ಜಿಲ್ಲೆ

ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸಂಚಾರ ದುಸ್ತರ

ಆರ್.ಕೃಷ್ಣ

ಆರ್.ಕೃಷ್ಣ ಮೈಸೂರು
ರೈತರಿಂದ ಗ್ರಾಹಕರಿಗೆ ನೇರವಾಗಿ ತರಕಾರಿ ಮಾರಾಟಕ್ಕೆಂದು ನಗರದ ಮಹಾತ್ಮಗಾಂಧಿ ರಸ್ತೆಯ ಬದಿಯಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದು, ಇಲ್ಲಿ ಸಂಚರಿಸುವುದೇ ದುಸ್ತರವೆನಿಸಿದೆ.
ರೈತರು ಸಗಟು ಹಾಗೂ ಚಿಲ್ಲರೆ ವ್ಯಾಪಾರ ಮಾಡುವ ಈ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ರಾತ್ರಿ ಹಾಗೂ ಬೆಳಗ್ಗೆ ಈ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ.
ರಾತ್ರಿ 10ಗಂಟೆಯಿಂದ ರೈತರು ವಾಹನಗಳಲ್ಲಿ ತರಕಾರಿ, ಹಣ್ಣು, ಸೊಪ್ಪು ತಂದು ಹಾಕಿದರೆ, ಬೆಳಗಿನ ಜಾವ ಕೊಳ್ಳುವವರು ಇಲ್ಲಿಗೆ ಬರುತ್ತಾರೆ. ಹೀಗಾಗಿ ಬೆಳಗ್ಗೆ 10ಗಂಟೆವರೆಗೂ ವಹಿವಾಟು ನಡೆಯುವ ಕಾರಣ ರಸ್ತೆಯಲ್ಲಿ ಸಂಚರಿಸಲು ಪ್ರಯಾಸಪಡಬೇಕಿದೆ.
ಅಲ್ಲದೆ, ಸಿದ್ಧಾರ್ಥ ಬಡಾವಣೆ, ಇಂದಿರಾನಗರ, ಕೆ.ಸಿ.ಲೇಔಟ್, ನಜರ್‌ಬಾದ್, ಲಲಿತಾದ್ರಿಪುರ, ಆಲನಹಳ್ಳಿ, ಅಗ್ರಹಾರದ ಕಡೆಗೆ ನೇರ ಸಂಪರ್ಕ ರಸ್ತೆ ಇದಾಗಿದೆ. ನಿತ್ಯ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು, ನ್ಯಾಯಾಲಯಕ್ಕೆ ತೆರಳುವ ವಕೀಲರು, ಉದ್ಯೋಗಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಶಾಲೆ, ಕಚೇರಿ ಸಮಯದಲ್ಲಂತೂ ಇಲ್ಲಿ ವಹಿವಾಟು ಜೋರಾಗಿರುತ್ತದೆ. ಕೊಳ್ಳುವವರು ಹಾಗೂ ಮಾರುವವರು ಸಹ ತಮ್ಮ ವಾಹನಗಳನ್ನು ಮಾರುಕಟ್ಟೆ ಮುಂಭಾಗ ಇರುವ ಎಂ.ಜಿ.ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿಕೊಂಡಿರುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ತೆರಳುವವರು ಮುಂದೆ ಹೋಗಲು ಬಹಳ ಪರಿಶ್ರಮ ಪಡುವಂತಾಗಿದೆ.
ಗುಂಡ್ಲುಪೇಟೆ, ನಂಜನಗೂಡು, ಎಚ್.ಡಿ.ಕೋಟೆ, ಮೈಸೂರು ತಾಲೂಕಿನ ವಿವಿಧ ಭಾಗದ ರೈತರು ವಾಹನಗಳಲ್ಲಿ ಹಣ್ಣು, ತರಕಾರಿ, ಸೊಪ್ಪು ತಂದು ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ರಾತ್ರಿಯಿಡೀ ಮಲಗಿರುತ್ತಾರೆ. ಹೀಗಾಗಿ ಹತ್ತಾರು ವಾಹನಗಳ ನಿಲ್ದಾಣವೇ ಅಲ್ಲಿ ನಿತ್ಯ ನಿರ್ಮಾಣವಾಗುತ್ತಿದೆ.
ರೋಗಿಗಳಿಗೂ ಪರದಾಟ: ಜೆಎಸ್‌ಎಸ್ ಸೇರಿದಂತೆ ಇನ್ನಿತರ ಆಸ್ಪತ್ರೆಗಳಿಗೆ ತೆರಳಲು ಎಂ.ಜಿ.ರಸ್ತೆ ನೇರ ಹಾಗೂ ಸಮೀಪದ ಮಾರ್ಗವಾಗಿದೆ. ವ್ಯಾಪಾರ ನಡೆಯುವ ಸಮಯದಲ್ಲಿ ಕೆಲವೇ ಮೀಟರ್‌ಗಳ ದೂರವನ್ನು ಅಂಬುಲೆನ್ಸ್‌ಗಳು ತೆರಳಲು ಸುಮಾರು ಹೊತ್ತು ಹಿಡಿಯುತ್ತದೆ. ಇದರಿಂದ ರೋಗಿಗಳು ಪದಾಡುವ ಸ್ಥಿತಿ ಇದೆ.
ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಗೂಡ್ಸ್ ವಾಹನ, ಕಾರು, ಬೈಕ್, ಸ್ಕೂಟರ್, ತಳ್ಳುವಗಾಡಿಗಳನ್ನು ತೆರವುಗೊಳಿಸಲು ಈ ಹಿಂದೆ ಇಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಈಗ ಪೊಲೀಸರು ಇಲ್ಲದೆ ವಾಹನಗಳು ಬಂದಾಗ ದಾರಿ ಬಿಡುವಂತೆ ಕೋರುವ ಅಥವಾ ಜಗಳಕ್ಕೆ ನಿಲ್ಲುವ ಸನ್ನಿವೇಶಗಳು ಸಹ ಸೃಷ್ಟಿಯಾಗುತ್ತಿವೆ.
ಆರಂಭದಲ್ಲಿ ನೂರರಷ್ಟು ಇದ್ದ ವ್ಯಾಪಾರಿಗಳ ಸಂಖ್ಯೆ ಈಗ 600ಕ್ಕೂ ಹೆಚ್ಚಾಗಿದ್ದು, ಕೊಳ್ಳುವವರ ಸಂಖ್ಯೆಗೂ ಗಣನೀಯವಾಗಿ ಏರಿಕೆ ಅಗುತ್ತಿದೆ. ಅಂದಾಜಿನಿ ಪ್ರಕಾರ ಈ ಮಾರುಕಟ್ಟೆಯಲ್ಲಿ ನಿತ್ಯ ಸುಮಾರು 20 ರಿಂದ 30 ಲಕ್ಷ ರೂ. ವಹಿವಾಟು ನಡೆಯುತ್ತದೆ ಎನ್ನಲಾಗಿದೆ.
ಬಿಡಾಡಿ ದನಗಳ ಸಂಚಾರ:
ತರಕಾರಿ ಮಾರುಕಟ್ಟೆಯಲ್ಲಿ ಬಿಸಾಡುವ ಹಣ್ಣು, ತರಕಾರಿ, ಸೊಪ್ಪು ತಿನ್ನಲು ಬಿಡಾಡಿ ದನಗಳ ಹಿಂಡೇ ಇಲ್ಲಿರುತ್ತದೆ. ರಸ್ತೆ ಬದಿಯೇ ಮಾರುಕಟ್ಟೆ ತ್ಯಾಜ್ಯ ಸುರಿಯಲಾಗುತ್ತಿದೆ. ಇದನ್ನು ತಿನ್ನಲು ಬರುವ ದನಗಳು ರಸ್ತೆ ತುಂಬ ಅಡ್ಡಾಡುತ್ತವೆ. ಇದರಿಂದ ಬೈಕ್ ಸವಾರರು, ಪಾದಚಾರಿಗಳ ಮೇಲೂ ಬಿದ್ದು ಗಾಯಗೊಂಡಿರುವ ಉದಾಹರಣೆ ಇವೆ. ಇಷ್ಟಾಗಿಯೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎನ್ನುವ ಆರೋಪವಿದೆ.

