ಜಿಲ್ಲೆ

ಮೈಸೂರಿನ ವಿ.ಕೆ. ಸ್ಕೂಲ್‌ನಲ್ಲಿ ‘ಚಿಣ್ಣರ ವಿಜ್ಞಾನ ಆವಿಷ್ಕಾರ’

ಮೈಸೂರು: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಲು ಅವರಿಗೆ ವಿಜ್ಞಾನದ ಕುರಿತು ತಿಳಿಸುವ ಕಾರ್ಯ ಆಗಬೇಕು ಎಂದು ವಿ.ಕೆ. ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ವಿಜಯನಗರ 3ನೇ ಹಂತದ ವಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಚಿಣ್ಣರ ವಿಜ್ಞಾನ ಆವಿಷ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸು ವಿಕಸನಗೊಳ್ಳಲು ವಿಜ್ಞಾನ ಸಹಕಾರಿಯಾಗಲಿದೆ. ಮಕ್ಕಳು ಮನಸ್ಸು ವಿಕಸನಗೊಂಡರೆ ಅವರು ಸಮಾಜಮುಖಿಯಾಗಿ ಚಿಂತಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಜಗನ್ನಾಥ್ ಮಾತನಾಡಿ, ಮೂಢನಂಬಿಕೆಗಳಿಂದ ಹೊರಬರಲು ವಿಜ್ಞಾನ ನೆರವಾಗುತ್ತದೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳನ್ನು ಪ್ರಬುದ್ಧತೆಯ ಅಡಿಪಾಯದಲ್ಲಿ ಸುಶಿಕ್ಷಿತರನ್ನಾಗಿ ಮಾಡಿದಾಗ ದೇಶ ಸುಂದರವಾದ ಹೂದೋಟ ವಾಗಿ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಪ್ರತಿಭಾ ಮಾತನಾಡಿ, ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಸಿದ್ದರಾಮೇಗೌಡ, ನಿವೃತ್ತ ಪ್ರಾಂಶುಪಾಲ ನಿರಂಜನ್, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಿಶ್ವನಾಥ್, ವಿ.ಕೆ. ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಟಿ. ಮಂಜುನಾಥ್, ಟ್ರಸ್ಟಿಗಳಾದ ಸುರೇಶ್ ಬಾಬು, ಗೋವಿಂದರಾಜ್, ಶಿವಪ್ರಸಾದ್, ರೂಪಾಶ್ರೀ, ಸುನೀತಾ ಪಾಲಾಕ್ಷ, ರಾಮನಾಯಕ್ ಇದ್ದರು.