ಜಿಲ್ಲೆ

ಮೈಸೂರಿನ ಬಸ್ ನಿಲ್ದಾಣಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ದಿಢೀರ್ ಭೇಟಿ

ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲಿದ್ದ ಪೊಲೀಸ್ ಉಪಠಾಣೆ, ದೂರಗಳ ನೋಂದಣಿ ಪುಸ್ತಕ ಪರಿಶೀಲಿಸಿದರು. ಬಳಿಕ ತಾಯಿ ಪಾಲನಾ ಕೇಂದ್ರವನ್ನು ಪರಿಶೀಲಿಸಿ, ಇಲ್ಲಿ ಮೂಲ ಸೌಲಭ್ಯಗಳಿಲ್ಲ, ಬಾಗಿಲು, ಹಾಸಿಗೆ, ಕುರ್ಚಿಗಳು ಹಾಳಾಗಿವೆ. ಇದರಿಂದ ಅವುಗಳ ಬಳಕೆ ಕಷ್ಟಕರವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಸೂಚಿಸಿದರು.

ಅಂಗವಿಕಲರಿಗೆ ಮೀಸಲಾಗಿರುವ ಶೌಚಗೃಹ ಮುಚ್ಚಲಾಗಿದೆ. ಅದರ ಬಾಗಿಲು ಮುರಿದು ಹೋಗಿದ್ದು, ಅದು ಬಳಕೆಗೂ ಯೋಗ್ಯವಾಗಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಶೌಚಗೃಹಗಳ ಬಳಸಲು ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಮೂತ್ರ ವಿಸರ್ಜನೆಗೂ ಹಣ ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ಇದನ್ನು ಬಳಕೆ ಮಾಡಲು ಬಡವರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.

ಬಸ್ ನಿಲ್ದಾಣ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಾಕಾಗಲ್ಲ. ಪ್ರಯಾಣಿಕರ ದಟ್ಟಣೆ ಸಂದರ್ಭದಲ್ಲಿ ಕಣ್ಗಾವಲು ಇಡಲು ಕಷ್ಟಕರವಾಗಲಿದೆ. ಸುರಕ್ಷತೆ, ಭದ್ರತೆ ಕುರಿತು ಖಾತ್ರಿಪಡಿಸಲು ಕ್ರಮ ವಹಿಸಬೇಕು ಎಂದೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಯಾಣಿಕರಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಈ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದೂ ನಿರ್ದೇಶಿಸಿದರು. ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿಲ್ಲ. ಅದು ಹುಳುಗಳಿಂದ ಕೂಡಿದೆ.

ಈ ನೀರು ಬಳಕೆ ಮಾಡುವ ಜನರ ಆರೋಗ್ಯಕ್ಕೆ ಅಪಾಯವನ್ನು ಉಂಟಾಗಲಿದೆ. ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಇನ್ನಿತರರು ಇದ್ದರು