ಜಿಲ್ಲೆ

ಮೈಸೂರಿನ ವಿವಿಧೆಡೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಡಗರ

ಮೈಸೂರು: ಕಾನೂನು ತಜ್ಞ, ವಿಶ್ವಜ್ಞಾನಿ, ಭಾರತ ರತ್ನ ಪುರಷ್ಕೃತ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ನಗರದ ವಿವಿಧೆಡೆ ಸೋಮವಾರ ಹಬ್ಬದಂತೆ ಆಚರಿಸಲಾಯಿತು.

ವಿವಿಧ ಕಾರ್ಯಕ್ರಮ ಆಯೋಜನೆಯ ಮೂಲಕ ಸಂವಿಧಾನ ಶಿಲ್ಪಿ ಸ್ಮರಿಸಲಾಯಿತು.

ವಿವಿಧ ಸಂಘ-ಸಂಸ್ಥೆಗಳು ಅಂಬೇಡ್ಕರ್ ಕುರಿತು ಚಿಂತನ-ಮಂಥನ ಸಭೆ ನಡೆಸಿದವು. ಬೃಹತ್ ಮೆರವಣಿಗೆ, ಅಲ್ಲಲ್ಲಿ ಅನ್ನ ಸಂತರ್ಪಣೆಯೂ ನಡೆಯಿತು.

ಮಹಾನಾಯಕನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಅಂಬೇಡ್ಕರ್ ಕ್ರಾಂತಿಗೀತೆಗಳು ಮೊಳಗಿದವು.

ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಅವರು ಹಾಕಿಕೊಟ್ಟ ಸಂವಿಧಾನ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿ ನಾವು ಸಮಾನತೆಯಿಂದ ಬದುಕಬೇಕಾದರೆ ಸಂವಿಧಾನ ಹಾಗೂ ಕಾನೂನನ್ನು ಬಿಟ್ಟು ಜೀವಿಸಲಾಗದು ಎಂಬುದನ್ನು ಬಾಬಾ ಸಾಹೇಬರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಅವರು ಸಂವಿಧಾನವನ್ನು ರಚಿಸುವ ವೇಳೆಗೆ ವಿಶ್ವದ ಎಲ್ಲ ಸಂವಿಧಾನಗಳನ್ನು ಓದಿ, ಅರ್ಥೈಸಿಕೊಂಡು ದೇಶ ಮೆಚ್ಚುವ ಸಮಾನತೆಯ ಪ್ರತಿಬಿಂಬವಾಗಿ ಸಮಾಜದ ಕಟ್ಟ ಕಡೆಯ ಜನರಿಗೂ ಅನುಕೂಲವಾಗುವಂತೆ ಹಾಗೂ ಸ್ವಾಭಿಮಾನದ ಬದುಕನ್ನು ನಡೆಸುವಂತೆ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಅದನ್ನು ನಾವು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ, ನಾಗರಿಕರಾಗಿ ಬದುಕಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಾಬಾ ಸಾಹೇಬರು ದಿನದ 16 ಗಂಟೆಗಳು ಪುಸ್ತಕ ಓದುತ್ತಿದ್ದರು. ಹಾಗೆಯೇ ಜ್ಞಾನ ಬೆಳೆಸಿಕೊಂಡು 32 ಪದವಿ ಪಡೆದ ಜಗತ್ತಿನ ಶ್ರೇಷ್ಠ ನಾಯಕ ಎನಿಸಿಕೊಂಡವರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು 16 ಗಂಟೆಗಳು ಅಂಗೈಯಲ್ಲಿ ಮೊಬೈಲ್ ಹಿಡಿದು ಕಾಲವನ್ನು ವ್ಯರ್ಥವಾಗಿ ಕಳೆಯುತ್ತಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ನರಸಿಂಹ, ಆಡಳಿತ ಮಂಡಳಿ ಸದಸ್ಯರಾದ ಎಸ್.ಎಲ್.ರಾಮಚಂದ್ರ, ಆರ್.ಎಸ್.ಮೋಹನ್‌ಮೂರ್ತಿ, ಕಾನೂನು ಕಾಲೇಜಿನ ಡೀನ್ ಎ.ಎಂ.ಬೊಳ್ಳಮ್ಮ, ಪ್ರಾಂಶುಪಾಲೆ ಕೆ.ಎಸ್.ಲೀಲಾ ಉಪಸ್ಥಿತರಿದ್ದರು.

ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಆಚರಣೆ:

ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಜನರಿಗೆ ಭದ್ರ ಬುನಾದಿ ಹಾಕಿಕೊಡಲು ಪ್ರಪಂಚದಾದ್ಯಂತ ಸಂಚರಿಸಿ, ಅಪಾರ ಅಧ್ಯಯನ ನಡೆಸಿದ ಅಂಬೇಡ್ಕರ್ ಅವರು ಭಾರತೀಯರಿಗೆ ಶ್ರೇಷ್ಠ ಸಂವಿಧಾನ ನೀಡಿದರು. ಆ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ, ವಾಕ್ ಸ್ವಾತಂತ್ರ್ಯ ಕಲ್ಪಿಸಿದ್ದಾರೆ. ಅಂಬೇಡ್ಕರ್ ಅವರ ದೀರ್ಘಕಾಲದ ಅಧ್ಯಯನ, ಅನೇಕ ವಿಚಾರ ಇಂದಿಗೂ ಜೀವಂತವಾಗಿದ್ದು, ಅವರ ಚಿಂತನೆ, ವಿಚಾರ ನಾವುಗಳು ಜೀವನದಲ್ಲಿ ಪಾಲನೆ ಮಾಡಬೇಕಿದೆ ಎಂದರು.

ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನವನ್ನು ಭಾರತೀಯರಿಗೆ ನೀಡಿದ್ದಾರೆ. ಅಂಬೇಡ್ಕರ್ ಅವರು ಭಾರತ ಕಂಡ ಅತ್ಯುನ್ನತ ಹಾಗೂ ಮಾನವರಿಗೆ ಸಮಾನತೆ ನೀಡಿದ ದೈವಿ ಪುರುಷರಾಗಿದ್ದು, ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿಯೂ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ ಶಾಖೆ) ಶರಣಮ್ಮ ಎಸ್.ಜಂಗಿನ್, ಪ್ರಧಾನ ವ್ಯವಸ್ಥಾಪಕ (ಆ ಮತ್ತು ಮಾ.ಸಂ) ಬಿ.ಆರ್.ರೂಪಾ, ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಂತರಿಕ ಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕ(ಖರೀದಿ) ಎಲ್.ಲೋಕೇಶ್ ಇದ್ದರು.