ಜಿಲ್ಲೆ

ಮೈಸೂರಿನ ವಿವಿಧೆಡೆ ಇಡಿ ದಾಳಿ: ಸಿದ್ದರಾಮಯ್ಯ ಆಪ್ತ ರಾಕೇಶ್ ಪಾಪಣ್ಣ ಮನೆಯಲ್ಲೂ ಶೋಧ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ 50:50 ಅನುಪಾತದಡಿ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ತಂಡ ಸೋಮವಾರ ನಗರದ ವಿವಿಧೆಡೆ ದಾಳಿ ಮಾಡಿ ಶೋಧ ನಡೆಸಿದೆ.

ಬೆಂಗಳೂರಿನಿಂದ ಆಗಮಿಸಿದ ಇಡಿ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಅವರ ಹಿನಕಲ್‌ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಎರಡು ತಾಸು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಿದ್ದ 10 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕೂಡ ವಿಚಾರಿಸಿದ್ದಾರೆ. 50:50ರ ಅನುಪಾತದಲ್ಲಿ ರಾಕೇಶ್ ಪಾಪಣ್ಣ ಅವರು ಪಡೆದಿರುವ ನಿವೇಶನಗಳು, ಇನ್ನಿತರ ದಾಖಲಾತಿಗಳನ್ನೂ ಪರಿಶೀಲಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಈ ಮನೆಯ ಒಳಗೆ ಯಾರನ್ನು ಬಿಟ್ಟಿರಲಿಲ್ಲ. ಸ್ಥಳೀಯ ಪೊಲೀಸರಿಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಗೊತ್ತಾಗಿದೆ.

ಬಿಲ್ಡರ್ ಮಂಜುನಾಥ್ ಮನೆ ಮೇಲೆಯೂ ದಾಳಿ

ನಗರದಲ್ಲಿರುವ ಬಿಲ್ಡರ್ ಮಂಜುನಾಥ್ ಅವರ ಮನೆ ಮೇಲೆಯೂ ದಾಳಿ ಮಾಡಲಾಗಿದೆ. ದಟ್ಟಗಳ್ಳಿ 3ನೇ ಹಂತದಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ. ನಗರದ ಹೊರವಲಯದ ಭುಗತಹಳ್ಳಿಯಲ್ಲಿ ಅವರ ತೋಟದ ಮನೆಯಲ್ಲೂ ಶೋಧ ಮಾಡಲಾಗಿದೆ. ಮುಡಾದ ನಿವೇಶನ ಹಂಚಿಕೆ ಕುರಿತಾದ ಮಹತ್ವ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಬಿಲ್ಡರ್ ಮಂಜುನಾಥ್ ಅವರ ಆಪ್ತ ಮತ್ತು ಶಿವಣ್ಣ ಅವರೊಂದಿಗೆ ಮುಡಾ ನಿವೇಶನದ ಸೆಟಲ್‌ಮೆಂಟ್ ಡೀಡ್ ವಿಚಾರದಲ್ಲಿ ನಡೆದ ಹಣ ವಿನಿಮಯದ ವಿಡಿಯೋ ಸಹಿತ ದೂರನ್ನು ಇಡಿ ಕಚೇರಿಗೆ ಸಲ್ಲಿಸಲಾಗಿತ್ತು. ಇದರ ಬೆನ್ನಲ್ಲೇ ಇಡಿ ದಾಳಿ ದಾಳಿಯಾಗಿದೆ.

ಕಳೆದ ವಾರವಷ್ಟೇ ಇಡಿ ಅಧಿಕಾರಿಗಳು ಮುಡಾ ಕಚೇರಿಯಲ್ಲಿ ಎರಡು ದಿನಗಳ ಕಾಲ ಶೋಧ ಕಾರ್ಯ ನಡೆಸಿ ಬಂಡಲುಗಟ್ಟಲೆ ದಾಖಲೆಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದರು.

ಕೆಸರೆ ಸರ್ವೇ ನಂ.464ಕ್ಕೆ ಸಂಬಂಧಿಸಿದ ಪ್ರತಿ ಕಡತಗಳು, 8 ಸಾವಿರ ಪುಟಗಳ ದಾಖಲೆಗಳು, ಜೆರಾಕ್ಸ್, ಮೂಲ ಪ್ರತಿ, ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿದ್ದರು. ಈ ದಾಖಲೆ ಆಧರಿಸಿ ಇದೀಗ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.