ಪಾರ್ಕಿಂಗ್ ಸಮಸ್ಯೆ ಒಂದೆಡೆಯಾದರೆ, ಮಳೆಗಾಲದಲ್ಲಿ ಇಡೀ ತರಕಾರಿ ಮಾರುಕಟ್ಟೆ ಕೆಸರುಮಯವಾಗುತ್ತದೆ. ಇದರಿಂದ ಇಡೀ ಆವರಣ ಕಲುಷಿತಗೊಳ್ಳುತ್ತದೆ. ಇದರಲ್ಲೇ ನಡೆದು ಜನರು ತರಕಾರಿ ಖರೀದಿಸಬೇಕು. ಇಲ್ಲಿಯ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಗೃಹ, ಮಳೆ, ಬಿಸಿಲಿಗೆ ಆಶ್ರಯ ತಾಣ ಇಲ್ಲ. ನಗರಪಾಲಿಕೆಯಿಂದ ಸೌಲಭ್ಯ ಕಲ್ಪಿಸಲು ಜಾಗದ ವಿವಾದವಿದ್ದು, ಅದು ಸದ್ಯಕ್ಕೆ ಬಗೆಹರಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಉಳಿಯುವ ತರಕಾರಿ, ಹಣ್ಣು, ಸೊಪ್ಪಿನ ವಿಲೇವಾರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಹಲವರು ಬಯಲಿನಲ್ಲಿಯೇ ಶೌಚ ಮಾಡುವುದರಿಂದ ಅನೈರ್ಮಲ್ಯ ಉಂಟಾಗುತ್ತಿದೆ. ರೈತರಿಗೆ ತಂಗುದಾಣವಿಲ್ಲ.

ಸೂಕ್ತ ನಿರ್ದೇಶನ ನೀಡಲಾಗುವುದು
ಎಂ.ಜಿ.ರಸ್ತೆಯಲ್ಲಿ ರೈತರು ಹಣ್ಣು, ತರಕಾರಿ ಮಾರಾಟ ಮಾಡುವುದರಿಂದ ಆ ಸಮಯದಲ್ಲಿ ಮಾತ್ರ ಸ್ವಲ್ಪ ತೊಂದರೆ ಅಗುತ್ತಿದೆ ಎನ್ನುವ ಮಾಹಿತಿ ಬಂದಿದೆ. ಆಂಬುಲೆನ್ಸ್, ಶಾಲಾ, ಕಾಲೇಜು, ಕಚೇರಿಗೆ ಹೋಗುವವರಿಗೆ ಅಡ್ಡಿಯಾಗದಂತೆ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಂಬಂಧಪಟ್ಟರಿಗೆ ನಿರ್ದೇಶನ ನೀಡಲಾಗುವುದು.
ಬಿ.ರಮೇಶ್ ಬಾನೋತ್, ಪೊಲೀಸ್ ಕಮೀಷನರ್