ಮೈಸೂರು: ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಟಿಪ್ಪು ಕನ್ನಡ ರಾಜ್ಯೋತ್ಸವ ವೇದಿಕೆ ವತಿಯಿಂದ ರಾಜೀವ್‌ನಗರ ಅಲ್ ಬದರ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ಟಿಪ್ಪು ಹೆಸರಿಗೆ ಅನೇಕ ಅಪಚಾರ ಮಾಡಲಾಗುತ್ತಿದೆ. ಸುಳ್ಳು ಕಥೆ ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದರು.
ಮೈಸೂರು ರಾಜ್ಯವನ್ನಾಳಿದರೂ 260 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಗುಂಬಜ್ ದ್ವಾರದ ಮೇಲೆ ರಿಯಾಸತೇ ದಖನ್ ಕರ್ನಾಟಕ್ ಎಂದು ಬರೆಸಿದ್ದಾರೆ. ಅಂದರೆ, ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊದಲ ಬಾರಿಗೆ ಉಲ್ಲೇಖಿಸಿದ ಕೀರ್ತಿ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ ಎಂದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ನಾವು ಬೇಕಂತಲೇ ಟಿಪ್ಪು ಹೆಸರನ್ನು ತೆಗೆದಿದ್ದೇವೆ. ಟಿಪ್ಪು ಏನು ಮೈಸೂರಿನವರಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಆದರೆ, ಅವರು ಮೈಸೂರಿನವರಾ ಎಂದು ಪ್ರಶ್ನಿಸಿದರು.
ದೂರದ ಸಕಲೇಶಪುರದಿಂದ ಬಂದು ಸ್ವಂತ ಪರಿಶ್ರಮದಿಂದ ರಾಜಕಾರಣ ಮಾಡಿಲ್ಲ. ಇಲ್ಲಿ ನರೇಂದ್ರ ಮೋದಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಟಿಪ್ಪು ಚರಿತ್ರೆಯನ್ನು ಅವರು ಸರಿಯಾಗಿ ಓದಿಲ್ಲ. ಅಂದಿನ ಟಿಪ್ಪು ಆಳ್ವಿಕೆಯಲ್ಲಿ ಬೇರೆ ಬೇರೆ ದೇಶಗಳ ಜಿಡಿಪಿಗಿಂತ ಮೈಸೂರು ರಾಜ್ಯದ ಜಿಡಿಪಿ ಐದು ಪಟ್ಟು ಹೆಚ್ಚಿತ್ತು. ತನ್ನ ರಾಜ್ಯದಲ್ಲಿ ಪಾನ ನಿಷೇಧ ಮಾಡಿದ ಜಗತ್ತಿನ ಮೊದಲ ದೊರೆ ಟಿಪ್ಪು ಸುಲ್ತಾನರು. 35 ಸಾವಿರ ಕೆರೆ-ಕಟ್ಟೆ ಕಟ್ಟಿಸಿದ್ದಾರೆ. ಅವರ ರಾಜ್ಯದಲ್ಲಿ ಶೇ.40ರಷ್ಟು ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು ಎಂದರು.
ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಟಿಪ್ಪು ಕನ್ನಡ ನಾಡಿನ ಛಲದಂಕ ಮಲ್ಲ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್. ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮಾಡಿದ್ದು ಟಿಪ್ಪು. ಕನ್ನಂಬಾಡಿ ಕಟ್ಟೆಯ ಭೂಮಿಪೂಜೆ ಮಾಡಿದ್ದು ಟಿಪ್ಪು. ಯಾರು ಏನೇ ಮಾಡಿದರೂ ಟಿಪ್ಪು ಹೆಸರು ಕನ್ನಡ ನಾಡಿನಲ್ಲಿ ಅಜರಾಮರ. ರೈಲಿನ ಹೆಸರು ಬದಲಾವಣೆ ಮಾಡಿದ ಕೂಡಲೇ ಅವರ ಹೆಸರಿಗೇನೂ ಚ್ಯುತಿ ಆಗಲ್ಲ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರ ಗುರು ಮಾತನಾಡಿ, ಟಿಪ್ಪು ಉತ್ತಮ ಆಡಳಿತಗಾರ. ದೀನ ದಲಿತರ ಬಂಧು, ಹಸಿವು ಮುಕ್ತ, ನಿರುದ್ಯೋಗ ಮುಕ್ತ, ಅಸಮಾನತೆ ಮುಕ್ತ ಮೈಸೂರು ರಾಜ್ಯ ಕಟ್ಟಿದವರು ಟಿಪ್ಪು. ಅವರು ಎಂದಿಗೂ ಹಿಂದು ವಿರೋಧಿ ಅಲ್ಲವೇ ಅಲ್ಲ ಎಂದು ಪ್ರತಿಪಾದಿಸಿದರು.
150ಕ್ಕೂ ಹೆಚ್ಚು ಹಿಂದು ದೇಗುಲ ಸ್ಥಾಪಿಸಿದ ಟಿಪ್ಪು ಮತಾಂಧನಲ್ಲ. ಏಕೆಂದರೆ, ಕಾವೇರಿ ಕಣಿವೆಯಲ್ಲಿ ಎಲ್ಲ ಜಾತಿ ಜನರಿಗೂ ಫಲವತ್ತಾದ ಭೂಮಿ ಕೊಟ್ಟಿದ್ದರು. ಟಿಪ್ಪುವಿಗಿಂತ ಕನ್ನಡ ಅಭಿಮಾನಿ ಮತ್ತೊಬ್ಬ ಇಲ್ಲ. ಆತನ ಆಡಳಿತ ಕಾಲದಲ್ಲಿ ಎಲ್ಲ ಪತ್ರಗಳನ್ನು ಕನ್ನಡದಲ್ಲೇ ಬರೆಯಲು ಆದೇಶಿಸಿದ್ದ. ಆತನ ತ್ಯಾಗವನ್ನು ಮಹಾತ್ಮ ಗಾಂಧಿ ಕೂಡ ಹೊಗಳಿದ್ದರು ಎಂದು ಹೇಳಿದರು.
ಧರ್ಮಗುರುಗಳಾದ ಮೌಲಾನಾ ಸಲಾಂಸಾಬ್, ಮೌಲಾನಾ ಅರ್ಷದ್ ಸಾಹೇಬ್, ಶ್ರೀ ಬಸವಲಿಂಗ ಸ್ವಾಮೀಜಿ, ಕ್ರೈಸ್ತ ಪ್ರಗತಿಪರ ಸಂಘಟಕ ಬಾರ್ದಾ ಮಯ್ಯರ್, ಆಮ್ ಆದ್ಮಿ ಪಾರ್ಟಿಯ ಧರ್ಮಸಿರಿ, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಖಾದರ್ ಶಾಹಿದ್, ಪಾಲಿಕೆ ಸದಸ್ಯ ಆಯೂಬ್ ಖಾನ್, ಮುಖಂಡರಾದ ಎಂ.ಎಫ್.ಕಲೀಮ್, ಅಫ್ರೋಜ್ ಖಾನ್, ಫಸೀಲ್ ಖಾನ್, ಆಜಂ, ಶಹಿನ್ಷಾ ಅಹಮದ್, ಅಪ್ತಾಬ್, ಇಮ್ರಾನ್ ಇನ್ನಿತರರು ಉಪಸ್ಥಿತರಿದ್ದರು.