ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿಣ್ಣರ ಚಿಲಿಪಿಲಿ ಮೇಳೈಸಿತ್ತು. ಶಾಲಾ ಚೌಕಟ್ಟಿನಿಂದ ಹೊರ ಬಂದ ಮಕ್ಕಳು ಇಲ್ಲಿ ಕುಣಿದು ನಲಿದರು. ಮನಸೋಇಚ್ಛೆ ಸಂಭ್ರಮಿಸಿ ಮೈ ಮರೆತರು. ಇಂತಹ ಸಂತಸವನ್ನು ಉಣಬಡಿಸಿದ್ದು ‘ಮಕ್ಕಳ ದಿನಾಚರಣೆ’.
ಈ ವಿಶೇಷ ದಿನದ ಅಂಗವಾಗಿ ವಿವಿಧ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಸಹಸ್ರಾರು ಮಕ್ಕಳು ಇಲ್ಲಿ ಸೌಂದರ್ಯವನ್ನು ಕಂಡು ಹರ್ಷೋಲ್ಲಾಸದಲ್ಲಿ ಮಿಂದೆದ್ದರು.
ಮಕ್ಕಳ ದಿನಾಚರಣೆ ದಿನವಾದ ಗುರುವಾರ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೃಗಾಲಯ, ದಸರಾ ವಸ್ತುಪ್ರದರ್ಶನ, ಅರಮನೆಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಮಾತ್ರವಲ್ಲದೆ, ಜಿಲ್ಲೆಯ ವಿವಿಧೆಡೆಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರವಾಸಿ ತಾಣಗಳಿಗೆ ತಂಡೋಪತಂಡವಾಗಿ ಆಗಮಿಸಿ, ಒಂದು ದಿನದ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಮನಸಾರೆ ಸಂಭ್ರಮಿಸಿದರು.
ಕಡಲೆಕಾಯಿ ರಾಶಿಗೆ ಮುತ್ತಿಗೆ: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ದಸರಾ ವಸ್ತುಪ್ರದರ್ಶನಕ್ಕೆ ವೀಕ್ಷಿಸಲು ಬರುವ ಮಕ್ಕಳಿಗೆ ಬೆಳಗ್ಗೆ ಕಡಲೆಕಾಯಿ, ಸೌತೇಕಾಯಿ ಹಾಗೂ ಕಿತ್ತಳೆ ಹಣ್ಣನ್ನು ರಾಶಿ ಇಟ್ಟು, ಮಕ್ಕಳೇ ತೆಗೆದುಕೊಂಡು ಹೋಗುವಂತೆ ಸೂಚಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಮಕ್ಕಳು ಕೈಗೆ ಸಿಕ್ಕಷ್ಟು ಕಡಲೆಕಾಯಿ, ಸೌತೆಕಾಯಿ ಹಾಗೂ ಕಿತ್ತಳೆ ಹಣ್ಣನ್ನು ತೆಗೆದುಕೊಂಡರು. ಇವುಗಳನ್ನು ತಿನ್ನುತ್ತಲೇ ವಿವಿಧ ಮಳಿಗೆ ಭೇಟಿ ನೀಡಿದರು.
ಬೆಳಗ್ಗೆ 10.30ರಿಂದ ಇಲ್ಲಿಗೆ ಪ್ರವೇಶಿಸಿದ ಮಕ್ಕಳು ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿರುವ ವಿವಿಧ ಆಟೋಟ ರಿಯಾಯಿತಿ ದರದ ಟಿಕೆಟ್ ಪಡೆದು ಆಟ ಆಡಿದರು. ಜಾಯಿಂಟ್ ವ್ಹೀಲ್, ಉಯ್ಯಲೆ, ಟ್ರೈನ್ ಸೇರಿದಂತೆ ವಿವಿಧ ಆಟಗಳನ್ನು ಆಡುವ ಮೂಲಕ ನಲಿದರು.
ಜತೆಗೆ, ಚಿತ್ರಕಲಾ ಸ್ಪರ್ಧೆ, ವೇಷಭೂಷಣ, ಪ್ರಬಂಧ ಸ್ಪರ್ಧೆ, ನೆಹರು ಬಗ್ಗೆ ಭಾಷಣ, ನೃತ್ಯ ಕಾರ್ಯಕ್ರಮದಲ್ಲೂ ಮಕ್ಕಳು ಪಾಲ್ಗೊಂಡರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಗೆ ಮಧ್ಯಾಹ್ನದ ಊಟ, ಚಾಕಲೇಟ್, ಬಿಸ್ಕೆಟ್ ನೀಡಲಾಯಿತು. ಸಿಟಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಮಕ್ಕಳಿಗೆ ಉಚಿತವಾಗಿ 5 ಸಾವಿರ ಐಸ್‌ಕ್ರೀಮ್ ವಿತರಿಸಲಾಯಿತು.
