇರಿದಂತೆ 29 ಜಿಲ್ಲೆಗಳಿಂದ ನೋಂದಣಿ ಕಾರ್ಯ ಆಗಿದೆ. ಮೇಳಕ್ಕೆ ಇನ್ನೂ ಎರಡು ದಿನ ಬಾಕಿ ಇರುವುದರಿಂದ 30 ಸಾವಿರ ಗಡಿದಾಟುವ ಸಾಧ್ಯತೆ ಇದೆ. ಆನ್‌ಲೈನ್‌ನಲ್ಲಿ ನೋಂದಣಿಯಾಗದವರು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ 60 ಮಳಿಗೆ ಹಾಗೂ ಕಂಪನಿಗಳ ನೋಂದಣಿಗೆ 10 ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮೇಳಕ್ಕೆ ಉಚಿತ ಪ್ರವೇಶ ಇದೆ. ಯಾವುದೇ ಕನಿಷ್ಠ ವಿದ್ಯಾರ್ಹತೆ ಹಾಗೂ ವಯಸ್ಸಿನ ಮಿತಿ ಇಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕಂಪನಿಗಳು ಸಂದರ್ಶನ ನಡೆಸಲಿವೆ. ಉದ್ಯೋಗ ಆಕಾಂಕ್ಷಿಗಳು, ಉದ್ಯೋಗದಾತರ ನೋಂದಣಿಯಿಂದ ಪ್ರಾರಂಭಗೊಂಡು ಸಂದರ್ಶನ, ಅಂತಿಮ ಆಯ್ಕೆ ಪ್ರಕ್ರಿಯೆ ಎಲ್ಲವೂ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಮೂಲಕವೇ ನಡೆಯಲಿದೆ. ಈ ಡೇಟಾವನ್ನು ಬಳಸಿಕೊಂಡು ಮುಂದೆಯೂ ಯುವಜನರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡಲಾಗುವುದು.
ಈಗಾಗಲೇ ಆನ್‌ಲೈನ್ ಮೂಲಕ ಕಂಪನಿಗಳು ಸಂದರ್ಶನ ನಡೆಸುತ್ತಿದ್ದು, ತಮ್ಮ ಹುದ್ದೆಗೆ ಬೇಕಾದ ಅಭ್ಯರ್ಥಿಗಳ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂದು ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ಹೆಚ್ಚುವರಿ ಬಸ್ ಸೌಲಭ್ಯ: ಮೇಳಕ್ಕೆ ಬರುವವರಿಗಾಗಿ ಆಯಾ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಉಪಾಹಾರದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯವುಳ್ಳ ತುರ್ತುವಾಹನ ಸೇವೆ ಒದಗಿಸಲಾಗಿದೆ. ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಪ್ರತ್ಯೇಕ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ನೆರವು ನೀಡಲು ವಿಶೇಷ ಮಳಿಗೆ ತೆರೆಯಲಾಗಿದೆ ಎಂದು ಸಚಿವರು ತಿಳಿಸಿದರು.