ವಸ್ತುಪ್ರದರ್ಶನದ ಆವರಣದ ಪಿ.ಕಾಳಿಂಗರಾಗ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಹೆಚ್ಚಿನ ಮಕ್ಕಳು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ಜವಾಹರ್‌ಲಾಲ್ ನೆಹರು ಅವರ ಬಗ್ಗೆಯೂ ಮಾಹಿತಿ ನೀಡುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಮಕ್ಕಳ ದಿನಾಚರಣೆಯಿಂದ ನಗರ ಪ್ರದೇಶದೊಂದಿಗೆ ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ಆಗಮಿಸಿದ್ದಾರೆ ಎಂದರು.
ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಳಿಕ ದೇಶದ ಮೊದಲ ಪ್ರಧಾನಿಯಾಗಿ ಮಕ್ಕಳ ಬಗ್ಗೆ ಒಲವು ಪ್ರದರ್ಶಿಸುತ್ತಿದ್ದರು. ಮಕ್ಕಳೇ ದೇಶದ ಆಸ್ತಿ, ಅವರಿಗೆ ಉತ್ತಮ ಶಿಕ್ಷಣ ಕೊಟ್ಟರೆ ಮುಂದಿನ ದಿನದಲ್ಲಿ ದೇಶವನ್ನು ಸುಭದ್ರವಾಗಿ ಕಟ್ಟಬಹುದು ಎಂಬ ಸಂದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೃಗಾಲಯಕ್ಕೆ ಚಿಣ್ಣರ ಲಗ್ಗೆ
ಚಿಣ್ಣರ ದಂಡು ಚಾಮರಾಜೇಂದ್ರ ಮೃಗಾಲಯಕ್ಕೂ ಲಗ್ಗೆ ಇಟ್ಟಿದ್ದರು. ಇಲ್ಲಿರುವ ವನ್ಯಜೀವಿಗಳನ್ನು ವೀಕ್ಷಿಸಿ ಸಂಭ್ರಮಿಸಿತು
1ರಿಂದ 7ನೇ ತರಗತಿಯ ಮಕ್ಕಳಿಗೆ ಮೃಗಾಲಯ ವೀಕ್ಷಿಸಲು ಉಚಿತ ಪ್ರವೇಶಾವಕಾಶ ಕಲ್ಪಿಸಿಕೊಡಲಾಯಿತು. ಇದನ್ನು 1971 ಮಕ್ಕಳು ಸದ್ಬಳಕೆ ಮಾಡಿಕೊಂಡರು. 8ರಿಂದ 12ನೇ ತರಗತಿಯ ಮಕ್ಕಳಿಗೆ ಪ್ರವೇಶದ ದರದಲ್ಲಿ ರಿಯಾಯಿತಿ ನೀಡಲಾಗಿತ್ತು. ಇದರ ಪ್ರಯೋಜನವನ್ನು 3,917 ಮಕ್ಕಳು ಪಡೆದುಕೊಂಡರು.
ಹುಲಿ, ಸಿಂಹ, ಚಿಂಪಾಂಜಿ, ಹಾವು, ಚಿರತೆ, ಸೇರಿದಂತೆ ಪ್ರಾಣಿಗಳ ಬೋನಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿದ್ದರು. ಕೆಲ ಮಕ್ಕಳು ಪ್ರಾಣಿಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಅರಮನೆಗೂ ಬಂದ ಮಕ್ಕಳ ಸೇನೆ:
ಮೈಸೂರು ಅರಮನೆ ಮೇಲೆಯೂ ಚಿಣ್ಣರ ಸೇನೆ ದಾಳಿ ಮಾಡಿತು. ಇಲ್ಲಿಗೆ ಬಂದ ಮಕ್ಕಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ಹೂವು ಹಾಗೂ ಸಿಹಿ ನೀಡಿ ಬರಮಾಡಿಕೊಂಡರು. ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇದ್ದರು.
ಚಾಮುಂಡಿಬೆಟ್ಟಕ್ಕೂ ಭೇಟಿ:
ನಗರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಮಕ್ಕಳು ಚಾಮುಂಡಿಬೆಟ್ಟಕ್ಕೆ ತೆರಳಿದರು. ಇದರಿಂದ ಬೆಟ್ಟದಲ್ಲೂ ಮಕ್ಕಳ ದಟ್ಟಣೆ ಕಂಡು ಬಂತು.
ವಿದ್ಯಾರ್ಥಿನಿಯರ ಪ್ರವಾಸಕ್ಕೂ ಶಕ್ತಿ:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಲು ಶಕ್ತಿ ಯೋಜನೆ ನೆರವಾಯಿತು. ಇದರಿಂದ ವಿದ್ಯಾರ್ಥಿನಿಯರು ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂತಸಪಟ್ಟರು.